Advertisement

50 ಸಾವಿರ ಕಲಾವಿದರಿಂದ ಶೋಭಾಯಾತ್ರೆ

02:52 PM Dec 22, 2018 | |

ವಿಜಯಪುರ: ದಾಖಲೆ ಬರೆಯಲು ಮುಂದಾಗಿರುವ ಭಾರತೀಯ ಸಂಸ್ಕೃತಿ ಉತ್ಸವದ ಸಾಂಸ್ಕೃತಿಕ ವಿಭಾಗ ಹಲವು ವಿಶಿಷ್ಟತೆ ಮೈಗೂಡಿಸಿಕೊಂಡಿದೆ. ಡಿ. 24ರಂದು ನಡೆಯುವ ಬೃಹತ್‌ ಶೋಭಾಯಾತ್ರೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 21 ಕಲಾ ತಂಡಗಳ 50 ಸಾವಿರ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

Advertisement

ಕಗ್ಗೊಡ ಗ್ರಾಮದಲ್ಲಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ಡಿ. 24ರಂದು ವಿಜಯಪುರ ನಗರದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ದೇಶದ ರಾಜ್ಯಗಳ ಕಲಾತಂಡಗಳು ಪಾಲ್ಗೊಳ್ಳಲಿವೆ. ಕಾರ್ಯಕ್ರಮ ಸಂಘಟಿಸುತ್ತಿರುವ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜಾನಪದ ಕಲಾ ಪ್ರಕಾರಗಳಾದ 101 ಕರಡಿ ಮಜಲು, 101 ಡೊಳ್ಳು ಕುಣಿತ, ಹಲಗೆ ಮಜಲು, ಚೌಡಕಿ ಮೇಳ, ಲಂಬಾಣಿ ನೃತ್ಯ, ಸುಡುಗಾಡು ಸಿದ್ದರ ಮೈ ಜುಮ್ಮೆನಿಸುವ ನೋಟ, ನವೀನ ಮಾದರಿ ಹೆಜ್ಜೆ ಮೇಳ, ಸಂಬಾಳ ವಾದನ, ಕುದುರೆ ಕುಣಿತ, ತಾಸೆ ವಾದನ, ಗಾರುಡಿ ಗೊಂಬೆ, ದೊಡ್ಡಾಟ ಮೇಳದ ವೇಷಧಾರಿಗಳು, ಭಜನಾ ಕುಣಿತ, ಜಾಂಜ್‌ ಪತಕ, ವೀರ ಗಾಸೆ, ದುರುಗ ಮುರುಗಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯ ಪಲ್ಲಕ್ಕಿಗಳು, ನಂದಿಕೋಲು, ನಗಾರಿ ತಂಡ, ಕಥಕ್ಕಳಿ, ಪೂಜಾ ಕುಣಿತ, ಸೋಮನ ಕುಣಿತ, ಹಗಲು ವೇಷಗಾರರ ತಂಡಗಳು ಸೇರಿದಂತೆ 120 ಕಲಾ ತಂಡಗಳ 10 ಸಾವಿರ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಇದರ ಹೊರತಾಗಿಯೂ ಅವಳಿ ಜಿಲ್ಲೆಗಳ ಶಾಲೆಗಳು ಮಾತ್ರವಲ್ಲದೇ ಕಲಬುರಗಿ ಸೇರಿ ನೆರೆಯ ಹಲವು ಜಿಲ್ಲೆಗಳ ನೂರಾರು ಶಾಲೆಗಳ ಸುಮಾರು 30 ಸಾವಿರ ಮಕ್ಕಳು ವಿವಿಧ ಕಲಾ ಪ್ರದರ್ಶನದ ಮೂಲಕ ಮೆರವಣಿಗೆಗೆ ಮೆರುಗು ನೀಡಲಿದ್ದಾರೆ. ಇನ್ನು ಕಗ್ಗೋಡ ಗ್ರಾಮದಲ್ಲಿ 8 ದಿನ ನಡೆಯುವ ಬೃಹತ್‌ ಕಾರ್ಯಕ್ರಮದಲ್ಲಿ ನಿತ್ಯವೂ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆಳ್ವಾಸ್‌ ಸಂಸ್ಥೆಯ 300 ಕಲಾವಿದರು, ಕನ್ಹೆರಿಯ 300 ಕಲಾವಿದರು ಸೇರಿ ವಿವಿಧ ಕಲಾ ಪ್ರಕಾರಗಳ ವಿವಿಧ ಕಲಾವಿದರ ತಂಡ ಕಗ್ಗೊಡ ಗ್ರಾಮದಲ್ಲಿ ವೇದಿಕೆ ಪ್ರದರ್ಶನ ನೀಡಲಿವೆ. ಇದರಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಕೊಲ್ಲಾಪುರದ ಕಲಾವಿದರ ತಂಡ ಛತ್ರಪತಿ ಶಿವಾಜಿ ಅವರ ಜೀವನ ಚರಿತ್ರೆ ನೈಜವಾಗಿ ಕಟ್ಟಿಕೊಡುವ ನಾಟಕದಲ್ಲಿ 300ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ನಾಟಕದಲ್ಲಿ ಶಿವಾಜಿ ಅವರ ಸಾಮ್ರಾಜ್ಯದ ಪರಿಕಲ್ಪನೆಯನ್ನು ಮರು ಸೃಷ್ಟಿಸಲು ಆನೆ, ಒಂಟೆ, ಕುದುರೆಗಳು ವೇದಿಕೆ ಏರುತ್ತಿರುವುದು ವಿಶೇಷ.

