Advertisement

ಸ್ಪೀಡ್‌ ಗವರ್ನರ್‌ ವಿವಾದ ಗೊಂದಲ

08:25 AM Oct 24, 2017 | Team Udayavani |

ಬೆಂಗಳೂರು: ರಾಜ್ಯದ ವಾಣಿಜ್ಯ ವಾಹನಗಳಿಗೆ ಸ್ಪೀಡ್‌ ಗವರ್ನರ್‌ ಕಡ್ಡಾಯ ಅಳವಡಿಕೆ ವಿಚಾರ ಈಗ ಮತ್ತಷ್ಟು ಗೊಂದಲದ ಗೂಡಾಗಿದೆ. ಒಂದೆಡೆ ಹೊಸದಾಗಿ ಮಾತ್ರವಲ್ಲ; ಈಗಾಗಲೇ ಇರುವ ವಾಣಿಜ್ಯ ಉದ್ದೇಶದ ಹಳೆಯ ವಾಹನಗಳಿಗೂ ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ವ್ಯತಿರಿಕ್ತ ಹೇಳಿಕೆ
ನೀಡಿರುವ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, “ಸದ್ಯಕ್ಕೆ ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು “ವಾಣಿಜ್ಯ ವಾಹನಗಳಿಗೆ ಅರ್ಹತಾ ಪ್ರಮಾಣಪತ್ರ ನೀಡುವಾಗ ಈಗಿರುವ ವ್ಯವಸ್ಥೆ ಏನಿದೆಯೋ ಸದ್ಯಕ್ಕೆ ಅದೇ ವ್ಯವಸ್ಥೆ ಮುಂದುವರಿಯಲಿದೆ. ಅರ್ಹತಾ ಪ್ರಮಾಣಪತ್ರ ನೀಡುವಾಗ ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯವಾಗಿರಬೇಕೆಂದು ಆದೇಶ ಹೊರಡಿಸಿಲ್ಲ. ಈ ಸಂಬಂಧದ ಕಡತ ನನ್ನ ಬಳಿಯೇ ಇದೆ. ಪರಿಶೀಲಿಸುವುದಾಗಿ ಹೇಳಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ಕಡ್ಡಾಯಗೊಳಿಸಿ ಆದೇಶ; ಆರೋಪ: ಆದರೆ, ಇದನ್ನು ತಳ್ಳಿಹಾಕಿರುವ ಲಾರಿ ಮಾಲೀಕರ ಸಂಘ ಮತ್ತು ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘ, “ಸ್ಪೀಡ್‌ ಗವರ್ನರ್‌ ಕಡ್ಡಾಯಗೊಳಿಸಿ ಸ್ವತಃ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಅಸೋಸಿಯೇಷನ್‌ ಅಧ್ಯಕ್ಷ ಜಿ.ಆರ್‌. ಷಣ್ಮುಗಪ್ಪ, ” ಹತ್ತು ದಿನಗಳಲ್ಲಿ ವಾಣಿಜ್ಯ ಉದ್ದೇಶದ ವಾಹನಗಳಿಗೆ ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯಗೊಳಿಸಿರುವ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ, ಲಾರಿ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಬೆಂಗಳೂರು ಪ್ರವಾಸಿ ವಾಹನಗಳ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾತನಾಡಿ, “ರಾಜ್ಯದಲ್ಲಿ 1.95 ಲಕ್ಷ ಟ್ಯಾಕ್ಸಿಗಳು, 80 ಸಾವಿರ ಮ್ಯಾಕ್ಸಿ ಕ್ಯಾಬ್‌ಗಳಿವೆ. ಅವೆಲ್ಲವುಗಳಿಗೂ ಇದರ ಬಿಸಿ ತಟ್ಟಲಿದೆ. ನೆರೆಯ ರಾಜ್ಯಗಳಲ್ಲಿ
ಸ್ಪೀಡ್‌ ಗವರ್ನರ್‌ ಬೆಲೆ 3ರಿಂದ 4 ಸಾವಿರ ರೂ. ಇದೆ. ಆದರೆ, ಕರ್ನಾಟಕದಲ್ಲಿ ನಾಲ್ಕೈದು ಪಟ್ಟು ಹೆಚ್ಚಿದೆ. ತಕ್ಷಣ ಸರ್ಕಾರ ಈ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಮುಷ್ಕರಕ್ಕೆ ನಾವೂ ಕೈಜೋಡಿಸಲಿದ್ದೇವೆ’ ಎಂದು ಹೇಳಿದರು. 

ಗೊಂದಲಕ್ಕೆ ಕಾರಣವೇನು? 
ವಾಣಿಜ್ಯ ಉದ್ದೇಶದ ವಾಹನಗಳಿಗೆ ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿದ್ದಾಗಲೇ ಆದೇಶವಾಗಿತ್ತು. ಅದು ಈಗ ಅಧಿಸೂಚನೆಯಾಗಿ ಹೊರ ಬಂದಿದೆ. ಇದು ಗೊಂದಲಕ್ಕೆ ಮೂಲ ಕಾರಣ.  ಕೇಂದ್ರ ಮೋಟಾರು ವಾಹನ ಕಾಯ್ದೆ-1989ರ ನಿಯಮ 118 (2)ರಡಿ ಸ್ಪೀಡ್‌ ಗವರ್ನರ್‌ ಅಳವಡಿಕೆ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದಕ್ಕೆ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹಿ ಹಾಕಿದ್ದಾರೆ. ತದನಂತರ ಅಧಿಸೂಚನೆ ಹೊರಡಿಸಲಾಗಿದೆ. ಈಗಿನ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರ ಗಮನಕ್ಕೆ ಇದು ಬಂದಿಲ್ಲ. ಹಾಗಾಗಿ, ತಾವು ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next