ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುವಾಗ ಕೇವಲ ನಾಲ್ಕು ದಿನಗಳ ಹಿಂದೆ ಅದೇ ಛತ್ರುವಿನಲ್ಲಿ ನಾವು ಕಳೆದಿದ್ದ ರಾತ್ರಿ ನೆನಪಾಯಿತು. ಸ್ಪಿತಿ ಕಣಿವೆಯಲ್ಲಿ ಹಿಮಾಲಯದ ಸೊಗಸನ್ನು ನೋಡಬೇಕು ಅನಿಸಿದ್ದು ಕಳೆದ ಜೂನ್ ನಲ್ಲಿ. 1966 ರಲ್ಲಿ ಅಪಘಾತಕ್ಕೆ ಈಡಾಗಿದ್ದ ಭಾರತೀಯ ವಾಯು ಸೇನೆಯ ವಿಮಾನದಲ್ಲಿದ್ದ ಇಬ್ಬರು ಸೈನಿಕರ ಶವಗಳು ಸ್ಪಿತಿಯ ಕಣಿವೆಯಲ್ಲಿ ಸಿಕ್ಕಿವೆ ಎಂಬ ಸುದ್ದಿ ಪ್ರಕಟವಾದಾಗ. ನೆತ್ತಿಯಲ್ಲಿ ಹಿಮ ಕಿರೀಟ ಧರಿಸಿದ್ದ ನೂರಾರು ಶಿಖರಗಳಲ್ಲಿ ಆ ಸೈನಿಕರ ಶವ ಪತ್ತೆಯಾದ ಶಿಖರವನ್ನು ಹುಡುಕಲು ಸಾಧ್ಯವೇ ಇರಲಿಲ್ಲ. ಸ್ಪಿತಿಗೆ ಬರುವ ಗಳಿಗೆ ಈಗ ಕೂಡಿ ಬಂದಿತ್ತು. ಆದರೆ ಸ್ಪಿತಿಯೆಂದರೆ ಇಂತಹ ದುರ್ಗಮ ಕಂದರಗಳ ನಡುವೆ ಎತ್ತಿ ಕುಕ್ಕಿ ಕುಣಿಸಿ ಮಣಿಸುವ ಹಾದಿಯೆಂದು ನಾವು ಕನಸಿನಲ್ಲಿಯೂ ಎಣಿಸಿರಲಿಲ್ಲ . ಸ್ಪಿತಿಯೆಂದರೆ ಮಧ್ಯದ ಭೂಮಿ ಎಂದು ಅರ್ಥ. ಟಿಬೆಟ್ ಮತ್ತು ಭಾರತದ ನಡುವಿನ ಪ್ರದೇಶ.
ಕಿಬ್ಬಿಯೊಳಗಿನ ಧಂಕಾರ್
ಹಿಮಾಚಲ ಪ್ರದೇಶದ ಲಹೌಲ್ ಸ್ಪಿತಿ ಜಿಲ್ಲೆಗೆ ಸಾವಿರಾರು ವರ್ಷಗಳ ರಕ್ತರಂಜಿತ ಇತಿಹಾಸವಿದೆ. ಹೂಣರು, ಮಂಗೋಲರು ಆಗಾಗ ನುಗ್ಗಿ ವಜ್ರಯಾನ ಬೌದ್ಧರನ್ನು ಪೀಡಿಸಿದ ಕಣಿವೆಯಿದು. ಮೊದಲು ಲಹೌಲ್ ಮತ್ತು ಸ್ಪಿತಿ ಎಂದು ಎರಡಾಗಿದ್ದ ಜಿಲ್ಲೆ ಈಗ ಒಂದು. ಆಗ ಧಂಕಾರ್ ಸ್ಪಿತಿಯ ರಾಜಧಾನಿ. ಈಗ ಕೇಲೊಂಗ್ ಎರಡೂ ಪ್ರಾಂತ್ಯಗಳ ರಾಜಧಾನಿ. ಮನಾಲಿ-ಲೇಹ್ ದಾರಿಯಲ್ಲಿದೆ. ಸ್ಪಿತಿ ಕಣಿವೆಯ ಹಳ್ಳಿಗಳೆಲ್ಲ ಸ್ಪಿತಿ ನದಿಯ ದಡದಲ್ಲೇ ಇರುವುದು ಇಲ್ಲಿನ ವಿಶೇಷ. ಎರಡೂ ಪಕ್ಕದಲ್ಲಿ ಮುಗಿಲು ಚುಂಬಿಸುವ ಪರ್ವತಗಳಿವೆ.
