Advertisement

ನಿಯೋಜನೆಯಲ್ಲಿ ಬಿಮ್ಸ್‌ ವಿವಾದಕ್ಕೆ ಗುರಿ

03:08 PM Jul 31, 2022 | Team Udayavani |

ಬೆಳಗಾವಿ: ಸುಧಾರಣೆಯ ವಿಷಯದಲ್ಲಿ ದೇಶದಲ್ಲಿ 12ನೇ ಸ್ಥಾನಗಳಿಸಿ ಹೆಮ್ಮೆಯ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಈಗ ವೈದ್ಯರ ನಿಯೋಜನೆ ವಿಷಯದಲ್ಲಿ ವಿವಾದಕ್ಕೆ ಗುರಿಯಾಗಿದೆ.

Advertisement

ತಾಲೂಕು ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡುತ್ತಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರೆ, ಆರೋಗ್ಯ ಇಲಾಖೆಯ ಈ ಕ್ರಮ ಸ್ಥಳೀಯ ಶಾಸಕರ ಕಂಗೆಣ್ಣಿಗೆ ಗುರಿಯಾಗಿದೆ. ಇದಕ್ಕೆ ಈಗ ಖಾನಾಪುರ ತಾಲೂಕು ಆಸ್ಪತ್ರೆ ಹೊಸ ಸೇರ್ಪಡೆಯಾಗಿದೆ.

ಮೊದಲೇ ತಾಲೂಕು ಆಸ್ಪತ್ರೆಗಳು ವೈದ್ಯರ ಕೊರತೆ ಎದುರಿಸುತ್ತಿವೆ. ಜಿಲ್ಲಾಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಯಾವಾಗಲೂ ಇದು ಪ್ರಮುಖವಾಗಿ ಚರ್ಚೆಯಾಗುತ್ತಲೇ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಸದಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಗುರಿ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ತಾಲೂಕು ಆಸ್ಪತ್ರೆಯಲ್ಲಿರುವ ಒಬ್ಬರೋ ಇಬ್ಬರು ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡುವುದು ಎಷ್ಟು ಸರಿ ಎಂಬುದು ಶಾಸಕರ ಹಾಗೂ ಸಾರ್ವಜನಿಕರ ಪ್ರಶ್ನೆ.

ಜಿಲ್ಲೆಯಲ್ಲಿ ಒಟ್ಟು 92 ವೈದ್ಯರ ಕೊರತೆ ಇದೆ. ಅದರಲ್ಲಿ 42 ಜನ ತಜ್ಞ ವೈದ್ಯರು ಇಲ್ಲ. 17 ಎಂಬಿಬಿಎಸ್‌ ವೈದ್ಯರ ಕೊರತೆ ಇದೆ. ಇದರ ಮಧ್ಯೆ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ವಿವಿಧ ತಾಲೂಕು ಆಸ್ಪತ್ರೆಗಳಿಂದ ಆರು ಜನ ವೈದ್ಯರು ಮತ್ತು ಐದು ಜನ ಸಿಬ್ಬಂದಿಗಳನ್ನು ಬಿಮ್ಸ್‌ಗೆ ನಿಯೋಜನೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ ಬುದನೂರಿನ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಬೆಳಗಾವಿಗೆ ವರ್ಗ ಮಾಡಿರುವ ಕಾರಣ ಅಲ್ಲಿ ಉಳಿದ ಸಿಬ್ಬಂದಿ ವೇತನ ಬಟವಾಡೆ ಪ್ರಕ್ರಿಯೆಗೆ ತೊಂದರೆಯಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿಗಳ ಹೇಳಿಕೆ.

ವೈದ್ಯರ ನಿಯೋಜನೆ ವಿಷಯ ಕಳೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದಿದ್ದರು. ಈಗ ಅದೇ ರೀತಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಚರ್ಮರೋಗ ತಜ್ಞೆ ಡಾ|ತಸ್ಲೀಮ ಬಾನು, ಅರವಳಿಕೆ ತಜ್ಞ ಡಾ|ಭುವೇಂದ್ರ ಭೂಷಣ್‌, ತಜ್ಞ ವೈದ್ಯೆ ಡಾ| ಸರಳಾ ತಿಪ್ಪನ್ನವರ ಈ ಮೂವರನ್ನು ಬಿಮ್ಸ್‌ ವಿಶೇಷಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್‌ ಬಿಸ್ವಾಸ್‌ ಅವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನಿಯೋಜನೆ ಮಾಡಿದ್ದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಹಮತವೂ ಇತ್ತು. ಅವರ ಗಮನಕ್ಕೆ ತಂದೇ ಈ ಆದೇಶ ಮಾಡಲಾಗಿತ್ತು. ಆದರೆ ಸ್ಥಳೀಯ ಶಾಸಕಿ ಅಂಜಲಿ ನಿಂಬಾಳಕರ ಅವರ ಗಮನಕ್ಕೆ ತಂದಿರಲಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ.

