Advertisement

ಪ್ಲಾಸ್ಟಿಕ್‌ ಪಾರ್ಕ್‌ ಕಾಮಗಾರಿಗೆ ವೇಗ: ನಿವೇಶನಗಳಿಗೆ ಬೇಡಿಕೆ, ಶೀಘ್ರ ಶಿಲಾನ್ಯಾಸ ಸಾಧ್ಯತೆ

01:44 AM May 30, 2023 | Team Udayavani |

ಮಂಗಳೂರು: ಇಲ್ಲಿಗೆ ಸಮೀಪದ ಗಂಜಿಮಠದಲ್ಲಿ ಸ್ಥಾಪನೆಯಾಗಲಿರುವ ಬಹುನಿರೀಕ್ಷಿತ ಪ್ಲಾಸ್ಟಿಕ್‌ ಪಾರ್ಕ್‌ಗೆ ನಿರೀಕ್ಷೆಗೂ ಮೀರಿದ ಬೇಡಿಕೆ ಕಂಡುಬಂದಿದೆ.

Advertisement

ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಆಗಬೇಕಾದ ಬಹುತೇಕ ಎಲ್ಲ ಮೂಲ ಕೆಲಸಗಳೂ ಬಹುತೇಕ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಅದಕ್ಕೆ ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆ ಇದೆ.

ಡಿಪಿಆರ್‌ ಕೇಂದ್ರ ಸರಕಾರದಿಂದ ಅನುಮೋದನೆಗೊಂಡ ಬಳಿಕ ಸಾಕಷ್ಟು ಕೆಲಸಗಳು ನಡೆದಿವೆ. ಪ್ಲಾಸ್ಟಿಕ್‌ ಕ್ಷೇತ್ರದಲ್ಲಿ ಹೆಸರಾಂತ ಸುಮಾರು 35ರಷ್ಟು ಕಂಪೆನಿಗಳು ಈ ಪಾರ್ಕ್‌ನಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿವೆ. ಅವರ ಬೇಡಿಕೆ ಪ್ರಕಾರ 90 ಎಕ್ರೆ ಸ್ಥಳ ಅಗತ್ಯವಿದೆ. ಆದರೆ ಮೊದಲ ಹಂತದಲ್ಲಿ ಲಭ್ಯವಿರುವುದು 60 ಎಕ್ರೆ. ಹಾಗಾಗಿ ಮೊದಲ ಹಂತದಲ್ಲಿ ಒಂದಷ್ಟು ಭೂಮಿ ನೀಡಿ ಎರಡನೇ ಹಂತದಲ್ಲಿ ಮತ್ತೆ ಕೊಡುವ ಸಾಧ್ಯತೆ ಇದೆ.

ಸದ್ಯ ಪ್ಲಾಸ್ಟಿಕ್‌ ಪಾರ್ಕ್‌ ಅಭಿವೃದ್ಧಿಗಾಗಿ ಟೆಂಡರ್‌ ನೀಡಲಾಗಿದ್ದು, ಭೂಮಿ ಮಟ್ಟಸಗೊಳಿಸುವ ಕೆಲಸ 62.77 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಈ ವೆಚ್ಚವನ್ನು ಕೇಂದ್ರ, ರಾಜ್ಯ ಸರಕಾರಗಳು ಶೇ. 50ರಂತೆ ಹಂಚಿಕೊಂಡಿವೆ.

ಗಂಜಿಮಠದ ರಫ್ತು ಉತ್ತೇಜನ ಪಾರ್ಕ್‌ನ ಎರಡನೇ ಹಂತವನ್ನೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿಗೆ ವಿದ್ಯುತ್‌ ಪೂರೈಕೆ ಸಮಸ್ಯೆಯಿಲ್ಲ, ಹತ್ತಿರದ ಗುರುಪುರ ನದಿಯ ನೀರನ್ನೇ ಬಳಸಿಕೊಳ್ಳುವುದಕ್ಕೂ ನಿರ್ಧರಿಸಲಾಗಿದೆ.

Advertisement

ಸಿಪೆಟ್‌ ಸಂಸ್ಥೆ ಬಂದರೆ ಕೌಶಲಾಭಿವೃದ್ಧಿ

ಮುಖ್ಯವಾಗಿ ಈ ಭಾಗದಲ್ಲಿನ ಪ್ಲಾಸ್ಟಿಕ್‌ ಕುರಿತ ಸಂಶೋಧನೆ, ಕೌಶಲಾಭಿವೃದ್ಧಿ ಮಾಡಲು ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌(ಸಿಪೆಟ್‌) ಸ್ಥಾಪಿಸಲಾಗುತ್ತಿದೆ. 16 ಎಕ್ರೆ ಪ್ರದೇಶವನ್ನು ಅದಕ್ಕೆ ಮೀಸಲಿಡಲಾಗಿದೆ, ಅದರ ಕಟ್ಟಡ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಇತರ 50 ವಿವಿಧ ಗಾತ್ರದ ನಿವೇಶನಗಳನ್ನು ಪ್ಲಾಸ್ಟಿಕ್‌ ಕೈಗಾರಿಕಾ ಘಟಕಗಳಿಗಾಗಿ ಮೀಸಲಿರಿಸಲಾಗಿದೆ.

