ಕಲಬುರಗಿ: ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಿಂದಲೂ ಹಿಂದಿ ಭಾಷೆ ಹೇರಿಕೆಯಿಂದ ಹಿಂದಿಯೇತರ ಭಾಷೆಗಳ ಮೇಲೆ ಪ್ರಹಾರ ನಡೆಯುತ್ತ ಬಂದಿದೆ. ಇದರ ವಿರುದ್ಧ ಹೋರಾಟ ರೂಪಿಸಲು ಈಗಾಗಲೇ ದ್ರಾವಿಡ ಭಾಷಾ ಒಕ್ಕೂಟ ರಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ರಸ್ತೆಯಲ್ಲಿನ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ರವಿವಾರ ನಡೆದ ಪ್ರಕಾಶನದ 2017ರ ಹತ್ತು ಕೃತಿಗಳ ಲೋಕಾರ್ಪಣೆ ಮತ್ತು 2015-2016ರ ಸಾಲಿನ ಪ್ರಶಸ್ತಿ ಪ್ರದಾನ ಮತ್ತು ದಶಮಾನೋತ್ಸವ ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಮಿಳುನಾಡಿನ ಚೆನ್ನೈನಲ್ಲಿ ಇತ್ತೀಚೆಗೆ ಹಿಂದಿಯೇತರ ಸಾಹಿತಿಗಳು ಹಾಗೂ ಚಿಂತಕರು ಸಭೆ ಸೇರಿ ದ್ರಾವಿಡ ಭಾಷಾ ಒಕ್ಕೂಟ ರಚಿಸುವ ಕುರಿತು ಚರ್ಚೆ ಮಾಡಲಾಗಿದ್ದು, ಒಕ್ಕೂಟ ರಚನೆ ನಂತರ ಹಿಂದಿಯೇತರ ಭಾಷೆಗಳ ನಡೆಯುತ್ತಿರುವ ಪ್ರಹಾರದ ವಿರುದ್ಧ ಹೋರಾಟ ರೂಪಿಸಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಾಗಿನಿಂದಲೂ ಇಡೀ ರಾಷ್ಟ್ರದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲಾಗುತ್ತಿದ್ದು, ಇದರಿಂದ ಹಿಂದಿಯೇತರ ಭಾಷೆಗಳಿಗೆ ತೊಂದರೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ| ಡಿ.ವಿ. ಗುರುಪ್ರಸಾದ ಮಾತನಾಡಿ, ಪ್ರತಿ ವರ್ಷ ಸುಮಾರು 6000 ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ತಿಂಗಳಿಗೆ 500 ಕೃತಿಗಳು ಬಿಡುಗಡೆ ಆಗುತ್ತಿವೆಯಾದರೂ ಪುಸ್ತಕ ನೋಡುವವರ ಸಂಸ್ಕೃತಿ ಹೆಚ್ಚಾಗುತ್ತಿದೆಯೇ ಹೊರತು ಪುಸ್ತಕ ಕೊಂಡು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಾಹಿತಿಗಳಾದ ಗೀತಾ ನಾಗಭೂಷಣ, ಚಂದ್ರಕಾಂತ
ಕರದಳ್ಳಿ ಇದ್ದರು.
ಡಾ| ಸ್ವಾಮಿರಾವ್ ಕುಲಕರ್ಣಿ ಅವರೂ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳು, ವಿಮರ್ಶಕರು ಪಾಲ್ಗೊಂಡಿದ್ದರು. ಡಾ| ಚಂದ್ರಕಲಾ ಬಿದರಿ ಕಾರ್ಯಕ್ರಮ ನಿರೂಪಿಸಿದರು.