ಬಹಳ ಕಷ್ಟಪಟ್ಟು ಖಾನಾಪುರ ತಾಲೂಕು ಆಸ್ಪತ್ರೆಗೆ ವೈದ್ಯರ ನೇಮಕ ಮಾಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಆರೋಗ್ಯ ಸಚಿವರ ಮೇಲೆ ತೀವ್ರ ಒತ್ತಡ ಹಾಕಲಾಗಿತ್ತು. ನಮ್ಮ ಕಳಕಳಿಗೆ ಸ್ಪಂದಿಸಿದ್ದಾರೆ. ಹೀಗಿರುವಾಗ ನಮ್ಮ ಗಮನಕ್ಕೆ ತರದೆ ಇಲ್ಲಿಯ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡಿದ್ದು ಏಕೆ? ಇನ್ನು ನಾಲ್ಕೈದು ದಿನಗಳಲ್ಲಿ ನಮ್ಮ ಮೂರು ವೈದ್ಯರು ನಮಗೆ ವಾಪಸ್‌ ಬೇಕು ಎಂದು ಖಾರವಾಗಿ ಹೇಳಿದ್ದಾರೆ.

ಆದರೆ ಈ ವಿಷಯದಲ್ಲಿ ಅಸಹಾಯಕರಾಗಿರುವ ಡಿಎಚ್‌ಒ ಡಾ|ಮಹೇಶ್‌ ಕೋಣಿ ಅವರು ನಾನು ಡೆಪ್ಯುಟೇಶನ್‌ ಮೇಲೆ ಕಳಿಸಿಲ್ಲ, ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದಾರೆ. ಇದರ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಅವರು ನೀಡುವ ಆದೇಶ ಪಾಲನೆ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ಈ ಹಿಂದೆ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಎನಿಸಿದರೆ ಹಾಗೂ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು ವಾರದಲ್ಲಿ ಒಂದು ದಿನ ಅಂತಹ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಚಿಕಿತ್ಸೆ ನೀಡಬೇಕು ಎಂದು ಸರಕಾರ ಆದೇಶ ಮಾಡಿತ್ತು. ಈ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲೇ ಇಲ್ಲ. ಆದರೆ ಆದರೆ ಈಗ ಇದು ತದ್ವಿರುದ್ಧವಾಗಿದೆ. ನಮ್ಮಲ್ಲಿ ವೈದ್ಯರ ಕೊರತೆ ಇದ್ದರೂ ನಾವೇ ಜಿಲ್ಲಾಸ್ಪತ್ರೆಗೆ ವೈದ್ಯರ ಸೇವೆ ನೀಡುತ್ತಿದ್ದೇವೆ ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆ.

ಖಾನಾಪುರ ತಾಲೂಕು ಆಸ್ಪತ್ರೆಯಿಂದ ಮೂವರು ವೈದ್ಯರನ್ನು ಬಿಮ್ಸ್‌ಗೆ ನಿಯೋಜನೆ ಮಾಡಲಾಗಿದೆ. ಬಿಮ್ಸ್‌ನ ವಿಶೇಷ ಅಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತರು ಈ ಆದೇಶ ಮಾಡಿದ್ದಾರೆ. ಇದರಿಂದ ಖಾನಾಪುರ ಆಸ್ಪತ್ರೆಯಲ್ಲಿ ಸಮಸ್ಯೆಯಾಗಿದೆ. ಇದನ್ನು ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಅವರ ನಿರ್ದೇಶನದ ಪ್ರಕಾರ ಕ್ರಮಕೈಗೊಳ್ಳಲಾಗುವುದು. –ಡಾ| ಮಹೇಶ ಕೋಣಿ, ಜಿಲ್ಲಾ ಆರೋಗ್ಯಾಧಿಕಾರಿ

ಆರೋಗ್ಯ ಇಲಾಖೆಯ ಕ್ರಮ ಸರಿಯಾಗಿಲ್ಲ. ಪ್ರಾದೇಶಿಕ ಆಯುಕ್ತರು ಈ ವಿಷಯದಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ನಾನು ಸಾಕಷ್ಟು ಪ್ರಯತ್ನ ಮಾಡಿ ಆರೋಗ್ಯ ಸಚಿವರ ಮೇಲೆ ಸತತ ಒತ್ತಡ ತಂದು ಮೂವರು ವೈದ್ಯರನ್ನು ಆಸ್ಪತ್ರೆಗೆ ತಂದಿದ್ದೇನೆ. ಜನರಿಗೆ ಅನುಕೂಲವಾಗಿದೆ. ಹೀಗಿರುವಾಗ ನನ್ನ ಗಮನಕ್ಕೆ ತರದೇ ಈ ಮೂವರೂ ವೈದ್ಯರನ್ನು ಬಿಮ್ಸ್‌ ಗೆ ನಿಯೋಜನೆ ಮಾಡಿರುವುದು ಆತುರದ ಕ್ರಮ. ಕೂಡಲೇ ಈ ಆದೇಶ ರದ್ದುಮಾಡಬೇಕು. –ಅಂಜಲಿ ನಿಂಬಾಳಕರ, ಖಾನಾಪುರ ಶಾಸಕರು

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next