Advertisement

OnePlus Pad Go: ಏನಿದೆ ಈ ಟ್ಯಾಬ್ಲೆಟ್ ನೊಳಗೆ?

06:42 PM Nov 17, 2023 | Team Udayavani |

ಈ ವರ್ಷದ ಏಪ್ರಿಲ್ ಅಂತ್ಯದಲ್ಲಿ, OnePlus ತನ್ನ ಮೊದಲ ಟ್ಯಾಬ್ಲೆಟ್ OnePlus Pad ಬಿಡುಗಡೆ ಮಾಡಿತ್ತು. 38 ಸಾವಿರ ರೂ. ಬೆಲೆಯ ಆ ಟ್ಯಾಬ್‍ ಪ್ರೀಮಿಯಂ ಫೀಚರ್‍ ಗಳೊಂದಿಗೆ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಿತ್ತು.

Advertisement

ಒನ್ ಪ್ಲಸ್ ಕಂಪೆನಿ ಇದೀಗ ವರ್ಷಾಂತ್ಯದಲ್ಲಿ ಬಜೆಟ್ ದರದ ಇನ್ನೊಂದು ಟ್ಯಾಬ್ ಅನ್ನು ಹೊರತಂದಿದೆ. ಅದುವೇ OnePlus Pad Go.

ಇದು ಮೂರು ಆವೃತ್ತಿಗಳಲ್ಲಿ ಲಭ್ಯ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ, ವೈಫೈ ಮಾತ್ರ ಮಾದರಿಗೆ 19,999 ರೂ., 8 ಜಿಬಿ+128 ಜಿಬಿ, 4G ಸಿಮ್‍+ ವೈಫೈ ಮಾದರಿಗೆ 21,999 ರೂ. ಹಾಗೂ 8 ಜಿಬಿ+256 4G ಸಿಮ್ + ವೈಫೈ ಮಾದರಿಗೆ 23999 ರೂ. ದರವಿದೆ. ಪ್ರಸ್ತುತ ಅಮೆಜಾನ್ ನಲ್ಲಿ ಐಸಿಐಸಿಐ ಕಾರ್ಡ್ ಗೆ 2000 ರೂ. ರಿಯಾಯಿತಿ ಸಹ ಇದೆ.

ಈ ಹೊಸ ಟ್ಯಾಬ್ಲೆಟ್ ನ ಅಂಶಗಳು, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ. 

ಪರದೆ: OnePlus Pad Go 11.35 ಇಂಚಿನ IPS LCD 2.4k ಪರದೆ ಹೊಂದಿದೆ. 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಸರಾಗವಾಗಿ ಪರದೆಯನ್ನು ಸರಿಸಬಹುದಾಗಿದೆ.   OnePlus Pad Go 7:5 ಆಕಾರ ಅನುಪಾತ ಹೊಂದಿದೆ. ಗರಿಷ್ಠ ಹೊಳಪು 400 ನಿಟ್ಸ್ ಇದೆ.  ಪರದೆಯ ಗುಣಮಟ್ಟ ಅದರ ದರಕ್ಕೆ ಹೋಲಿಸಿದಾಗ ಚೆನ್ನಾಗಿದೆ. ಪರದೆಯ ಅಳತೆಯೂ ವಿಶಾಲವಾಗಿದೆ. ಕಣ್ಣಿಗೆ ತ್ರಾಸವಾಗದಂತೆ ಲೋ ಬ್ಲೂ ಲೈಟ್ ಅನ್ನು ಪರದೆ ಹೊಂದಿದೆ.  (TUV Rheinland Certified) ಇದರಿಂದಾಗಿ ಹೆಚ್ಚು ಸಮಯ ಟ್ಯಾಬ್ ಬಳಸಿದಾಗಲೂ ಕಣ್ಣಿಗೆ ಆಯಾಸವಾಗುವುದಿಲ್ಲ.

