Advertisement
ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ 16 ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, 2023ರ ಆಗಸ್ಟ್‌ನಲ್ಲಿ ಎಬಿಬಿಎಸ್ ಅಡಿಯಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಾಮಗಾರಿಗೆ ರೈಲ್ವೇ ಸಚಿವಾಲಯ 19.32 ಕೋಟಿ ರೂ. ಮೀಸಲಿಟ್ಟಿದೆ. ಅದರಂತೆ ನಿಲ್ದಾಣದ ಉನ್ನತೀಕರಣ ಕಾರ್ಯಗಳು ನಡೆಯುತ್ತಿದೆ.
ನಿಲ್ದಾಣದ ಮುಂಭಾಗವನ್ನು ಕರಾವಳಿಯ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾ ಗುತ್ತಿದೆ. ಮುಖ್ಯವಾಗಿ ಮಂಗಳೂರು ಹೆಂಚಿನ ಮೇಲ್ಛಾವಣಿ ಪ್ರಮುಖ ಅಕರ್ಷಣೆಯಾಗಿದೆ. ಛಾವಣಿಯಲ್ಲಿ ಗುತ್ತಿನ ಮನೆಯ ಪರಿಕಲ್ಪನೆ ಯನ್ನೂ ಕಾಣಬಹುದಾಗಿದೆ. ವಿವಿಧ ಡಿಸೈನ್‌ಗಳನ್ನೂ ರಚಿಸಲಾಗಿದ್ದು, ಹಳೆಯ ಸ್ಟೇಶನ್ ಕಟ್ಟಡಕ್ಕೆ ಹೊಸ ನೋಟವನ್ನು ನೀಡಲಾಗಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಮುಂಬಯಿ- ಕೇರಳ ನಡುವೆ ಹಲವು ಹೊಸ ರೈಲುಗಳ ಆರಂಭ, ಇರುವ ರೈಲುಗಳ ಹೆಚ್ಚಳದಿಂದಾಗಿ ಈ ನಿಲ್ದಾಣದಿಂದ ರೈಲು ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಮೂಲ ಸೌಲಭ್ಯಗಳ ಹೆಚ್ಚಳಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.
Related Articles
Advertisement
ಏನೆಲ್ಲ ಅಭಿವೃದ್ಧಿ ಕಾಮಗಾರಿಗಳು?-ನಿಲ್ದಾಣ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ 155 ಚ.ಮೀ. ಪ್ರವೇಶ ದ್ವಾರ ನಿಲ್ದಾಣದ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡಲಿದೆ.
-ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗದ ಸುಮಾರು 7,000 ಚ.ಮೀ. ಪ್ರದೇಶವನ್ನು ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ.
-ಜತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಿಲ್ಲದೆ ನೇರ ಪ್ರವೇಶ ಸಿಗಲಿದೆ.
-ಗಾರ್ಡನ್, ಲಾನ್ ಬೆಳೆಸಲು ಅನುಕೂಲವಾಗುವಂತೆ ಐಲ್ಯಾಂಡ್‌ಗಳನ್ನೂ ನಿರ್ಮಿಸಲಾಗಿದೆ.
-ಹವಾನಿಯಂತ್ರಿತ ವೇಟಿಂಗ್ ಹಾಲ್ ಮತ್ತು ವಿಕಲಚೇತನರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಾಣ.
-1632 ಚ.ಮೀ. ವಿಸ್ತೀರ್ಣವಾದ ಪ್ರದೇಶದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಪಾರ್ಕಿಂಗ್ ಗೆ ಅವಕಾಶ.
-ನಿಲ್ದಾಣದ ಒಳಭಾಗದಲ್ಲಿ 6 ಮೀ. ಅಗಲದ ಪಾದಚಾರಿ ಮೇಲ್ಸೇತುವೆ, ಪ್ರಯಾಣಿಕರಿಗೆ ಹಳಿ ದಾಟುವಲ್ಲಿ ನೆರವು.
-ಫ್ಲಾಟ್ ಫಾರ್ಮ್ 1 ಮತ್ತು 2ನ್ನು ದುರಸ್ತಿ ಗೊಳಿಸುವ ಕಾರ್ಯವೂ ಬಹುತೇಕ ಅಂತಿಮ.
-ಫ್ಲಾಟ್ ಫಾರ್ಮ್ನಲ್ಲಿ ಹೈಮಾಸ್ಟ್ ದೀಪಗಳು, ಬಿಎಲ್ ಡಿಸಿ ಫ್ಯಾನ್, ಮೊಬೈಲ್ ಫೋನ್ ಚಾರ್ಜಿಂಗ್ ವ್ಯವಸ್ಥೆ ಬರಲಿದೆ.
-ನಾಗುರಿ ಭಾಗದಿಂದ ಇರುವ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗೂ ಚಾಲನೆ ಸಿಕ್ಕಿದೆ. 1979ರಲ್ಲಿ ಆರಂಭವಾದ ನಿಲ್ದಾಣ
1979ರ ಮೇ 20ರಂದು ಮಂಗಳೂರು ಜಂಕ್ಷನ್ ನಿಲ್ದಾಣ ಆರಂಭವಾಗಿದ್ದು, ಪಾಲಕ್ಕಾಡ್ ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದು. ಇಲ್ಲಿ ಪ್ರತಿದಿನ ನಿಲ್ದಾಣದ ಮೂಲಕ 35 ರೈಲುಗಳು ಸಂಚರಿಸುತ್ತವೆ. ದಿನಕ್ಕೆ 6,700ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಜಂಕ್ಷನ್ ರೈಲು ನಿಲ್ದಾಣವು ದಕ್ಷಿಣಕ್ಕೆ ಕೇರಳ, ಉತ್ತರಕ್ಕೆ ಗೋವಾ, ಮಹಾರಾಷ್ಟ್ರ, ನವಮಂಗಳೂರು ಬಂದರು, ಪೂರ್ವದಲ್ಲಿ ಬೆಂಗಳೂರು ಮೈಸೂರು ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. -ಭರತ್ ಶೆಟ್ಟಿಗಾರ್