Advertisement

ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

11:02 AM Dec 06, 2018 | Team Udayavani |

ದಾವಣಗೆರೆ: ಪ್ರತಿನಿತ್ಯ ಎಲ್ಲರೂ ಕ್ರೀಡೆ ಅಥವಾ ಗದಂತಹ ದೈಹಿಕ ಚಟುವಟಿಕೆಗೆ ಸ್ವಲ್ಪ ಸಮಯ ಮೀಸಲಿಟ್ಟಲ್ಲಿ ಸದೃಢ ಆರೋಗ್ಯದೊಂದಿಗೆ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬಹುದು ಎಂದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸಲಹೆ ನೀಡಿದ್ದಾರೆ.

Advertisement

ಬುಧವಾರ, 2018-19ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕ್ರೀಡೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಪ್ರತಿದಿನ ನಡಿಗೆ,
ಓಟ, ಯೋಗ ಸೇರಿದಂತೆ ಯಾವುದೇ ಶಿಸ್ತುಬದ್ಧ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.

ನಮಗೆ ಟೈಮ್‌ ಇಲ್ಲ ಎಂದೇಳದೆ, ಸಮಯ ಹೊಂದಾಣಿಕೆ ಮಾಡಿಕೊಂಡು ಪ್ರತಿದಿನ ಅರ್ಧ ಅಥವಾ ಒಂದು ಗಂಟೆ ಇಂತಹ ದೈಹಿಕ ಚಟುವಟಿಕೆಗೆ ಮೀಸಲಿಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆಯಲ್ಲದೆ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ ಎಂದರು.

ಇತ್ತೀಚೆಗೆ ಒತ್ತಡದ ಕಾರಣದಿಂದ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆ ಸಾಮಾನ್ಯವಾಗಿದೆ. ನಿಯಮಿತ ನಡಿಗೆ, ಕ್ರೀಡೆ ಇತರೆ ದೈಹಿಕ ಚಟುವಟಿಕೆಯಿಂದ ಈ ಸಮಸ್ಯೆ ದೂರ ಇರಿಸಬಹುದು. ಪ್ರತಿ ದಿನ ನಿಯಮಿತ ವಾಕಿಂಗ್‌ ಮಾಡುವುದರಿಂದ ರಕ್ತದೊತ್ತಡ ನಿವಾರಣೆ ಆಗಲಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌. ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಮಾನ್ಯ ಮನುಷ್ಯ ಸ್ವೀಕರಿಸುವ ಸವಾಲಿಗೂ, ಒಬ್ಬ ಕ್ರೀಡಾಪಟು ಸ್ವೀಕರಿಸುವ ಸವಾಲಿಗೂ ವ್ಯತ್ಯಾಸವಿದೆ. ಸ್ವೀಕರಿಸಿದ ಸವಾಲಿಗೆ ಬದ್ಧನಾಗಿ ಕ್ರೀಡಾಪಟು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸೋಲು ಅಥವಾ ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಬೇಕಾಗುತ್ತದೆ ಎಂದರು.
 
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಎಸ್‌.ಹಾಲೇಶಪ್ಪ ಮಾತನಾಡಿ, ಎಲ್ಲಾ ನೌಕರರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಹೊರಹಾಕಲು ಇದೊಂದು ಉತ್ತಮ ಅವಕಾಶವಾಗಿದೆ. ನೌಕರರು ನಿತ್ಯ ಕಡತ, ಕಚೇರಿ, ಕರ್ತವ್ಯದಲ್ಲಿ ಮುಳುಗುತ್ತಿದ್ದು, ಎರಡು ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೈತನ್ಯಶೀಲರಾಗಲು ಇದೊಂದು ಸದಾವಕಾಶವಾಗಿದೆ ಎಂದರು.

Advertisement

ಹಿಂದೆ ಹಳ್ಳಿಗಾಡಿನಲ್ಲಿ ನಡೆಯುತ್ತಿದ್ದ ವಿವಿಧ ಕ್ರೀಡೆಗಳು ಮೈಮರೆಯುವಂತೆ ಮಾಡುತ್ತಿದ್ದವು. ಈಗ ಅಂತಹ ಹಳ್ಳಿ ಆಟಗಳ ಸೊಗಡು ನಶಿಸುತ್ತಿರುವುದು ವಿಷಾದನೀಯ ಎಂದ ಅವರು, ಸ್ಪರ್ಧಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಿಸಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಗುಂಡು ಎಸೆಯುವ ಮೂಲಕ ಕ್ರೀಡೆಗೆ ಚಾಲನೆ ನೀಡಿದರು. ಕರಾಸನೌ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಕ್ರೀಡಾ ಕಾರ್ಯದರ್ಶಿಗಳಾದ ವಿ.ಧನಂಜಯ, ಸಿ.ಕೃಷ್ಣಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿ.ಶಾಂತಲಾ, ಸಿ.ಜಿ.ಜಗದೀಶ್‌ ಕೂಲಂಬಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್‌, ಇತರೆ ಪದಾಧಿಕಾರಿಗಳು ಇದ್ದರು. ಕರಾಸನೌ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಪರಶುರಾಮಪ್ಪ ಸ್ವಾಗತಿಸಿದರು. ಖಜಾಂಚಿ ಬಿ. ಮಂಜುನಾಥ್‌ ವಂದಿಸಿದರು. ಉಪನ್ಯಾಸಕ ಸೋಮಶೇಖರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next