ಕಾಸರಗೋಡು: ಕಾಡುತ್ತಿದ್ದ ಅಸೌಕರ್ಯಗಳಿಗೆ, ದೂರುಗಳಿಗೆ ವಿದಾಯ ಹೇಳಿ, ನೂತನ ಸೌಲಭ್ಯಗಳೊಂದಿಗೆ ಸರ್ವಸಿದ್ಧವಾಗಿ ಕಾಸರಗೋಡು ಕ್ರೀಡಾ ಹಾಸ್ಟೆಲ್ ಮಿಂಚುತ್ತಿದೆ.
ನವೀಕರಣ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಮಂಜೂರು ಮಾಡಿದ್ದ 1.2 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಒಂದು ವರ್ಷದ ಅವಧಿಯಲ್ಲಿ ಕಟ್ಟಡ ನಿರ್ಮಾಣ ಪೂರ್ತಿ ಗೊಂಡಿದೆ.
ಆ. 11ರಂದು ನೂತನ ಹಾಸ್ಟೆಲ್‌ನ ಉದ್ಘಾಟನೆ ಜರಗಲಿದ್ದು, ರಾಜ್ಯ ಕ್ರೀಡಾ ಸಚಿವ ಇ.ಪಿ. ಜಯರಾಜನ್ ಉದ್ಘಾಟಿಸುವರು. ಜಿಲ್ಲೆಯಲ್ಲಿ ಅತ್ಯುತ್ತಮ ಕ್ರೀಡಾಳುಗಳಿದ್ದು, ಇವರಿಗೆ ಬೇಕಾದ ತರಬೇತಿ ಲಭಿಸದೇ ಇದ್ದುದು ದೊಡ್ಡ ಸಮಸ್ಯೆ ಯಾಗಿತ್ತು. ನೂತನ ಹಾಸ್ಟೆಲ್ ನಿರ್ಮಾಣ ಮೂಲಕ ಎಲ್ಲ ಸಮಸ್ಯೆಗಳಿಗೂ ಇತಿಶ್ರೀಯಾಗಲಿದೆ.
15 ವರ್ಷಗಳ ಹಿಂದೆ ನಿರ್ಮಿಸಿಲಾಗಿದ್ದ ಹಳೆಯ ಹಾಸ್ಟೆಲ್‌ನಲ್ಲಿ ಈಗ 45 ಮಂದಿ ಮಕ್ಕಳು ವಸತಿ ಹೂಡಿ ಕಲಿಕೆ ನಡೆಸುತ್ತಿದ್ದಾರೆ. ಪ್ರೌಢಶಾಲಾ ಮಟ್ಟದಿಂದ ಕಾಲೇಜು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇವರು ಅತ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್ ರಂಗದಲ್ಲಿ ಪ್ರತಿಭೆ ತೋರುತ್ತಿರುವ ಮಕ್ಕಳು.
ಕ್ರೀಡಾ ಹಾಸ್ಟೆಲ್ ನವೀಕರಣದ ಜತೆಯಲ್ಲಿ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೂತನ ಕ್ರೀಡಾ ವಿಭಾಗ ಈ ವರ್ಷ ಚಟುವಟಿಕೆ ಆರಂಭಿಸಲಿದೆ. 7ನೇ ತರಗತಿ ಮಲ ಯಾಳ ವಿಭಾಗದಲ್ಲಿ ಇದು ಶುರುವಾಗಲಿದೆ. ಇದಲ್ಲದೆ ಜಿಲ್ಲೆಯನ್ನು ಕ್ರೀಡಾ ವಲಯದಲ್ಲಿ ಮುನ್ನಡೆ ಸಾಧಿಸುವಂತೆ ನಡೆಸುವ ಚಟುವಟಿಕೆಗಳ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ., ಕ್ರೀಡಾ ಮಂಡಳಿ ಜಂಟಿ ವತಿಯಿಂದ ಜಿಲ್ಲಾ ಕ್ರೀಡಾಂಗಣ ನಿರ್ಮಾಣದ ಯೋಜನೆಯನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಅಳವಡಿಸಿ
ಜಾರಿಗೊಳಿಸಲಾಗುವುದು. ಕಿಫ್ ಬಿ ಯೋಜನೆಯಲ್ಲಿ ಅಳವಡಿಸಿ 30 ಕೋ.ರೂ. ವೆಚ್ಚದಲ್ಲಿ ತ್ರಿಕರಿಪುರದ ಕ್ರೀಡಾಂಗಣದ ಉದ್ಘಾಟನೆಯೂ ಆ.11ರಂದು ಸಚಿವ ಇ.ಪಿ.ಜಯರಾಜನ್ ನಿರ್ವಹಿಸುವರು.
ನೂತನ ಹಾಸ್ಟೆಲ್‌ನಲ್ಲಿ 60 ಮಂದಿಮಕ್ಕಳು ವಸತಿಹೂಡಿ ಕಲಿಕೆ ನಡೆಸುವ ಸೌಲಭ್ಯಗಳಿವೆ. ಮಕ್ಕಳಿಗೆ ಕಲಿಕೆಯ ಜತೆಗೆ ಹಾಸ್ಟೆಲ್ ಒಳಗಡೆಯೇ ಜಿಮ್ನಾಶಿಯಂ ಸಹಿತ ಸೌಲಭ್ಯಗಳು ಸಿದ್ಧವಾಗಿವೆ. ಈಗ ಎರಡು ಎಕ್ರೆ ಜಾಗದಲ್ಲಿ ಹಾಸ್ಟೆಲ್ ಕಟ್ಟಡ ಸಿದ್ಧಗೊಂಡಿದೆ. ಮಕ್ಕಳಿಗೆ ಬೇಕಾದ ಹಾಸುಗೆ, ತಲೆದಿಂಬು ಸಹಿತ ಅಗತ್ಯದ ಎಲ್ಲ ಸೌಲಭ್ಯಗಳನ್ನೂ ಕ್ರೀಡಾಮಂಡಳಿ ಒದಗಿಸಲಿದೆ. ಈಜು ಕೆರೆ, ಇಂಡೋರ್ ಕೋರ್ಟ್ ನಿರ್ಮಿಸುವ ಯೋಜನೆಯನ್ನೂ ಕ್ರೀಡಾ ಮಂಡಳಿ ಸರಕಾರಕ್ಕೆ ಸಲ್ಲಿಸಿದೆ.