Advertisement

ಮನುಷ್ಯರ ನಡುವೆ ಆತ್ಮಸಂಬಂಧ ಬೆಳೆಯಲಿ: ಸ್ವಾಮೀಜಿ

02:41 PM Jun 11, 2018 | Team Udayavani |

ಚಿಕ್ಕಮಗಳೂರು: ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ
ಗೊರೂಚ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ರಾತ್ರಿ ನಡೆಯಿತು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಶರಣ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಮೂವರು ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಆಶೀರ್ವಚನ ನೀಡಿದ ಅವರು, ಮನುಷ್ಯರ ನಡುವೆ ಆತ್ಮಸಂಬಂಧ ಬೆಳೆಯಬೇಕು ಮತ್ತು ಅವು ಗಟ್ಟಿಗೊಳ್ಳಲು ದೇಶೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕಾದ ಅಗತ್ಯವಿದೆ ಎಂದರು.

Advertisement

ಆಧುನೀಕರಣದ ಭರದಲ್ಲಿ ದೇಶೀಯ ಆಟಗಳು ಕ್ಷೀಣಿಸುತ್ತಿದೆ. ಅವುಗಳ ಉಳಿವಿಗೆ ತಮ್ಮ ಮಠ ಪ್ರಾಧಾನ್ಯತೆ
ನೀಡಿದ್ದು, ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಹೇಳಿದರು.
ಶರಣರ ಬದುಕು ಅಪೂರ್ವವಾದದ್ದು, ಎಲ್ಲಿ ಮನುಷ್ಯನ ಬದುಕು ಒಂದಾಗುತ್ತದೆಯೋ ಅಲ್ಲಿ ಪ್ರೇಮಾಂಕುರವಾಗುತ್ತದೆ.
ಅಲ್ಲಿ ಸಮಾನತೆ ಇರುತ್ತದೆ ಎಂಬುದನ್ನು ಶರಣರು 12ನೇ ಶತಮಾನದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಡಾ|ಗೊರುಚ ಮಾತನಾಡಿ, ತಮ್ಮ ತವರು ಜಿಲ್ಲೆಯಲ್ಲೇ ದತ್ತಿನಿಧಿ ಪ್ರಶಸ್ತಿ
ಪ್ರದಾನ ನಡೆದಿರುವುದು ತಮಗೆ ಸಂತಸ ತಂದಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಅತ್ಯುತ್ತಮ ಸಾಧಕರಿಗೆ ತಮ್ಮ ಹೆಸರಿನ
ಪ್ರಶಸ್ತಿ ಸಂದಿರುವುದು ತಮಗೆ ಹೆಮ್ಮೆ ತಂದಿದೆ ಎಂದ ಅವರು, ಇಂತಹವರ ಮಧ್ಯೆ ನಾವು ಇದ್ದೇವೆ ಎನ್ನುವುದೇ ನಮಗೆ ಸಮಾಧಾನ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಚಂದ್ರಕಾಂತ್‌ ಬೆಲ್ಲದ,
ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಗೊರುಚ ಅವರ ಆಶಯದಂತೆ ಕಳೆದ ಮೂರು ವರ್ಷಗಳಿಂದ ಪ್ರಶಸ್ತಿ ಪ್ರದಾನ
ಮಾಡಲಾಗುತ್ತಿದೆ ಎಂದು ತಿಳಿಸಿದರು. 

Advertisement

ಗೊರುಚ ಅವರಿಗೆ 84 ವರ್ಷಗಳು ತುಂಬಿದಾಗ ಅಭಿನಂದನಾ ಸಮಾರಂಭದಲ್ಲಿ ಸಮಿತಿ ಅರ್ಪಿಸಿದ 11
ಲಕ್ಷದ ಜೊತೆಗೆ ತಮ್ಮ ಎರಡು ಲಕ್ಷ ರೂ.ಗಳನ್ನು ಸೇರಿಸಿ ಅವರು ಪರಿಷತ್ತಿಗೆ ಕೊಡುಗೆಯಾಗಿ ನೀಡಿದ್ದು, ಆ ಹಣವನ್ನು
ಪರಿಷತ್ತಿನಲ್ಲಿ ಗೊರುಚ ದತ್ತಿ ನಿಧಿಯಾಗಿ ಶಾಶ್ವತ ಠೇವಣಿ ಇಡಲಾಗಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ
ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರಕ್ಕೆ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ|ಶಾಂತಾ ಇಮ್ರಾಪುರ ಪ್ರಶಸ್ತಿ ಪುರಸ್ಕೃತರನ್ನು ಸಭೆಗೆ
ಪರಿಚಯಿಸಿದರು. ಧಾರವಾಡದ ಡಾ|ಗುರುಲಿಂಗ ಕಾಪಸೆ, ಶಿವಮೊಗ್ಗದ ಡಾ|ಬಸವರಾಜ್‌ ನೆಲ್ಲಿಸರ, ಲಕ್ಕಸಕೊಪ್ಪದ
ಪಿ.ಡಿ.ವಾಲೀಕಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ ಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|ಬಸವರಾಜ ಸಾದರ ಅಧ್ಯಕ್ಷತೆ ವಹಿಸಿದ್ದರು.

ಗೊರುಚ ಅವರ ಪುತ್ರಿ ಮುಕ್ತಾ, ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು. ಡಿ.ಎಂ.
ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್‌ ಬಸಪ್ಪ ಸ್ವಾಗತಿಸಿದರು, ತುಮಕೂರು ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ವಂದಿಸಿದರು. ಸಮಾರಂಭದ ನಂತರ ಗಿರಿಯಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವೀರಗಾಸೆ ಮತ್ತು ಧಾರವಾಡದ ರತಿಕಾ ಕಲಾ ಕೇಂದ್ರದ ಕಲಾವಿದರಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next