Advertisement

ವಿನ್ಯಾಸ: ಟ್ಯಾಬ್ ನ ಮೇಲ್ಭಾಗದ ಮಧ್ಯದಲ್ಲಿ ಕ್ಯಾಮೆರಾ ಇರುವ ವಿನ್ಯಾಸವನ್ನು ಹೊಂದಿದೆ. OnePlus Pad Go ಸ್ಲಿಮ್ ಆಗಿದ್ದು ಕೇವಲ 6.88mm ಮಂದವಾಗಿದೆ. ಮತ್ತು 532 ಗ್ರಾಂ ತೂಕವಿದ್ದು ಬಹಳ ಹಗುರವಾಗಿದೆ. ಬಾಗಿದ ಗಾಜಿನ ಪರದೆ, ಬಾಗಿದ ಅಂಚುಗಳು ಮತ್ತು ಮೂಲೆಗಳು ಅರ್ಧ ವೃತ್ತಾಕಾರಾಗಿವೆ. ಸ್ಲಿಮ್ ಮತ್ತು ಹಗುರ ಇರುವುದರಿಂದ ಟ್ಯಾಬ್ ಕೈಯಲ್ಲಿ ಹಿಡಿಯಲು ಅನುಕೂಲಕರವಾಗಿದೆ.

ಈ ಟ್ಯಾಬ್ಲೆಟ್ ನಾಲ್ಕು ಸ್ಪೀಕರ್ ಗಳನ್ನು ಹೊಂದಿದೆ. (ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ) ಮತ್ತು ಓಮ್ನಿಬೇರಿಂಗ್ ಸೌಂಡ್ ಫೀಲ್ಡ್ ತಂತ್ರಜ್ಞಾನವನ್ನು ಒಳಗೊಂಡಿದೆ. ಆಡಿಯೊ ಸ್ವಯಂಚಾಲಿತವಾಗಿ ಬಲ ಮತ್ತು ಎಡ ಆಡಿಯೊ ಚಾನಲ್ ನಡುವೆ ಬದಲಾಗುತ್ತದೆ.

USB ಟೈಪ್-C ಪೋರ್ಟ್ ಹೊಂದಿದ್ದು, ಎಡಭಾಗದಲ್ಲಿ SIM ಟ್ರೇ ಇದೆ. (ಆರಂಭಿಕ ಮಾದರಿ ಹೊರತುಪಡಿಸಿ). ಇದರಲ್ಲಿ 4ಜಿ ಸಿಮ್ ಬಳಸಬಹುದಾಗಿದೆ. ಹೆಚ್ಚು ಪ್ರಯಾಣ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.

ಇದರಲ್ಲಿ 256 ಜಿಬಿಯವರೆಗೆ ಆಂತರಿಕ ಸಂಗ್ರಹ ಸೌಲಭ್ಯ ಇದ್ದು, ಮೆಮೊರಿ ಕಾರ್ಡ್ ಸ್ಲಾಟ್ ಇರುವುದರಿಂದ 1 ಟಿಬಿಯವರಗೂ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳಬಹುದು.

OnePlus Pad Go ನ ಮೇಲ್ಭಾಗವು ಎರಡು ವಾಲ್ಯೂಮ್ ಕೀಗಳು ಮತ್ತು ಮೈಕ್ರೊಫೋನ್ ಅನ್ನು ಒಳಗೊಂಡಿದೆ. ತಳಭಾಗದಲ್ಲಿ ಯಾವುದೇ ಕನೆಕ್ಟರ್ ಪಿನ್ ಗಳನ್ನು ಹೊಂದಿಲ್ಲ. OnePlus Pad Go ನೊಂದಿಗೆ ಕೀಬೋರ್ಡ್ ಅನ್ನು ಬಳಸಲು ಬಯಸಿದರೆ, ಬೇರೆಯ ಬ್ಲೂಟೂತ್ ಕೀಬೋರ್ಡ್ ಬಳಸಬೇಕು.

ಪ್ರೊಸೆಸರ್ ಮತ್ತು ಯೂಐ: OnePlus Pad Go ಮೈಕ್ರೋಟೆಕ್ Helio G99 ಚಿಪ್ ಸೆಟ್ ಹೊಂದಿದೆ. ಇದೊಂದು ಮಧ್ಯಮ ವಲಯದ ಪ್ರೊಸೆಸರ್ ಆಗಿದೆ. (ಎಂಟು ಕೋರ್ 2.2 ಗಿಗಾಹರ್ಟ್ಜ್) ದೈನಂದಿನ ಬಳಕೆಗಾಗಿ, OnePlus Pad Go ಲೀಲಾಜಾಲವಾಗಿ ಕೆಲಸ ನಿರ್ವಹಿಸುತ್ತದೆ. ಹೆಚ್ಚಿನ ಸಂಖ್ಯೆಯ Google Chrome ಟ್ಯಾಬ್ ಗಳನ್ನು ತೆರೆದಾಗಲೂ ಕಾರ್ಯಾಚರಣೆಯಲ್ಲಿ ವಿಳಂಬ ಕಾಣಲಿಲ್ಲ. ಅಪ್ಲಿಕೇಷನ್ ಗಳು ವೇಗವಾಗಿ ತೆರೆದುಕೊಂಡವು. ವಿದ್ಯಾರ್ಥಿಗಳ ವ್ಯಾಸಂಗದಂಥ ಕೆಲಸಗಳಿಗೆ ಪ್ಯಾಡ್ ಸೂಕ್ತವಾಗಿದೆ.

ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿದ OxygenOS 13.2 ಅನ್ನು ಹೊಂದಿದೆ.  ಎರಡು ವರ್ಷಗಳ Android OS ಅಪ್ ಡೇಟ್ ಜೊತೆಗೆ 3 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ. OxygenOS 13 ಕಂಪನಿಯ ಉತ್ತಮ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಒಂದಾಗಿದೆ. ಇದು ಅನೇಕ ಕಸ್ಟಮೈಸ್ ಆಯ್ಕೆಗಳು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪೋಟ್ರೇಟ್ ಮೋಡ್ ಅಥವಾ ಲ್ಯಾಂಡ್ ಸ್ಕೇಪ್ ನಲ್ಲಿ ಬಳಸಬಹುದಾಗಿದೆ.

ಕ್ಯಾಮೆರಾ: OnePlus Pad Go ನಲ್ಲಿ ಒಂದೇ 8MP ಹಿಂಬದಿಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಇದೆ. ವಿಡಿಯೋ ಕರೆಗಳಿಗೆ ಈ ಕ್ಯಾಮರಾ ಸಾಕು. ಪ್ಯಾಡ್ ಗಳಲ್ಲಿ ಸ್ಮಾರ್ಟ್ ಫೋನ್ ನಲ್ಲಿ ಬರುವ ಗುಣಮಟ್ಟದ ಕ್ಯಾಮರಾ ಅಗತ್ಯ ಬೀಳುವುದಿಲ್ಲ.

ಬ್ಯಾಟರಿ: OnePlus Pad Go ದೊಡ್ಡದಾದ 8,000mAh ಬ್ಯಾಟರಿ  ಹೊಂದಿದೆ. ಇದಕ್ಕೆ 33W SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಇದೆ.  OnePlus ಹೇಳುವಂತೆ Pad Go 14 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್, 40 ಗಂಟೆಗಳ ಸಂಗೀತ ಮತ್ತು 514 ಗಂಟೆಗಳ ಸ್ಟ್ಯಾಂಡ್ ಬೈ ಅನ್ನು ನೀಡುತ್ತದೆ. ಸಾಧಾರಣ ಬಳಕೆಗೆ ಎರಡು ದಿನಗಳ ಬಾಳಿಕೆ ಬರುತ್ತದೆ. 33 ವ್ಯಾಟ್ಸ್ ವೇಗದ ಚಾರ್ಜರ್ ಇರುವುದು ಅತ್ಯಂತ ಅನುಕೂಲಕರ. ಕೆಲವು ಬ್ರಾಂಡ್ ಗಳಲ್ಲಿ ಬೆಲೆ ಹೆಚ್ಚಿದ್ದರೂ, 15 ವ್ಯಾಟ್ ಅಷ್ಟೇ ವೇಗದ ಚಾರ್ಜಿಂಗ್ ಇರುತ್ತದೆ.

ಉತ್ತಮ ಸಾಫ್ಟ್ವೇರ್, ಹೆಚ್ಚಿನ ಬ್ಯಾಟರಿ ಬಾಳಿಕೆ, ಸೂಪರ್ ವೂಕ್ ವೇಗದ ಚಾರ್ಜಿಂಗ್, ಹಗುರ ಮತ್ತು ಸ್ಲಿಮ್ ವಿನ್ಯಾಸ ಹೊಂದಿರುವ ಈ ಟ್ಯಾಬ್ YouTube, ವೆಬ್ ಸರ್ಫಿಂಗ್, ವಿದ್ಯಾರ್ಥಿಗಳ ವ್ಯಾಸಂಗದ ಉಪಯೋಗಕ್ಕೆ, ಆನ್ ಲೈನ್ ಬುಕ್ ರೀಡಿಂಗ್ ಇತ್ಯಾದಿ ಕೆಲಸಗಳಿಗೆ ಕೈಗೆಟುಕುವ ದರದ ಉತ್ತಮ ಆಯ್ಕೆ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next