Advertisement

ಮಾತು ನೊರೆತೆರೆಯಾಟ! ಕಳೆದುಕೊಳ್ಳಬಹುದೆ ಇದನು! 

03:45 AM Jun 25, 2017 | Team Udayavani |

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಬಹುಭಾಷಾ ಪಂಡಿತನೊಬ್ಬ ತನ್ನ ಮಾತೃಭಾಷೆ ಯಾವುದೆಂಬುದನ್ನು ಕಂಡುಹಿಡಿಯುವಂತೆ ಅಲ್ಲಿದ್ದವರಿಗೆ ಸವಾಲು ಹಾಕಿದ ಕಥೆ ನಿಮಗೆಲ್ಲ ಗೊತ್ತಿದೆ. ಯಾವ ಭಾಷೆಯಲ್ಲೇ ಎಂಥದ್ದೇ ಕ್ಲಿಷ್ಟ ಪ್ರಶ್ನೆಗಳನ್ನು ಕೇಳಿದರೂ ಆಯಾ ಭಾಷೆಯಲ್ಲಿಯೇ ಅಷ್ಟಷ್ಟೇ ಉಚಿತವಾದ ಉತ್ತರಗಳನ್ನು ನೀಡಿ ಆಸ್ಥಾನದಲ್ಲಿದ್ದ ಮಹಾ ಬುದ್ಧಿವಂತರನ್ನೆಲ್ಲ ಅವನು ಕಕ್ಕಾವಿಕ್ಕಿಯಾಗಿಸಿದ್ದೂ ನಂತರ ತೆನಾಲಿರಾಮನ ಉಪಾಯದಿಂದಾಗಿ ಈ ಪಂಡಿತನ ಅಸಲಿ ಮಾತು ಯಾವುದೆಂದು ಎಲ್ಲರಿಗೂ ತಿಳಿದುಬಂದ ಬಗೆ ಕೂಡ ನಿಮಗೆ ಗೊತ್ತು.  

