ಬೆಂಗಳೂರು: ರಾಜ್ಯದಲ್ಲಿ ಗೋವು ಮೇಲಿನ ರಾಜಕೀಯ ಕಾವು ಪಡೆದುಕೊಂಡಿದ್ದು, “ಗೋವುಗಳನ್ನು ಏಕೆ ವಧಿಸಬಾರದು’ ಎಂಬ ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ಜತೆಗೆ ಕಾಂಗ್ರೆಸ್ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ತನ್ನ ನಿಲುವು ಬದಲಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದೆ. ಈ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ.
ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು ಸಚಿವರು ಆಲೋಚನೆ ಮಾಡಬೇಕು. ಇಂತಹ ವಿಚಾರದಲ್ಲಿ ಮುಖ್ಯಮಂತ್ರಿಯವರು ಸಚಿವರಿಗೆ ಸೂಕ್ತ ಸಲಹೆ ನೀಡುವ ಆವಶ್ಯಕತೆಯಿದೆ ಎಂದಿದ್ದಾರೆ.
“ಹಸುಗಳನ್ನು ಏಕೆ ಕಡಿಯಬಾರದು’ ಎಂಬ ಸಚಿವರ ಹೇಳಿಕೆ ಹಾಗೂ ಅವರ ಮನಃಸ್ಥಿತಿ ವಿಚಿತ್ರವಾಗಿದೆ. ರಾಜ್ಯದ ಕಸಾಯಿಖಾನೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿ ನೋಡಿ, ಗೋವುಗಳ ದಾರುಣ ಅಂತ್ಯವನ್ನು ಕಣ್ಣಾರೆ ಕಂಡ ಬಳಿಕ ಮತ್ತೂಮ್ಮೆ ಆಲೋಚನೆ ಮಾಡಿ ಹೇಳಿಕೆ ನೀಡಿ ಎಂದು ಮಾಜಿ ಪಶುಸಂಗೋಪನ ಸಚಿವ ಪ್ರಭು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.
ಬಿಜೆಪಿಯ ಟೀಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಯ ಯಾರ ಮನೆಗಳಲ್ಲೂ ಹಸು ಕಟ್ಟಿಲ್ಲ, ಅವರು ಪ್ಲಾಸ್ಟಿಕ್ ಹಸುಗಳನ್ನು ಪೂಜೆ ಮಾಡುತ್ತಾರೆ. ವಯಸ್ಸಾದ ಎತ್ತು, ಬರಡು ಆಕಳುಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಶಾಸಕ ವಿನಯ್ ಕುಲಕರ್ಣಿ ಬಿಜೆಪಿಯ ಮುಂದಿಟ್ಟಿದ್ದಾರೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಪಕ್ಷ ಹಾಗೂ ವರಿಷ್ಠರು ನಿರ್ಧಾರ ಮಾಡುತ್ತಾರೆ. ನಾನು ವೈಯುಕ್ತಿಕವಾಗಿ ಹೇಳಿಕೆ ನೀಡುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
Related Articles
ಸಚಿವರ ಹೇಳಿಕೆ ಖಂಡನೀಯ: ಬೊಮ್ಮಾಯಿ
ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಬೊಮ್ಮಾಯಿ, ಸಚಿವರು ಇಂಥ ಹೇಳಿಕೆ ನೀಡುತ್ತಿರುವುದು ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೋ ಅಥವಾ ಹೈಕಮಾಂಡ್ ಮೆಚ್ಚಿಸಲೆಂದೋ ಎಂದು ಪ್ರಶ್ನಿಸಿದ್ದಾರೆ. ಭಾರತೀಯರಾದ ನಾವು ಗೋವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ ಎಂದಿದ್ದಾರೆ.
ಉಗ್ರ ಹೋರಾಟ: ರವಿಕುಮಾರ್
ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. 1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಲಾಗಿದೆ. ಆದರೆ ಸಿದ್ದರಾಮಯ್ಯ ಸರಕಾರವು ಗೋಹತ್ಯೆಗೆ ಅವಕಾಶ ಮಾಡಿಕೊಡಲು ಹೊರಟಿದೆ. ಕಾನೂನು ರದ್ದು ಪ್ರಸ್ತಾವವನ್ನು ಬಿಜೆಪಿ ಖಂಡಿಸುತ್ತದೆ. ಒಂದೊಮ್ಮೆ ಗೋಹತ್ಯೆ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗೋವಿನೊಂದಿಗಿನ ಮಾನವನ ಸಂಬಂಧ ತಾಯಿ -ಮಗುವಿನ ಸಂಬಂಧದಷ್ಟೇ ಪವಿತ್ರವಾದದ್ದು. ನಮ್ಮ ಸರಕಾರ ಗೋ ರಕ್ಷಣೆಗೆ ಕಂಕಣಬದ್ಧವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಪಶುಗಳನ್ನು ರಕ್ಷಿಸಬೇಕಾದ ಸಚಿವರೇ ಇಂತಹ ಹೇಳಿಕೆ ನೀಡಿರುವುದು ಗೋವುಗಳ ಕಳ್ಳ ಸಾಗಣೆ, ಗೋ ಹತ್ಯೆಗೆ ಹಿಂದಿನ ಬಾಗಿಲಿನಿಂದ ಒಪ್ಪಿಗೆ ಕೊಟ್ಟಂತಿದೆ. ಸಚಿವರಿಗೆ ಗೋವುಗಳ ಬಗ್ಗೆ ತಾತ್ಸಾರವೋ ಅಥವಾ ತಮ್ಮ ಖಾತೆಯ ಬಗ್ಗೆ ತಾತ್ಸಾರವೋ? ಅದೇನೇ ಇದ್ದರೂ ಇಂತಹ ಹೇಳಿಕೆ ನೀಡುವುದು ಆ ಹು¨ªೆಯ ಘನತೆಗೆ ತಕ್ಕುದಲ್ಲ.
– ಡಾ| ಅಶ್ವತ್ಥನಾರಾಯಣ, ಮಾಜಿ ಸಚಿವ