ಗದಗ: ಮಂದಿರ-ಮಸೀದಿಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತೆ ಆಚರಣೆ ಮಾಡಿದರೆ ತಪ್ಪೇನು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಭಾವೈಕ್ಯತೆ ದಿನಾಚರಣೆ ವಿರೋಧಿಸಿ ಫಕೀರ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿದ ವಿಷಯ ಜಿಲ್ಯಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಗರದ ತೋಂಟದಾರ್ಯ ಮಠದಲ್ಲೂ ದಿಂಗಾಲೇಶ್ವರ ಶ್ರೀ ಹೇಳಿಕೆ ವಿರೋಧಿಸಿ ಸಿದ್ಧರಾಮ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಭಾವೈಕ್ಯತೆ ಎಂಬುವುದು ಒಬ್ಬ ವ್ಯಕ್ತಿಗೆ ಸೀಮಿತ ಆಗಿದ್ದಲ್ಲ. ಎಲ್ಲರೂ ಆಚರಿಸಬಹುದು. ಫಕೀರ ದಿಂಗಾಲೇಶ್ವರ ಶ್ರೀಗಳು ಕರಾಳ ದಿನ ಆಚರಣೆ ಮಾಡಿದರೆ ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ನಮಗೆ ಸರ್ಕಾರ ರಕ್ಷಣೆ ನೀಡಬೇಕು. ಕರಾಳ ದಿನ ಆಚರಣೆ ತಪ್ಪಾದರೆ ಸರ್ಕಾರ ಕರಾಳ ದಿನ ಆಚರಣೆಯನ್ನು ನಿಷಿದ್ಧ ಮಾಡಬೇಕು. ಅಥವಾ ಸರ್ಕಾರ ನಮಗೆ ನಿರ್ದೇಶನ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಸಾಕಷ್ಟು ಸಾಮರಸ್ಯ ಕೆಲಸ ಮಾಡಿದ್ದೇವೆ. ಜಾತ್ರಾ ಕಮೀಟಿಗೆ ಮುಸ್ಲಿಂರನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಮಠದಲ್ಲಿ ಅನೇಕ ಮುಸ್ಲಿಂ ಭಕ್ತರಿದ್ದಾರೆ. ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಎಲ್ಲ ಸಮುದಾಯದ ಜೊತೆಗೆ ಅತ್ಯಂತ ಭಾವೈಕ್ಯತೆಯಿಂದ ಇದ್ದರು. ಸಿದ್ಧಲಿಂಗ ಶ್ರೀಗಳ ಮೇಲೆ ಆರೋಪ ಸಲ್ಲ. ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ. ನಮ್ಮ ಕಾಯಕ ನಮ್ಮ ಜತೆ ಇರಲಿ. ಸೌಹಾರ್ದತೆ, ಸಹೋದರತ್ವ ಬೇಕು. ಸಂವಿಧಾನದಲ್ಲೇ ಭಾವೈಕ್ಯತೆ ಸಂದೇಶವಿದೆ ಎಂದರು.
ವಿರೈಶವ ಲಿಂಗಾಯತ ಧರ್ಮವನ್ನು ಸಿದ್ಧಲಿಂಗ ಶ್ರೀಗಳು ಒಡೆದಿದ್ದಾರೆ ಎಂಬ ಫಕೀರ ದಿಂಗಾಲೇಶ್ವರ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಅವರು, ವೀರಶೈವ ಎಂಬುದು ಲಿಂಗಾಯತದ ಒಂದು ಭಾಗ. 12 ನೇ ಶತಮಾನದಲ್ಲೇ ಲಿಂಗಾಯತ ಧರ್ಮ ಇದೆ. ಅದನ್ನು ಒಡೆಯುವ ಪ್ರಮೇಯವೇ ಇಲ್ಲ. ಪ್ರತ್ಯೇಕ ಧರ್ಮ ಹೋರಾಟ ತಟಸ್ಥದ ಹಿಂದೆ ರಾಜಕಾರಣಿಗಳ ಹೊರಳಾಟವಿದೆ. ರಾಜಕಾರಣಿಗಳಿಗೆ ಮತಮುಖ್ಯ, ಸಿದ್ಧಾಂತವಲ್ಲ. ಈ ವಿಷಯ ಎಲ್ಲರಿಗೂ ಗೊತ್ತೇ ಇದೆ. ಎಂದು ಸಿದ್ದರಾಮ ಶ್ರೀಗಳು ಹೇಳಿದರು.
ಹಿಂದು ಎಂಬುದು ಬದುಕುವ ಪದ್ಧತಿ ವಿನಹ ಧರ್ಮವಲ್ಲ. ಹಿಂದು ಧರ್ಮಕ್ಕೆ ಸಂಸ್ಥಾಪಕರೇ ಇಲ್ಲ. ಭಾರತದಲ್ಲಿ ಇರುವರೆಲ್ಲ ಹಿಂದುಗಳೇ ಎಂಬುದು ಅರಿತುಕೊಳ್ಳಬೇಕು ಎಂದು ಹೇಳಿದರು.