ಸಿಪೆಟ್‌ನಲ್ಲಿ ಅತ್ಯಾಧುನಿಕ ಲ್ಯಾಬ್‌, ವರ್ಕ್‌ಶಾಪ್‌ ಇರಲಿದ್ದು, ಪ್ಲಾಸ್ಟಿಕ್‌ ಪಾರ್ಕ್‌ಗೆ ಪೂರಕವಾದ ಸಂಶೋಧನೆ, ತರಬೇತಿ ನಡೆಸಲಾಗುವುದು. ಇದರಿಂದ ಈ ಭಾಗದ ಉದ್ಯೋಗಾಕಾಂಕ್ಷಿಗಳ ಕೌಶಲಾಭಿವೃದ್ಧಿಯಾಗಲಿದ್ದು, ಉದ್ಯೋಗಕ್ಕೆ ನೆರವು ಸಿಗಲಿದೆ.

ತುಸು ವಿಳಂಬ

ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ಸುಮಾರು 40 ಎಕ್ರೆಯಷ್ಟು ಭೂಮಿ ಖಾಸಗಿಯವರದ್ದಾಗಿದ್ದು, ಪರಿಹಾರಕ್ಕೆ ಸಂಬಂಧಿಸಿದ ವಿವಾದ ಇದುವರೆಗೆ ನ್ಯಾಯಾಲಯದಲ್ಲಿತ್ತು. ಈಗ ಪರಿಹಾರದ ಮೊತ್ತವನ್ನು ಕೋರ್ಟ್‌ಗೆ ಪಾವತಿಸಿ ಕೆಲಸ ಮುಂದುವರಿಸಲಾಗಿದೆ, ಈಗ ಕೆಲಸ ತ್ವರಿತವಾಗಿ ಸಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

2021ರ ಜನವರಿ ಪ್ರಾರಂಭದಲ್ಲಿ ಕೇಂದ್ರ ಸರಕಾರ ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್‌ಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಇದಾದ ಆರು ತಿಂಗಳೊಳಗೆ ಡಿಪಿಆರ್‌ ನೀಡಬೇಕು, ಬಳಿಕ ಅನುಮೋದನೆಯಾಗಿ ಅಂತಿಮ ಒಪ್ಪಿಗೆ ಪಡೆಯಬಹುದು ಎಂದು ಕೇಂದ್ರ ಸರಕಾರದ ರಾಸಾಯನಿಕ ಮತ್ತು ಪೆಟ್ರೋರಾಸಾಯನಿಕ ಇಲಾಖೆ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಎಂಜಿನಿಯರಿಂಗ್‌ ವಿಭಾಗದವರು ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಿದ್ದರು. ¤.

104 ಎಕ್ರೆ ಜಾಗ

ಗಂಜಿಮಠದಲ್ಲಿ 104 ಎಕ್ರೆ ಜಾಗವನ್ನು ಪ್ಲಾಸ್ಟಿಕ್‌ ಪಾರ್ಕ್‌ಗೆ ಮೀಸಲಿರಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸಿ ರಸ್ತೆ ಮತ್ತಿತರ ಕಡ್ಡಾಯ ಶೀರ್ಷಿಕೆಗಳಿಗೆ ಮೀಸಲಿರಿಸಿದ ಬಳಿಕ 60 ಎಕ್ರೆ ಉಳಿಯಲಿದೆ.

ಎಸ್‌ಪಿವಿ ರಚನೆ

ಎರಡು ತಿಂಗಳ ಹಿಂದೆಯಷ್ಟೇ ಪ್ಲಾಸ್ಟಿಕ್‌ ಪಾರ್ಕ್‌ನ ಕಾರ್ಯ ವ್ಯವಹಾರಗಳನ್ನು ಸರಿದೂಗಿಸಿಕೊಂಡು ಹೋಗುವುದಕ್ಕಾಗಿ ವಿಶೇಷ ಉದ್ದೇಶ ವಾಹಿನಿಯನ್ನು ರಚಿಸಲಾಗಿದೆ. ಇದರಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ಆಯುಕ್ತರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕೆಐಎಡಿಬಿಯ ಸಿಇಒ, ಹಾಗೂ ಸ್ಥಳೀಯ ಕೈಗಾರಿಕಾ ಪ್ರತಿನಿಧಿಯೊಬ್ಬರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈಗಾಗಲೇ ಒಂದು ಸಭೆ ಕೂಡ ನಡೆದಿದೆ.

 ವೇಣುವಿನೋದ್‌ ಕೆ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next