ಹಾವೇರಿ: ಚನ್ನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳ ಉದ್ಘಾಟನೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮಂಜೂರಿಯಾದ ಕ್ರೀಡಾ ಸಾಮಗ್ರಿಗಳ ವಿತರಣೆ ಸಮಾರಂಭ ಇತ್ತೀಚೆಗೆ ನಡೆಯಿತು.
ಕ್ರೀಡಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜ ಕಲಕೋಟಿ, ಚನ್ನೂರ ಗ್ರಾಮದ ಸರ್ಕಾರಿ ಶಾಲೆಗೆ ಈ ಬಾರಿಯ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಹಾಗೂ ಕಟ್ಟಡ ದುರಸ್ತಿ ಕೆಲಸ ಮಾಡಲಾಗುವುದು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯ ಅಭಿವೃದ್ಧಿ ಹೊಂದಬೇಕು. ವಿದ್ಯಾರ್ಥಿಗಳು ಪಾಠದ ಜತೆ ಕ್ರೀಡೆಯಲ್ಲಿಯೂ ಪಾಲ್ಗೊಳ್ಳುವುದರಿಂದ ಮನುಷ್ಯನ ಆರೋಗ್ಯ ಸದೃಢವಾಗುತ್ತದೆ ಹಾಗೂ ಬುದ್ಧಿ ಬೆಳೆವಣಿಗೆ ಹೊಂದಲು ಸಹಕಾರಿ ಆಗುತ್ತದೆ ಎಂದರು.
ಎಲ್ಕೆಜಿ ತರಗತಿಯ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಸದಸ್ಯ ಎಂ.ಎಂ. ವಗ್ಗಣ್ಣವನರ ನೆರವೇರಿಸಿದರು ಹಾಗೂ ಯು.ಕೆ.ಜಿ ತರಗತಿಯ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭಣ್ಣ ಪಟ್ಟಣದ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಪಠ್ಯ ಪುಸ್ತಕಗಳ ದಾನಿಗಳಾದ ಬಸವರಾಜ ಮಠದ ಮತ್ತು ಗ್ರಾಪಂ ಸದಸ್ಯರಾದ ಬಸವಣ್ಣೆಪ್ಪ ಗೌರಿಮನಿ, ಹೊನ್ನಪ್ಪ ಬಾರ್ಕಿ, ಚನ್ನವ್ವ ಶಿರಮಾಪೂರ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಫಕ್ಕಿರಯ್ಯ ಮಠದ, ಮೌನೇಶ ಬಡಿಗೇರ, ಸುರೇಶ ಇಟಗಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯ ಜಯಣ್ಣ ಚುರ್ಜಿ ಸ್ವಾಗತಿಸಿದರು. ಸಹ ಶಿಕ್ಷಕ ಈರಣ್ಣ ಬ್ಯಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿಯರಾದ ಸಂಗೀತಾ ವಾಲಿಕಾರ ಹಾಗೂ ತರಗತಿ ಶಿಕ್ಷಕಿಯರಾದ ರಂಜನಾ ಮರಿಗೌಡರ ಇದ್ದರು.