ಧಂಕಾರ್ ಈಗ ಸ್ಪಿತಿ ಕಣಿವೆಯ ಅನೂಹ್ಯ ಪರಿಸರದಲ್ಲಿ ಇನ್ನೂರು-ಮುನ್ನೂರು ಜನರು ಮಾತ್ರ ಇರುವ ಬೆಟ್ಟದ ಕಿಬ್ಬಿಯೊಳಗಿನ ವಿಚಿತ್ರವಾದ ಹಳ್ಳಿ. ಛತ್ರುವಿನಿಂದ ಮರುದಿನ ಹೊರಟ ನಾವು. ನಾವು ಬಟಾಲ್, ಚಂದ್ರತಾಲ್ ಸರೋವರ. ಸ್ಪಿತಿ ಹುಟ್ಟುವ ಕುಂಜುಮ್ ಕಣಿವೆಗಳನ್ನು ಕುಲುಕುತ್ತ ದಾಟಿ ಕಾಜಾ ಎಂಬಲ್ಲಿ ಮಲಗಿ ಮರುದಿನ ಬೆಳ್ಳಂಬೆಳಗ್ಗೆೆ ಭೇಟಿ ಕೊಟ್ಟದ್ದೇ ಇಲ್ಲಿಗೆ. ಚಂದ್ರತಾಲ್‌ನಲ್ಲಿ ಉಳಿಯಲು ಟೆಂಟು ಸಿಗಲಿಲ್ಲ. ಮಹಾಭಾರತದ ಧರ್ಮರಾಯ ಈ ಸರೋವರದ ಮೂಲಕ ಸಶರೀರಿಯಾಗಿ ಸ್ವರ್ಗ ಪ್ರವೇಶಿಸಿದ ಎಂದು ಇಲ್ಲಿ ನಂಬುತ್ತಾರೆ.
ಧಂಕಾರ್, ಸ್ಪಿತಿ ಮತ್ತು ಪಿನ್ ಎಂಬ ಎರಡು ನದಿಗಳ ಸಂಗಮಸ್ಥಳದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ಶಿಖರಗಳ ನಡುವೆ ಹುದುಗಿದೆ. ಸಂಗಮದಿಂದ ನಡೆದೂ ಹೋಗಬಹುದು. ಅರ್ಧ ದಾರಿಯಲ್ಲಿ ಪುಟ್ಟ ಹೆಲಿಪ್ಯಾಡ್ ಇದೆ. ಚಳಿಗಾಲದ ಹಿಮಸಾಮ್ರಾಜ್ಯದಲ್ಲಿ ಇಲ್ಲಿನ ಮಂದಿಗೆ ಸರಕಾರ ಕೊಟ್ಟಿರುವ ಸೌಲಭ್ಯ ಇದು. ಇಲ್ಲಿಂದ ಕುಲುವಿಗೆ ಹೆಲಿಕಾಪ್ಟರ್‌ನಲ್ಲಿ ದುಡ್ಡು ಕೊಡದೆ ಹೋಗಬಹುದು. ಪ್ರವಾಸಿಗಳಿಗೆ ಈ ಸೌಲಭ್ಯವಿಲ್ಲ.
