ಮೈಸೂರು: ಮನುಷ್ಯ ದೈನಂದಿನ ಒತ್ತಡದ ಬದುಕಿನಿಂದ ಹೊರಬರಲು ಕ್ರೀಡೆ ಸಹಕಾರಿ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಂ.ಚಂದ್ರಕುಮಾರ್ ಹೇಳಿದರು. ಎಸ್‌ಜೆಸಿಇ ಥ್ರೋ ಬಾಲ್ ಮೈದಾನದಲ್ಲಿ ಸೋಮವಾರ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಆಯೋಜಿಸಿದ್ದ ಪುರುಷರ ಬಾಸ್ಕೆಟ್ ಬಾಲ್ ಮತ್ತು ಮಹಿಳಾ ಥ್ರೋ ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ತೊಡಗಿ: ಪ್ರಸ್ತುತ ಎಲ್ಲರೂ ಒತ್ತಡದ ಬದುಕು ದೂಡುತ್ತಿದ್ದಾರೆ. ಇದರಿಂದಾಗಿ ಚಿಕ್ಕ ವಯಸ್ಸಿಗೆ ವಿವಿಧ ಕಾಯಿಲೆಗಳಿಗೆ ತುತ್ತಾಗುವಂತಹ ಪರಿಸ್ಥಿತಿ ಎದುರಾಗಿದೆ. ಒತ್ತಡ ನಿವಾರಣೆ ಮಾಡಿಕೊಳ್ಳಲು ಮತ್ತು ದೈಹಿಕ, ಮಾನಸಿಕ ನೆಮ್ಮದಿಗೆ ತಮ್ಮ ಆಸಕ್ತಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕಿದೆ ಎಂದು ತಿಳಿಸಿದರು. ಇಂದು ಪ್ರತಿಯೊಬ್ಬರೂ ಮೊಬೈಲ್ ಸೇರಿ ಯಂತ್ರಗಳನ್ನು ಹೆಚ್ಚು ಅವಲಂಬಿಸಿದ್ದೇವೆ.
ಇದು ಸರಿಯಲ್ಲ. ಸಾಧ್ಯವಾದಷ್ಟು ದೇಹವನ್ನು ದಂಡಿಸಬೇಕು. ಇಲ್ಲವಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಪ್ರೊ.ಎಲ್.ಜವಹಾರ್ ನೇಸನ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು.
ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೇ, ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ನಗರದ ಎಟಿಎಂಇ, ಎನ್‌ಐಇ, ಎನ್‌ಐಎಫ್ಐ, ವಿವಿಐಪಿ ಸೇರಿ ವಿವಿಧ ಕಾಲೇಜುಗಳಿಂದ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ 8 ತಂಡ, ಥ್ರೋ ಬಾಲ್ ಪಂದ್ಯಾವಳಿಗೆ 9 ತಂಡ ಭಾಗವಹಿಸಿದ್ದವು.
ಫಲಿತಾಂಶ: ಪುರುಷರ ವಿಭಾಗದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಎಂಐಸಿಎ ತಂಡ 41-25ರ ಅಂತರದಲ್ಲಿ ಎನ್‌ಐಇ ವಿರುದ್ಧ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಎಂಐಸಿಎ ತಂಡ 48-10ರ ಅಂತರದಲ್ಲಿ ವಿವಿಸಿಇ ವಿರುದ್ಧ ಜಯಭೇರಿ ಬಾರಿಸಿದರೆ, 2ನೇ ಸೆಮಿಫೈನಲ್‌ನಲ್ಲಿ ಎನ್‌ಐಇ ತಂಡ 32-18ರ ಅಂತರದಲ್ಲಿ ಎಟಿಎಂಇ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ: ಮಹಿಳಾ ವಿಭಾಗದಲ್ಲಿ ನಡೆದ ಥ್ರೋಬಾಲ್ ಅಂತಿಮ ಪಂದ್ಯದಲ್ಲಿ ವಿವಿಸಿಇ ತಂಡ 2-1(15-25, 26-24, 25-21) ಅಂಕ ಪಡೆಯುವ ಮೂಲಕ ಎನ್‌ಐಇ ತಂಡವನ್ನು ಮಣಿಸಿತು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಎನ್‌ಐಇ ತಂಡ 2-1(25-15, 23-25, 25-19)ರ ಅಂತರದಲ್ಲಿ ಎಸ್‌ಜೆಸಿಇ ತಂಡವನ್ನು ಸೋಲಿಸಿತು. 2ನೇ ಸೆಮಿಫೈನಲ್‌ನಲ್ಲಿ ವಿವಿಸಿಇ ತಂಡ 2-0(25-19, 25-22) ಅಂತರದಲ್ಲಿ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯು ತಂಡವನ್ನು ಮಣಿಸಿ, ಜಯ ಸಾಧಿಸಿತು.