Advertisement

ಸರ್ಕಾರಿ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷ್‌ ಕ್ಲಾಸ್‌: ಶಿಕ್ಷಣ ಇಲಾಖೆಯಿಂದ ಹೊಸ ಪ್ರಯತ್ನ

05:58 PM May 23, 2022 | Team Udayavani |

ದಾವಣಗೆರೆ: ರಾಜ್ಯದ ಸರ್ಕಾರಿ ಶಾಲೆ ಮಕ್ಕಳಲ್ಲಿ ಇಂಗ್ಲಿಷ್‌ ಭಾಷಾ ಸಂವಹನ ಕೌಶಲ್ಯ ಬೆಳೆಸಲು ಇದೇ ಮೊದಲ ಬಾರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಾರದಲ್ಲಿ ಒಂದು ದಿನ ಸ್ಪೋಕನ್ ಇಂಗ್ಲಿಷ್‌ ತರಗತಿ ನಡೆಸಲು ನಿರ್ಧರಿಸಿದೆ.

Advertisement

ಪ್ರಸಕ್ತ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಶಾಲಾ ವಿಶೇಷ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಪೋಕನ್ ಇಂಗ್ಲಿಷ್‌ ತರಗತಿಯನ್ನು ಸೇರಿಸಲಾಗಿದ್ದು 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ದಿನ 40 ನಿಮಿಷಗಳ ತರಗತಿ ನಡೆಸಲು ಯೋಜಿಸಿದೆ. ಈ ವಿಶೇಷ ತರಗತಿಗೆ ಬೇಕಾಗುವ ನ್ಪೋಕನ್‌ ಇಂಗ್ಲಿಷ್‌ ಕೈಪಿಡಿಯನ್ನು ಸರ್ಕಾರಿ ಪ್ರಾಥಮಿಕ ಶಾಲಾ ಆಂಗ್ಲ ಭಾಷಾ ಸಂಪನ್ಮೂಲ ಶಿಕ್ಷಕರ ತಂಡ ದಿಂದ ತಯಾರಿಸಿಕೊಳ್ಳಲು ಸೂಚನೆ ನೀಡಿದೆ.

ಪ್ರಸ್ತುತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್‌ ಕಲಿಕೆ ಸವಾಲಾಗಿರುವ ಪ್ರಯುಕ್ತ ಪಿಯುಸಿ ವಿಜ್ಞಾನ ವ್ಯಾಸಂಗದ ನಂತರದ ಜೆಇಇ, ಎನ್‌ಇಇಟಿ, ಸಿಇಟಿನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರುಸುವುದು ಸವಾಲಾಗಿದೆ. ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಯುವಂತೆ ಸಹಾಯಕವಾಗಬಲ್ಲ ರೀತಿಯಲ್ಲಿ ನ್ಪೋಕನ್‌ ಇಂಗ್ಲಿಷ್‌ ಕೈಪಿಡಿ ತಯಾರಿಸಬೇಕು.

ಇದರಲ್ಲಿ ವಿದ್ಯಾರ್ಥಿಗಳು Conversation, dialogues, script, role play, story telling, situation explanation, experience sharing ನಂಥ ಚಟುವಟಿಕೆಗಳನ್ನು ಅಳವಡಿಸಬೇಕು. ಬೋಧನಾವಧಿಗೆ ತಲಾ ಒಂದು ಇಂಗ್ಲಿಷ್‌ ಚಟುವಟಿಕೆ ರಚಿಸಿ ಕಡ್ಡಾಯವಾಗಿ ವಾರದಲ್ಲಿ ಒಂದು ಅವಧಿ (ಪ್ರತಿ ಶನಿವಾರದ ಮೂರನೇ ಅವಧಿ ಆಂಗ್ಲ ಭಾಷೆ ಹೊರತುಪಡಿಸಿ) ಇತರ ಭಾಷೆಯಲ್ಲಿ ಮಾತನಾಡದಂತೆ ನಿರ್ಣಯಿಸಿಕೊಂಡು ಸಂಪೂರ್ಣ ಅವಧಿ ವಿದ್ಯಾರ್ಥಿಗಳೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತ ಸ್ಪೋಕನ್ ಇಂಗ್ಲಿಷ್‌ ತರಗತಿ ನಡೆಸಬೇಕು.

ಶಾಲೆಯ ಇಂಗ್ಲಿಷ್‌ ಭಾಷಾ ಶಿಕ್ಷಕರಿಂದಲೇ ಈ ತರಬೇತಿ ನಡೆಸಬೇಕು. ಅಗತ್ಯ ಮತ್ತು ಅವಕಾಶಗಳು ಇದ್ದಲ್ಲಿ ಬಾಹ್ಯವಾಗಿಯೂ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದೆಂದು ಇಲಾಖೆ ಸೂಚಿಸಿದೆ.

