ಪರ್ತ್, ಆಸ್ಟ್ರೇಲಿಯ : ಇಂಗ್ಲಂಡ್ – ಆಸ್ಟ್ರೇಲಿಯ ನಡುವಿನ 3ನೇ ಪರ್ತ್ ಟೆಸ್ಟ್‌ಗೆ ಇದೀಗ ಸ್ಪಾಟ್ ಫಿಕ್ಸಿಂಗ್ ಕಳಂಕ ತಟ್ಟಿದೆ. ಈ ಹಗರಣದಲ್ಲಿ ಓರ್ವ ಭಾರತೀಯ ಬುಕ್ಕಿ ಶಾಮೀಲಾಗಿರುವುದನ್ನು ಶಂಕಿಸಲಾಗಿದೆ.
ಬ್ರಿಟಿಷ್ ಸುದ್ದಿ ಪತ್ರಿಕೆಯೊಂದು ಈ ಗಂಭೀರ ಹಾಗೂ ಕಳವಳಕಾರಿ ವಿಷಯದ ಬಗ್ಗೆ ಬಾಂಬ್ ಸಿಡಿಸಿದೆ. ಉಭಯ ದೇಶಗಳ ಕ್ರಿಕೆಟ್ ಮುಖ್ಯಸ್ಥರು ಈ ಬೆಳವಣಿಗೆಯ ಬಗ್ಗೆ ಖೇದ, ಆಘಾತ, ಆಶ್ಚರ್ಯ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ “ಮಿಸ್ಟರ್ ಬಿಗ್’ ಸೇರಿದಂತೆ ಇಬ್ಬರು ಬುಕ್ಕಿಗಳು ಪರ್ತ್ ಟೆಸ್ಟ್‌ನ ಯಾವೆಲ್ಲ ಸೆಶನ್ಸ್‌ನ ಆಟಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬ ಮಾಹಿತಿಗಳನ್ನು ಮಾರುವ ಕೊಡುಗೆಯನ್ನು ಬೆಟ್ಟಿಗರಿಗೆ ನೀಡುವ ಲಾಲಸೆ, ಆಮಿಷವನ್ನು ತೋರಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಬೆಟ್ಟಿಂಗ್ ನಡೆದಿರುವುದಾಗಿ ವರದಿಯಾಗಿದೆ.
ವಿಶ್ವ ಕಪ್ ವಿಜೇತ ತಂಡದ ಓರ್ವ ಆಲ್ ರೌಂಡರ್ ಸಹಿತವಾಗಿ ಮಾಜಿ ಮತ್ತು ಹಾಲಿ ಅಂತಾರಾಷ್ಟ್ರೀಯ ಆಟಗಾರರು ಈ “ಸ್ಪಾಟ್ ಫಿಕ್ಸಿಂಗ್’ ಹಗರಣದಲ್ಲಿ ಕೆಲಸ ಮಾಡಿರುವುದಾಗಿ ಇಬ್ಬರಲ್ಲಿ ಒಬ್ಬ ಬುಕ್ಕಿ ಹೇಳಿಕೊಂಡಿದ್ದಾನೆ.
ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ “ಸೈಲೆಂಟ್ ಮ್ಯಾನ್’ ಎಂದೇ ಖ್ಯಾತನಾಗಿರುವ “ಫಿಕ್ಸರ್’ ಜತೆಗೆ ತಾವು ಸಂಪರ್ಕದಲ್ಲಿರುವುದಾಗಿ ಆ ಬುಕ್ಕಿ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಆದರೆ ಈ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಯಾವುದೇ ಆಸೀಸ್ ಮತ್ತು ಇಂಗ್ಲಂಡ್ ಕ್ರಿಕೆಟಿಗರು ಶಾಮೀಲಾಗಿರುವುದನ್ನು ಹೆಸರಿಸಲಾಗಿಲ್ಲ.
ಒಂದು ಓವರ್‌ನಲ್ಲಿ ಖಚಿತವಾಗಿ ಎಷ್ಟು ರನ್ ಹೊಡೆಯಲ್ಪಡುತ್ತದೆ ಮುಂತಾದ ಅನೂಹ್ಯ ವಿಷಯಗಳ ಬಗ್ಗೆಯೂ ಸುಮಾರು 1,40,000 ಪೌಂಡ್ (1,87,000 ಡಾಲರ್ ಅಥವಾ 1,58,000 ಯೂರೋ) ಪ್ರಮಾಣದಲ್ಲಿ ಮಾರುಕಟ್ಟೆ ಸ್ಪಾಟ್ ಫಿಕ್ಸ್ ಆಗಿರುತ್ತದೆ ಎಂದು ರಹಸ್ಯ ಮಾಹಿತಿಗಳನ್ನು ಉಲ್ಲೇಖೀಸಿ ಟ್ಯಾಬ್‌ಲಾಯ್ಡ ವರದಿ ಮಾಡಿದೆ.
ಈ ವರ್ಷ ಫೆಬ್ರವರಿಯಲ್ಲಿ ಯುಎಇ ಯಲ್ಲಿ ನಡೆದಿದ್ದ ಟಿ-20 ಲೀಗ್‌ಗೆ ಸ್ಪಾಟ್ ಫಿಕ್ಸಿಂಗ್ ಕಳಂಕ ತಟ್ಟಿತ್ತು. ಇಬ್ಬರು ಪಾಕ್ ಆಟಗಾರರಾದ ಶಾರ್ಜಿಲ ಖಾನ್ ಮತ್ತು ಖಲೀದ್ ಲತೀಫ್ ಅವರು ಸಿಕ್ಕಿಬಿದ್ದಿದ್ದರು. ಕೊನೆಗೂ ಇವರಿಬ್ಬರಿಗೂ ಐದು ವರ್ಷಗಳ ನಿಷೇಧ ಹೇರಲಾಗಿತ್ತು.