Advertisement

ಧರ್ಮಗಳ ನಡುವೆ ಒಡಕು ಮೂಡಿಸಿದ್ದೇ ಸಾಧನೆ

03:54 PM Mar 15, 2018 | Team Udayavani |

ಕಲಬುರಗಿ: ಅಹಿಂದ ಹೆಸರು ಹೇಳಿಕೊಂಡು ಧರ್ಮ-ಧರ್ಮಗಳ ನಡುವೆ ಒಡಕು ಮೂಡಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನೆ ಎಂದು ಕೇಂದ್ರದ ಮಾಜಿ ಸಚಿವೆ, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಡಿ. ಪುರಂದೇಶ್ವರಿ ಟೀಕಿಸಿದರು.

Advertisement

ಬುಧವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಲಬುರಗಿ ದಕ್ಷಿಣ ಮಂಡಲದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿಯುವ ಈ ಸಂದರ್ಭದಲ್ಲಿ ಅಹಿಂದ ದೂರವಾಗುವ ಭಯ ಕಾಡುತ್ತಿದೆ ಎನ್ನುತ್ತಿದ್ದಾರೆ. ಧರ್ಮ-ಧರ್ಮಗಳ ನಡುವೆ ಒಡಕು ತರದಿದ್ದಲ್ಲಿ ಇಂತಹ ಭಾವನೆ ಬರುತ್ತಿರಲಿಲ್ಲ ಎಂದು ವಾಗ್ಧಾಳಿ ನಡೆಸಿದರು. 

ಕಾಂಗ್ರೆಸ್‌ ಪಕ್ಷ ಹಣ, ತೋಳ್ಬಲದಿಂದ ಚುನಾವಣೆ ಗೆಲ್ಲುವುದಾದರೆ ಬಿಜೆಪಿ ಕಾರ್ಯಕರ್ತರ ಬಲದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಕಾರ್ಯಕರ್ತರು ಹನುಮಂತನ ಹಾಗೆ ಶಕ್ತಿವಂತರು. ಅವರು ಸೇವಾ ನಿಷ್ಠೆಯಿಂದ ದುಡಿದಲ್ಲಿ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
 
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ತ್ರಿಪುರಾದಲ್ಲಿ ಪಕ್ಷದ ಅಸ್ತಿತ್ವವೇ ಇರಲಿಲ್ಲ. ಆದರೆ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದಲ್ಲಿ ಪಕ್ಷಕ್ಕೆ ನೆಲೆ ಇದೆ. ಹೀಗಾಗಿ ಅಧಿಕಾರಕ್ಕೆ ಬರುವಲ್ಲಿ ಪ್ರತಿಯೊಬ್ಬ
ಕಾರ್ಯಕರ್ತರು ಏಳು ಮನೆಯ 30 ಮತಗಳನ್ನು ಪಕ್ಷಕ್ಕೆ ದೊರಕುವಲ್ಲಿ ಶ್ರಮಿಸಿದರೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. 

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡುವುದರೊಂದಿಗೆ ದೇಶದಲ್ಲಿ 22ನೇ ಬಿಜೆಪಿ ಸರ್ಕಾರವಾಗಿ ಕರ್ನಾಟಕ ಹೊರ ಹೊಮ್ಮಲಿದೆ. 
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಅವರು ಹೇಳಿರುವ 19 ಅಂಶಗಳನ್ನು ಪಾಲನೆ ಮಾಡಲಾಗುತ್ತಿದೆ. ದಕ್ಷಿಣದಲ್ಲಿ ಕಳೆದ ಸಲ ಬಿಜೆಪಿ 10 ಸಾವಿರ ಮತಗಳ ಅಂತರದಿಂದ ಗೆದ್ದಿತ್ತು. ಈ ಸಲ ಅಂತರ ಹೆಚ್ಚಳವಾಗಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
 
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಕಲಬುರಗಿ ಸ್ಮಾರ್ಟ ಸಿಟಿಯನ್ನಾಗಿಸಲು ಅವಿರತವಾಗಿ ಶ್ರಮಿಸಲಾಗುವುದು ಎಂದು ಶಾಸಕ ರೇವೂರ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌ ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಪಕ್ಷದ ಮುಖಂಡರಾದ ತುಕಾರಾಮ ಶೆಟ್ಟಿ, ಮಹಾಂತಗೌಡ ಪಾಟೀಲ್‌, ವಿದ್ಯಾಸಾಗಾರ ಶಾಬಾದಿ, ರಾಜಗೋಪಾಲರೆಡ್ಡಿ, ಸಂಗಮೇಶ ರಾಜೋಳೆ, ಆರ್‌.ಎಸ್‌. ಪಾಟೀಲ, ದತ್ತಾತ್ರೇಯ ತುಗಾಂವ, ರಾಜು ವಾಡೇಕರ್‌, ದಯಾಘನ್‌ ಧಾರವಾಡಕರ್‌, ಧರ್ಮಣ್ಣ ಇಟಗಾ ಮುಂತಾದವರಿದ್ದರು. ಶ್ರೀನಿವಾಸ ದೇಸಾಯಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next