ಧಂಕಾರ್ ಎಂದರೆ ಭೂಗರ್ಭದಿಂದ ಮೇಲೆದ್ದು ಬಂದಂತೆ ಕಾಣುವ ಒಂದೈವತ್ತು ಮನೆಗಳು. ಅರ್ಧಚಂದ್ರಾಕಾರದಲ್ಲಿ ಶಿಖರಗಳಿಂದ ಕೆಳಗಿನ ಸ್ಪಿತಿ ಪಿನ್ ಸಂಗಮದವರೆಗೂ ಹರಡಿರುವ ಸಡಿಲ ಭೂಮಿಯ ನಡುವೆ ಹಿಮನೀರಿನ ತೋಡುಗಳು. ಇಕ್ಕೆಲಗಳಲ್ಲಿ ಹಸಿರು ಬಟಾಣಿಯ ಗದ್ದೆಗಳು. ಜನರೇ ಇಲ್ಲವೇನೋ ಎಂಬಂತಿರುವ ಗಾಢಮೌನ. ಗೋಡೆಗಳು ಮಣ್ಣಿನೊಳಗಿಂದಲೇ ಎದ್ದಿವೆ. ಇದೆಂಥ ರಾಜಧಾನಿಯೋ ನಮಗರ್ಥವಾಗಲಿಲ್ಲ. ನೊಣ ಹೊಡೆಯುತ್ತಿದ್ದ ಒಂದು ಢಾಬಾದಲ್ಲಿ ಕೇಳಿದರೆ ಸಾಬ್, ಮುಜೈ ಕುಚ್ ನಹಿ ಮಾಲೂಮ…… ಮೈನೆ ಕೇವಲ್ ತೀನ್ ಮಹಿನೆ ಪೆಹಲೆ ಆಯಾ.. ಅಂದ. ಇಲ್ಲಿ ಯಾರೂ ಇರಲು ಬಯಸುವುದಿಲ್ಲವಂತೆ. ಕೆಲವು ಮುದುಕರು ಮತ್ತು ನಮ್ಮಂಥ ತಿರುಗೇಡಿಗಳು ಮಾತ್ರ ಇರುವುದು. ಯುವಕರೆಲ್ಲ ಮನಾಲಿ ಕುಲು ಸಿಮ್ಲಾ ಎಂದು ಕೆಲಸ ಹುಡುಕಿ ಹೋಗುತ್ತಾರೆ. ಇಲ್ಲಿ ಇನ್ನೂರೋ ಮುನ್ನೂರೋ ಮಂದಿ ಇರಬಹುದು. ಎರಡು ಬೌದ್ಧಮಠಗಳಲ್ಲಿ (ಗೋಂಪಾಗಳು) ಸುಮಾರು ಐವತ್ತು ಸನ್ಯಾಸಿಗಳಿದ್ದಾರೆ.
ಧ0ಕಾರ್ ಗೋ0ಪಾ ಎ0ಬ ಧ್ಯಾನಪೀಠ
ಪಕ್ಕದಲ್ಲೇ ಇದ್ದ ಸುಮಾರು ಸಾವಿರ ವರ್ಷಗಳ ಹಿಂದೆ ನಿರ್ಮಾಣಗೊಂಡ ಧಂಕಾರ್ ಗೊಂಪಾದ ಕೆಳಗೆ ನಿಂತು ಮೇಲೆ ನೋಡಿದರೆ ಎದೆ ನಡುಗಿ ಕುಸಿದು ಬೀಳಬೇಕು. ರಕ್ಕಸಗಾತ್ರದ ಹೆಬ್ಬಂಡೆಗಳು ಹೊಯಿಗೆಯ ತಳಮಣ್ಣಿನಲ್ಲಿ ಬೇರೆ ಯಾವ ಆಧಾರವೂ ಇಲ್ಲದೆ ಈಗ ಬೀಳಲೋ ಮತ್ತೆ ಬೀಳಲೋ ಎಂಬಂತೆ ಕೆಕ್ಕರಿಸಿ ನೋಡುತ್ತಿವೆ. ಅದರ ಬುಡದಲ್ಲಿರುವ ಹತ್ತೆಂಟು ಕಿಂಡಿಗಳ ಸಮೂಹವೇ ಧಂಕಾರಿನ ಹಳೆಯ ಬೌದ್ಧ ಮಠ. ಅದ್ಭುತ ನಿರ್ಮಾಣವದು. ಪುಣ್ಯಕ್ಕೆ ನಮ್ಮೂರಿನ ಮಳೆ ಅಲ್ಲಿ ಬರುವುದಿಲ್ಲ . ಬಂದರೆ ಒಂದೇ ದಿನದ ಹೊಡೆತಕ್ಕೆ ಧಂಕಾರ್ ನೆಲಸಮವಾದೀತು. ಅಲ್ಲಿ ವರ್ಷಕ್ಕೆ ನಾಲ್ಕಾರು ದಿನ ಹನಿಮಳೆ ಬಿದ್ದರೆ ಹೆಚ್ಚು. ನೀರೆಲ್ಲ ಶಿಖರಗಳ ಗ್ಲೆಸಿಯರ್‌ಗಳಿಂದಲೇ ಬರಬೇಕು. ನೂರು ವರ್ಷಗಳಿಂದ ಇಲ್ಲಿ ಮಳೆಯೇ ಇಲ್ಲ.