Advertisement

ಮೀನಾ ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳ ತಂಡ ರಚಿಸಿ, ಶಾಲೆಯ ಸಂದರ್ಶನಾರ್ಥಿಗಳಿಗೆ ಶಾಲೆಯ ಕುರಿತು ಸಮಗ್ರವಾಗಿ ಆಂಗ್ಲ ಭಾಷೆಯಲ್ಲಿ ಪರಿಚಯಿಸುವುದನ್ನು ಕಲಿಸಬೇಕು. ಎಲ್‌ಕೆಜಿಯಿಂದ ನಲಿ-ಕಲಿ ತರಗತಿಗಳಿಗೆ ವಿವಿಧ ರೀತಿಯ ಚಾರ್ಟ್‌ಗಳನ್ನು ಫ್ಲೆಕ್ಸ್‌ನಲ್ಲಿ ರಚಿಸಿ ತಿಳಿವಳಿಕೆ ನೀಡಬೇಕು. ಉದಾಹರಣೆಗೆ ಮಾನವ ಶರೀರದ ಭಾಗಗಳು, ಹಣ್ಣುಗಳು, ತರಕಾರಿಗಳು, ಬಣ್ಣಗಳು, ವಾಹನಗಳು, ಇತರೆ ಚಿತ್ರ ಹಾಗೂ ಭಾಗಗಳನ್ನು ಗುರುತಿಸಿ, ಹೆಸರು ದಾಖಲಿಸದೆ ಖಾಲಿ ಬಿಟ್ಟು ಸೂಕ್ತ ಆಂಗ್ಲ, ಹಿಂದಿ ಪದಗಳನ್ನು ಆಯ್ದು ಆ ಖಾಲಿ ಜಾಗದಲ್ಲಿ ಜೋಡಿಸಲು ತಿಳಿಸುವ ಚಟುವಟಿಕೆ ನಿರ್ವಹಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಹಾಗೂ ಹಿಂದಿ ಭಾಷಾ ಪದಗಳ ಬಳಕೆಯು ಸುಲಲಿತವಾಗುತ್ತದೆ ಎಂದು ಇಲಾಖೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಇಂಗ್ಲಿಷ್‌ ಪರಿಚಯಾತ್ಮಕ ಭಾಷೆಯಾಗಿ ಒಂದನೇ ತರಗತಿಯಿಂದಲೇ ವಿಷಯವಿದೆ. ಆದರೆ, ಸರ್ಕಾರಿ ಶಾಲಾ ಮಕ್ಕಳು ಸಹ ಕಾನ್ವೆಂಟ್‌ ಮಕ್ಕಳಂತೆ ಸುಲಲಿತವಾಗಿ ಇಂಗ್ಲಿಷ್‌ ಮಾತನಾಡುವುದನ್ನು ರೂಢಿ ಮಾಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಇದು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

  • ಕಾನ್ವೆಂಟ್‌ ಮಕ್ಕಳಂತೆ ಸುಲಲಿತ ಇಂಗ್ಲಿಷ್‌ ಸಂವಹನಕ್ಕೆ ಯೋಜನೆ
  • ವಾರಕ್ಕೊಂದು ತರಗತಿ ಸಂಪೂರ್ಣ ಇಂಗ್ಲಿಷ್‌ಮಯ

ಇದೇ ವರ್ಷ ಮೊದಲ ಬಾರಿಗೆ ಇಲಾಖೆ ಸ್ಪೋಕನ್ ಇಂಗ್ಲಿಷ್‌ ತರಗತಿಯನ್ನು ವಿಶೇಷ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಿದ್ದು ಇದು ಭಾಷಾ ಕಲಿಕೆಗೆ ಪ್ರೋತ್ಸಾಹದಾಯಕ ಹಾಗೂ ಪರ್ಯಾಯ ಮಾರ್ಗವಾಗ ಲಿದೆ. ಶಿಕ್ಷಕರು ವಿಶೇಷ ಆಸಕ್ತಿ ವಹಿಸಿದರೆ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುವುದು ಸುಲಲಿತವಾಗಲಿದೆ. -ಎಚ್‌.ಕೆ. ಲಿಂಗರಾಜ್‌, ಪ್ರಾಚಾರ್ಯರು, ಡಯಟ್‌, ದಾವಣಗೆರೆ

●ಎಚ್‌.ಕೆ.ನಟರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next