Advertisement

ಗಾಢನಿದ್ದೆಯಲ್ಲಿದ್ದ ಈ ಬಹುಭಾಷಾ ಪಂಡಿತನ ಕಿವಿಯೊಳಗೆ ತೆನಾಲಿರಾಮ ಹುಲ್ಲುಕಡ್ಡಿ ತೂರಿಸಿ ಕಚಗುಳಿ ಇಟ್ಟಾಗ, ಥಟ್ಟನೆ ಎಚ್ಚರಗೊಂಡ ಆ ಪಂಡಿತನ ಬಾಯಿಂದ ಅವನ ತಾಯ್ನುಡಿ, “ಯಾರೋ ಅವನು?!’ ಎಂಬ ಉದ್ಗಾರದೊಂದಿಗೆ ಹೊರಗೆ ಬಂತಂತೆ! ಮುಚ್ಚಿಟ್ಟ ಅಸಲಿ ಮಾತನ್ನು ಹೊರತೆಗೆಯಲು ಶಾಸ್ತ್ರ ಕಾವ್ಯಗಳನ್ನು ಅರೆದು ಕುಡಿದ ಮಹಾ ಬುದ್ದಿವಂತಿಕೆಗಿಂತ, ಅಸಲಿ ಮಾತು ಹೊರಬೀಳುವ ಅಸಲಿ ಗಳಿಗೆಯ ಕುರಿತು ಸಾಮಾನ್ಯಜ್ಞಾನವೊಂದಿದ್ದರೆ ಸಾಕು ಎಂದಾಯಿತು. ನಿದ್ದೆಗೂ ಎಚ್ಚರಕ್ಕೂ ನಡುವೆ ಸಿಕ್ಕಿಬೀಳುವ ಯಾವುದೋ ಒಂದು ದಿವ್ಯ ಕ್ಷಣದಲ್ಲಿ,  ಕಲಿತ ಮಾತುಗಳೆಲ್ಲ ಮರೆತು, ಮೊದಲು ತಾಯ ಹಾಲ ಕುಡಿದು, ಲಲ್ಲೇಯಿಂದ ತೊದಲು ನುಡಿದು, ಗೆಳೆಯರೊಡನೆ ಬೆಳೆದು ಬಂದ’ ಮೊದಲ ಮಾತೇ ಮುಂದಾಗಿ ಪ್ರಕಟವಾಗುವುದು ಎಂದು ಈ ಮೇಲಿನ ಕಥೆ, ಕತೆ ಹೇಳುತ್ತಿದೆ. ಕಥೆ ಆಡುತ್ತಿರುವ ಈ ಮಾತು ನಿಜವೋ ಅಲ್ಲವೋ ಕೇಳಲಿಕ್ಕಂತೂ ಬಹಳ ಚೆನ್ನಾಗಿದೆ. ಯಾಕೆಂದರೆ, ನಮ್ಮನ್ನು ನಾವು ನಮ್ಮ ಹೆಸರು, ಚಹರೆಯಿಂದ ಹೇಗೋ ಹಾಗೆಯೇ ಆಡುವ ಮಾತಿನ ಮೂಲಕವೂ ಗುರುತಿಸಿಕೊಳ್ಳುತ್ತಿರುತ್ತೇವೆ. ಹಾಗೆ ನಮ್ಮ ಗುರುತೇ ಆದ ನಾವಾಡುವ, “ನಮ್ಮ ಮಾತು’, “ನಮ್ಮ ಭಾಷೆ’ ನಮ್ಮೊಟ್ಟಿಗೆ ಸದಾ ಇರುವುದು ಎಂಬ ಅಥವಾ ಇರಲೆಂಬ ಹಂಬಲವೂ ಇಂಥ ಕಥೆಗಳನ್ನು ಕಟ್ಟುತ್ತಿರಬಹುದೇನೋ. ಆದರೆ, ಹುಟ್ಟಿನಲ್ಲಿ ನಮ್ಮೊಡನೆ ಬರಬಹುದಾದ್ದು ಮಾತನಾಡುವ ಸಾಮರ್ಥ್ಯವೇ ಹೊರತು ಯಾವುದೇ ನಿರ್ದಿಷ್ಟ ಭಾಷೆಯೂ ಅಲ್ಲ. ಅಂದರೆ ವಂಶವಾಹಿಗಳ ಮೂಲಕ ಹರಿದು ಬರುವ ನೂರಾರು ಅನಿವಾರ್ಯ ಬೇಕಾದ್ದು, ಬೇಡದ್ದು-ಗಳಲ್ಲಿ “ಭಾಷೆ’ ಇಲ್ಲ. ಮೊದಲ ಮಾತಾದರೂ ಎರಡನೆಯ, ಮೂರನೆಯ ಮಾತಾದರೂ ಅದು ನಾವು ಕಲಿತೇ ಆಡಬೇಕಾದ ಅನಿವಾರ್ಯತೆ ನಮ್ಮದು. ಹಾಗೆಯೇ ಎಷ್ಟೋ ಸಂದರ್ಭಗಳಲ್ಲಿ ಈ ಮೊದಲನೆ, ಎರಡನೆ, ಮೂರನೇ ಎಂಬೆಲ್ಲ ಕ್ರಮಸಂಖ್ಯೆಗಳು ಅಗತ್ಯಕ್ಕೆ ತಕ್ಕಂತೆ ಜಾಗ ಬದಲಿಸಿಕೊಂಡು ಮುಂಚೂಣಿಯಲ್ಲಿ ನಿಲ್ಲುವುದೂ ಉಂಟು.
 
ಮಗುವಿನ ಪರಿಸರದಲ್ಲಿ ಇದ್ದು, ಹೀಗಾಗಿಯೇ ಅದರ ಕಿವಿಯ ಮೇಲೆ ಬಿದ್ದು, ತನ್ನ ಮನೆಮಾತು ಅಥವಾ ಮೊದಲ ಮಾತು ಆಗುವ ಭಾಷೆಯೊಂದು ಆ ಮಗು ಬೆಳೆದು ದೊಡ್ಡದಾಗಿ ಮತ್ತೂಂದೇ ಪರಿಸರದಲ್ಲಿ, ಮತ್ತೂಂದೇ ಭಾಷೆಗೆ ತನ್ನನ್ನು ಒಡ್ಡಿಕೊಂಡು, ಯಾವ ಕಾರಣಕ್ಕೋ ಮೊದಲ ಮಾತನ್ನಾಡುವ ಅವಕಾಶವೇ ಇಲ್ಲದಾದ ಮೇಲೆ, ಎಷ್ಟರ ಮಟ್ಟಿಗೆ ಜೊತೆಗೆ ಉಳಿದಿರುತ್ತದೆ?  ಇದು ಆ ಭಾಷೆಯನ್ನಲ್ಲ , ಆ ಬೆಳೆದ ಮಗುವಿನ ಆ ಹೊತ್ತಿನ ಅಗತ್ಯವನ್ನೇ ಅವಲಂಬಿಸಿದೆ ಅನ್ನಬಹುದೇನೋ. ಮ್ಯಾಂಡರೀನ್‌ ಆಡುತ್ತಿದ್ದ ಚೀನಾ ದೇಶದ ಒಂದೋ ಎರಡೋ ವರ್ಷದ ಮಗುವೊಂದು ಅಮೆರಿಕನ್‌ ಅಪ್ಪ-ಅಮ್ಮರ ದತ್ತು ಮಗುವಾಗಿ ಇಂಗ್ಲಿಶ್‌ ಪರಿಸರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ. ಬಹುಶಃ ಆ ಮಗು ಅದುವರೆಗೆ ತನ್ನದಾಗಿದ್ದ ತನ್ನ ಎಷ್ಟೋ ಅಮೂರ್ತ ಆಸ್ತಿಗಳಲ್ಲಿ ಮೊದಲಿಗೆ ಕಳೆದುಕೊಳ್ಳುವುದು ತನ್ನ ಭಾಷೆಯನ್ನೇ. 