ಮತ್ತೂಂದೆಡೆ 8 ದಿನಗಳಲ್ಲಿ 7 ದಿನ ನಿತ್ಯವೂ ಜಿಲ್ಲೆಯ 13 ಶಾಲೆಗಳ 1 ಸಾವಿರ ಮಕ್ಕಳ ಏಕ ಕಾಲಕ್ಕೆ ಕಾರ್ಯಕ್ರಮ ವಿಷಯಗಳ ಮೇಲೆ ರಚಿತವಾಗಿರುವ ಗೀತೆಗಳನ್ನು ಹಾಡಲಿದ್ದಾರೆ. ಒಂದು ದಿನ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶಾಲೆಗಳ 1 ಸಾವಿರ ಮಕ್ಕಳು ಗೀತೆ ಹಾಡಲಿದ್ದಾರೆ. ಇದಲ್ಲದೇ ಭವಿಷ್ಯದಲ್ಲಿ ಸೇಡಂನಲ್ಲಿ 5000 ಮಕ್ಕಳಿಂದ ಏಕ ಕಾಲಕ್ಕೆ ಭಾರತೀಯ ಸಾಂಸ್ಕೃತಿಕ ಉತ್ಸವದ ಗೀತೆಗಳನ್ನು ಹಾಡಿಸಿ ದಾಖಲೆ ನಿರ್ಮಿಸಲು ಕಗ್ಗೊಡ ಗ್ರಾಮದಲ್ಲೇ ಪ್ರಯೋಗ ನಡೆಸಲಾಗುತ್ತಿದೆ.

Advertisement

ಭಾರತ ವಿಕಾಸ ಸಂಗಮ ಸಂಸ್ಥೆ ಮೂಲಕ ಕಗ್ಗೋಡ ಗ್ರಾಮದಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸುಮಾರು 50 ಸಾವಿರ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಅನ್ಯರಾಜ್ಯಗಳ ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದು ಈ ಸಂಖ್ಯೆ ಇನ್ನೂ ಹೆಚ್ಚು ಸಾಧ್ಯತೆ ಇದೆ.
ಬಸವರಾಜ ಪಾಟೀಲ ಸೇಡಂ, 

Advertisement

Udayavani is now on Telegram. Click here to join our channel and stay updated with the latest news.

Next