ಧಂಕಾರ್‌ನ (ಧಂಗ್ ಅಂದರೆ ಬೆಟ್ಟದ ಕಿಬ್ಬಿ. ಕಾರ್ ಅಂದರೆ ಕೋಟೆ) ಗೋಂಪಾವನ್ನು ಹದಿನಾರನೆಯ ಶತಮಾನದಲ್ಲಿ ನವೀಕರಿಸಲಾಯಿತು. ನೋಡುವಾಗ ಇದು ಗುರುತ್ವಾಕರ್ಷಣ ಸಿದ್ಧಾಂತವನ್ನೇ ಅಣಕಿಸುವಂತೆ ಕಿಬ್ಬಿಯಲ್ಲಿ ಜೋಲಿ ಹೊಡೆಯುತ್ತ ನಿಂತಿದೆ. ಕ್ರಿ.ಶ. 1121ರಲ್ಲಿ ವಜ್ರಯಾನ ಪಂಥದ ಲಾ ಓಡ್ ಎಂಬ ಲಾಮಾ ನಿರ್ಮಿಸಿದ ಎನ್ನಲಾದ ಈ ಗೋಂಪಾದೊಳಗೆ ಒಮ್ಮೆಗೆ ಇಪ್ಪತ್ತಕ್ಕಿಂತ ಹೆಚ್ಚು ಜನ ಹೋಗಬಾರದು. ನೇರವಾದ ಮೆಟ್ಟಲುಗಳನ್ನು ಹತ್ತುವಾಗಲೇ ಏದುಸಿರು ಶುರುವಾಗುತ್ತದೆ. ಧಂಕಾರ್ 15,000 ಅಡಿಗಿಂತಲೂ ಎತ್ತರದಲ್ಲಿರುವುದರಿಂದ ಆಮ್ಲಜನಕದ ಕೊರತೆ ಕಾಡುತ್ತದೆ.
ಹೋಗುವುದು ಹೇಗೆ?
ಮನಾಲಿಯಿಂದ ಧಂಕಾರ್‌ಗೆ ಸುಮಾರು 240 ಕಿ. ಮೀ. ದೂರವಿದೆ. ರೋಹrಂಗ್ ಕಣಿವೆಯಲ್ಲಿ ಬಲಕ್ಕೆ ತಿರುಗಿ ತೀರಾ ಕಚ್ಚಾ ರಸ್ತೆಯಲ್ಲಿ ಸಾಗಬೇಕು. ಎಪ್ರಿಲ್‌ನಿಂದ ಸೆಪ್ಟಂಬ ರ್‌ವರೆಗೆ ದಾರಿ ತೆರೆದಿರುತ್ತದೆ. ನ0ತರ ಇಡೀ ಸ್ಪಿತಿ ಕಣಿವೆ ಹೆಪ್ಪುಗಟ್ಟುತ್ತದೆ. ಆಗ ಸ್ಪಿತಿ ನದಿಯಲ್ಲಿ ನಡೆದು ಹೋಗಬಹುದು.
ಬಿ. ಸೀತಾ ರಾಮ ಭಟ್