Advertisement

ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ಎರಡು ಪ್ರತ್ಯೇಕ ದಸರಾ ರ್‍ಯಾಲಿ, ಪೊಲೀಸ್‌ ಸರ್ಪಗಾವಲು

10:32 AM Oct 05, 2022 | Team Udayavani |

ಮುಂಬಯಿ : ರಾಜ್ಯದಲ್ಲಿ ಶಿವಸೇನೆ ಸ್ಥಾಪನೆಯಾದ 56 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಶಿವಸೇನೆ ವತಿಯಿಂದ ಎರಡು ಪ್ರತ್ಯೇಕ ದಸರಾ ರ್‍ಯಾಲಿಗಳು ಬುಧವಾರ ನಡೆಯಲಿವೆ.

Advertisement

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಬಣದ ವತಿಯಿಂದ ನಗರದ ಬಿಕೆಸಿ ಮೈದಾನದಲ್ಲಿ ರ್‍ಯಾಲಿಯನ್ನು ಆಯೋಜಿಸಲಾಗಿದ್ದರೆ, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣದ ವತಿಯಿಂದ ಶಿವಾಜಿ ಪಾರ್ಕ್‌ ಮೈದಾನದಲ್ಲಿ ದಸರಾ ರ್ಯಾಲಿಯನ್ನು ಆಯೋಜಿಸಲಾಗಿದೆ.

ಈ ಎರಡೂ ರ್ಯಾಲಿಗಳ ವೇಳೆ ಉಭಯ ಬಣಗಳ ನಾಯಕರಿಂದ ಪರಸ್ಪರ ಟೀಕಾಪ್ರಹಾರದ ಸುರಿಮಳೆಯನ್ನು ನಿರೀಕ್ಷಿಸಲಾಗಿದೆ. ಇತ್ತಂಡಗಳೂ ದಸರಾ ರ್‍ಯಾಲಿಯನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರದ ರ್ಯಾಲಿಯತ್ತ ಸಹಜವಾಗಿಯೇ ಇಡೀ ರಾಜ್ಯದ ಜನತೆ ಕುತೂಹಲದ ದೃಷ್ಟಿ ಹರಿಸಿದ್ದಾರೆ.

ಎರಡೂ ರ್‍ಯಾಲಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಹರಿದುಬರುವ ನಿರೀಕ್ಷೆ ಇದೆ. ಇದೀಗ ರಾಜ್ಯದಲ್ಲಿ ಶಿವಸೇನೆ ಶಿಂಧೆ ಮತ್ತು ಉದ್ಧವ್‌ ಬಣಗಳಾಗಿ ಗುರುತಿಸಿಕೊಂಡಿವೆಯಾದರೂ ಪಕ್ಷದ ಕಾರ್ಯಕರ್ತರು ಯಾರ ನಾಯಕತ್ವದ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬುದನ್ನು ಈ ರ್ಯಾಲಿ ನಿರ್ಧರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸ್‌ ಸರ್ಪಗಾವಲು
ಶಿವಸೇನೆಯೊಳಗಿನ ಈ ಬಣ ರಾಜಕೀಯ ಮುಂಬಯಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರ್‍ಯಾಲಿಗೆ ದಿನ ಬಾಕಿ ಉಳಿದಿರುವಂತೆಯೇ ಅಂದರೆ ಮಂಗಳವಾರದಂದು ನಗರದ ಕೆಲವೊಂದು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದರೆ ಮತ್ತೆ ಕೆಲವೊಂದು ರಸ್ತೆಗಳ ಬದಿಗಳಲ್ಲಿ ನಿಲ್ಲಿಸಲಾಗಿರುವ ಅಪರಿಚಿತ ವಾಹನಗಳನ್ನು ಟೋಯಿಂಗ್‌ ಮಾಡುವ ಮೂಲಕ ಸ್ಥಳಾಂತರಿಸಲಾಯಿತು.

Advertisement

ಇದೇ ವೇಳೆ ಎರಡು ರ್ಯಾಲಿಗಳು ಮತ್ತು ದುರ್ಗಾ ಮಾತೆಯ ವಿಸರ್ಜನ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಾದ್ಯಂತ 3,200 ಪೊಲೀಸ್‌ ಅಧಿಕಾರಿಗಳು, 15,200 ಪೊಲೀಸ್‌ ಸಿಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ 1,500 ಸಿಬಂದಿ, ಗೃಹರಕ್ಷಕ ದಳದ 1,000ಸಿಬಂದಿ, 20 ಕ್ಷಿಪ್ರ ಕಾರ್ಯಾಚರಣ ತಂಡಗಳು, 15 ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದೆ. ಇನ್ನಷ್ಟು ಪೊಲೀಸರನ್ನು ಮಫ್ತಿಯಲ್ಲಿ ನಿಯೋಜಿಸಲಾಗಿದೆ.

ಬಿಕೆಸಿಯಲ್ಲಿ ಮುಂಬಯಿ ಮತ್ತು ಸಂಚಾರಿ ಪೊಲೀಸ್‌ ದಳದ 2,000 ಪೊಲೀಸರು, 5-6 ಡಿಸಿಪಿಗಳು, 15-16 ಎಸಿಪಿಗಳನ್ನು ಬಂದೋಬಸ್ತ್ಗಾಗಿ ಬಳಸಿಕೊಳ್ಳಲಾಗುವುದು. ಇಷ್ಟು ಮಾತ್ರವಲ್ಲದೆ ಜುಹೂ, ವೆಸೋìವಾ, ದಾದರ್‌, ಗಿರ್ಗಾಂವ್‌ ಸಹಿತ ನಗರದ ಪ್ರಮುಖ ಬೀಚ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಶಿಂಧೆ ಬಣದಿಂದ 1,700 ಬಸ್‌!
ರ್‍ಯಾಲಿಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆ ಯಿಂದ ಆಗಮಿಸುವ ಶಿವಸೈನಿಕರಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಎರಡೂ ಗುಂಪುಗಳ ಮುಖಂಡರು ತಮ್ಮ ತಮ್ಮ ರ್ಯಾಲಿಗೆ ಬರಲು ಅನುಕೂಲವಾಗುವಂತೆ ಬಸ್‌ಗಳನ್ನು ಬುಕ್‌ ಮಾಡಿದ್ದಾರೆ. ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಗುಂಪು ದಸರಾ ಕೂಟಕ್ಕೆ ಅನುಕೂಲವಾಗುವಂತೆ 1,700 ಕ್ಕೂ ಹೆಚ್ಚು ಎಸ್‌ಟಿ ಬಸ್‌ಗಳನ್ನು ಕಾಯ್ದಿರಿಸಿದೆ. ಶಿಂಧೆ ಸಮೂಹ ಎಸ್‌ಟಿ ಕಾರ್ಪೊರೇಷನ್‌ (ಎಂಎಸ್‌ಆರ್‌ಟಿಸಿ) 10 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next