ಇದು ಆ ಮಗು ತನ್ನ ಮೊದಲ ಮಾತಿಗೆ ಎಷ್ಟು ವರ್ಷಗಳ ಕಾಲ ತೆರೆದುಕೊಂಡಿತ್ತು ಎಂಬುದರ ಮೇಲೆ ನಿರ್ಧಾರವಾದರೂ ಕಾಲಾಂತರದಲ್ಲಿಯಾದರೂ ಮಗುವಿನ ಎರಡನೇ ಭಾಷೆಯೇ ಮೊದಲ ಮಾತಾಗುವುದು ಸಹಜ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೆಲ್ಲೋ ಹರಿಯುವ ಜೀವವೊಂದು ತನ್ನ ದಾರಿಯಲ್ಲಿ ಬಂದ ಮಾತುಗಳನ್ನೆಲ್ಲ ತನ್ನ ಅಂದಂದಿನ ಅಗತ್ಯಕ್ಕೆ ತಕ್ಕಂತೆ ತನ್ನ ಮುಂದೆಯೋ ಹಿಂದೆಯೋ ಇಟ್ಟುಕೊಂಡು ಸಾಗುವಾಗ ಎಷ್ಟೋ ಬಾರಿ “ಮೊದಲ ಮಾತು’ ಎನ್ನುವ ಮಾತಿನ ಅರ್ಥವೇ ರೂಪ ಬದಲಿಸುವ ಸಾಧ್ಯತೆಯೂ ಉಂಟು. ವಲಸೆ ಮತ್ತಿತರ ಕಾರಣಗಳಿಂದಾಗಿಯೂ ಹೊಸ ಭಾಷಿಕ ಪರಿಸರದಲ್ಲಿ ಬೆಳೆಯುವ ಹೊಸ ತಲೆಮಾರುಗಳಲ್ಲಿ ಮನೆಯ ಮಾತೊಂದು ಮೊದಲ ಮಾತಿನ ಸ್ಥಾನ ಕಳೆದುಕೊಂಡು ಕಾಲಾಂತರದಲ್ಲಿ ಇಲ್ಲದಂತೆಯೇ ಆಗಿ ಬಿಡುವ ಪರಿಸ್ಥಿತಿಯ ಹಾಗೆಯೇ ಅದನ್ನು ಸಾಧ್ಯವಾದಷ್ಟೂ ಕಾಲ ಹೇಗೋ ಜೊತೆಗಿಟ್ಟುಕೊಂಡು ಮುಂದಿನ ಪೀಳಿಗೆಗೆ ದಾಟಿಸುವ ಹಂಬಲವೂ ಸಹಜವೇ. ಯಾಕೆಂದರೆ, ಮಾತಿನ ಮೂಲಕ ಹರಿಯುವುದು ಏನೆಲ್ಲಾ, ಎಷ್ಟೆಲ್ಲಾ!  ಮಾತು ಕೇವಲ ಒಬ್ಬರಾಡುವ ಮಾತಲ್ಲ. ಸಂವಹನವೇ ಮಾತಿನ ಮೂಲ ಅಗತ್ಯವಾದರೂ ಅದು ಕೇವಲ ಇಬ್ಬರ ನಡುವಿನ ಮಾತೂ ಅಲ್ಲ. ಮಾತು ಆ ಮಾತನ್ನಾಡುವ ಇಡೀ ಸಮುದಾಯದ್ದು. ಆ ನೆಲದ ಕತೆ, ಕನಸು, ನೋವು, ನಲಿವು ಎಲ್ಲವೂ ಅಲ್ಲಲ್ಲಿನ ಮಾತಿನಲ್ಲಿ ಪಡಿಮೂಡುವ ಬಗೆಯೇ ಒಂದು ಬೆರಗು. ಆ ಬೆರಗು, ಅದು ಒದಗಿಸುವ ಅರಿವೂ ಅಲ್ಲಿನ ಮಾತಿನಲ್ಲಿಯೇ ದಕ್ಕುವ ಸೊಗಸನ್ನು ಕಾಯುವುದು ಆಡುವವರ ಅಗತ್ಯ ಅನಿವಾರ್ಯ. ಆದರೆ ಕೆಲವೊಮ್ಮೆ ಕಾಲ ದೇಶಗಳು ಒಡ್ಡುವ ಸವಾಲುಗಳಲ್ಲಿ ಸೋತು, ತಮ್ಮ ಮಾತು ಕಳೆದುಹೋಗುತ್ತಿರುವುದನ್ನು ಕಂಡು ಸಂಕಟ ಪಡುವವರ ಪಾಡೊಂದನ್ನು ಅಮೆರಿಕನ್‌ ಕವಿ W. S. Merwin ತನ್ನ ಕವಿತೆ Losing a Language- ನಲ್ಲಿ ಹೀಗೆ ಹೇಳುತ್ತಾನೆ,

ಮರಳಿ ಬಾರದಂತೆ ಹೊರಟೇ ಹೋಯಿತು ಉಸಿರು ಆ ಮಾತುಗಳಿಂದಾಚೆಗೆಆದರೂ ಈ ಮುದುಕರ ಮನದಲ್ಲಿ ಇನ್ನೂ ನೆನಪಿದೆ ಹೇಳಬಲ್ಲ ಏನೋ ಒಂದಷ್ಟುಗೊತ್ತಿದೆ ಅವರಿಗೆ ಹೇಳಿದರೂ ಅದನ್ನೀಗ ಯಾರೂ ನಂಬಲಾರರು ಎಂದು
ಎಳೆಯರಿಗಾದರೂ ಆಡಲಿಕ್ಕುಳಿದಿರುವುದು ಎಲ್ಲೋ ರವಷ್ಟು
… 
ಇಲ್ಲಿ ಕಳೆದುಹೋಗುತ್ತಿರುವುದು ಮಾತಷ್ಟೇ ಅಲ್ಲ , ಆದರೂ ಸದ್ಯಕ್ಕೆ ಅದು ಕಳೆಯುತ್ತಿರುವ ಮಾತು ಎಂದೇ ಇಟ್ಟುಕೊಳ್ಳೋಣ. ಎಲ್ಲೋ ಸ್ವಲ್ಪವಾದರೂ ಇನ್ನೂ ಉಳಿದಿದೆ ಎನ್ನುವಾಗಲೇ ಅದು ಮತ್ತೆ ಚಿಗುರಿ ಬೆಳೆಯಬಹುದೇನೋ ಎಂಬ ದೂರದ ಆಸೆಯೂ ಕವಿಯ ಮನದಲ್ಲಿ ಉಳಿದಿರುವಂತೆ ಕಾಣುತ್ತಿದೆ. ಇದು ಬರಿಯ ಕವಿ ಕಲ್ಪನೆಯಷ್ಟೇ ಅಲ್ಲ, ಎಂದೋ ಕಲಿತು, ಮರೆತ ಮೊದಲ ಮಾತಿನ ಎಂತೆಂಥಲ್ಲೋ ಶಬ್ದವಿನ್ಯಾಸಗಳ ಗುರುತು ಎಷ್ಟೋ ವರ್ಷಗಳ ಬಳಿಕವೂ ಮಿದುಳಿನಲ್ಲಿ ದಾಖಲಾಗಿ ಮತ್ತೆ ಅದರ ಗುರುತು ಹಿಡಿಯುವ ಅಚ್ಚರಿಯೊಂದನ್ನು ವಿಜ್ಞಾನವೂ ಗುರುತಿಸಿದೆ.  ಇಂಥ ಆಸೆ ಭರವಸೆಗಳೇ ಕಳೆದುಹೋಗಬಹುದಾದ ಮಾತುಗಳನ್ನೆಲ್ಲ ಅವು ಇರುವಷ್ಟು ಕಾಲವಾದರೂ ಹೇಗೋ ಉಳಿಸಿಕೊಳ್ಳಲು ಹವಣಿಸುತ್ತಿವೆ, ಲೋಕದ ಮಾತುಗಳನ್ನೆಲ್ಲ ಅವು ಇರುವಷ್ಟು ದಿನವೂ ಕಾಯುತ್ತಿವೆ.

– ಮೀರಾ ಪಿ. ಆರ್‌., ನ್ಯೂಜೆರ್ಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next