ಮಹಾನಗರ: ದೀಪಾವಳಿ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ ಪುನಸ್ಕಾರಗಳು ಜರಗಿದವು. ಗೋಪೂಜೆ, ವಾಹನ ಪೂಜೆ, ಬಲಿಯೇಂದ್ರ ಪೂಜೆಗಳನ್ನು ನೆರವೇರಿಸಲಾಯಿತು.
ಸೋಮವಾರ ದೀಪಾವಳಿ ಹಾಗೂ ಬಲಿಪಾಡ್ಯಮಿ ದಿನ. ಈ ಹಿನ್ನೆಲೆ ಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಾಹನಪೂಜೆ, ಬಲಿಯೇಂದ್ರ ಪೂಜೆ, ಗೋಪೂಜೆಯನ್ನು ಈ ದಿನದಂದು ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ದೇವಸ್ಥಾನಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡರು. ವಾಹನಗಳನ್ನು ದೇವಸ್ಥಾನಗಳಿಗೆ ಕೊಂಡೊಯ್ದು ಪೂಜೆಯನ್ನು ನೆರವೇರಿ ಸಿದರು. ನಿತ್ಯಪೂಜೆಗಳೊಂದಿಗೆ ದೀಪಾವಳಿ ವಿಶೇಷ ಪೂಜೆಗಳು ನಡೆದವು. ಕೆಲವು ದೇವಸ್ಥಾನಗಳಲ್ಲಿ ಬಲಿಯೇಂದ್ರ ಪೂಜೆ ಮಂಗಳವಾರದಂದು ನೆರವೇರಲಿದೆ.
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ 100ಕ್ಕೂ ಹೆಚ್ಚು ಗೋವುಗಳಿಗೆ ಗೋಪೂಜೆ ನಡೆಯಿತು. ಗೋವುಗಳಿಗೆ ಹೂಹಾರ ಹಾಕಿ, ಆರತಿ ಬೆಳಗಲಾಯಿತು. ರವಿವಾರ ರಾತ್ರಿ ದೇವಸ್ಥಾನದಲ್ಲಿ ಬಲಿಯೇಂದ್ರ ಪೂಜೆ ಜರಗಿತು. ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ರಾಮ್ ನಾಯಕ್, ಪ್ರೇಮಲತಾ, ಗೋವನಿತಾಶ್ರಯ ಟ್ರಸ್ಟಿನ ಎಲ್. ಶ್ರೀಧರ ಭಟ್, ಲಕ್ಷೀಶ ಯಡಿಯಾಲ್, ಪ್ರವೀಣ್ ಕುತ್ತಾರ್, ಪ್ರೇಮಲತಾ ಆಚಾರ್, ಮಂಗಳಾ, ಶಾರದಮ್ಮ ಭಾಗವಹಿಸಿದ್ದರು.
ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಗೋಪೂಜೆ, ವಾಹನ ಪೂಜೆ, ರಾತ್ರಿ ಬಲಿಯೇಂದ್ರ ಪೂಜೆ, ತುಳಸಿ ಪೂಜೆ ಜರಗಿತು. ಕದ್ರಿ ದೇವಸ್ಥಾನದಲ್ಲಿ ರಾತ್ರಿ ದೇವರ ಬಲಿ ಹೊರಟು ಕೆಳಗಿನ ಕಟ್ಟೆಯಲ್ಲಿ ಪೂಜಾವಿಧಿಗಳು ಜರಗಿದವು. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ್ನ ಗೋಪೂಜೆ, ರಾತ್ರಿ ಬಲಿಯೇಂದ್ರ ಪೂಜೆ ಜರಗಿತು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ರವಿವಾರ ಬಲಿಯೇಂದ್ರ ಪೂಜೆ, ಮಹಾಪೂಜಾದಿಗಳು ಜರಗಿದವು. ರಥಬೀದಿ ಕಾಳಿಕಾಂಬಾ ಶ್ರೀ ವಿನಾಯಕ ದೇವಸ್ಥಾದಲ್ಲಿ ರಾತ್ರಿ ಗೋ-ಪೂಜೆ, ಬಲಿಯೇಂದ್ರ ಪೂಜೆ ನಡೆಯಿತು. ದೀಪಾವಳಿ ಹಿನ್ನೆಲೆಯಲ್ಲಿ ಪೊಳಲಿ ಮಾದುಕೋಡಿಯ ಕೊರಗಜ್ಜ ದೈವ ಸಾನಿಧ್ಯದ ಶ್ರೀಸಾಯಿ ಹೀಲಿಂಗ್ ಸೆಂಟರ್ ಆಶ್ರಯದಲ್ಲಿ ಕ್ಷೀರ ಅನ್ನ ಸೇವೆ ಹಾಗೂ ದೀಪಾರಾಧನೆ ನೆರವೇರಿತು. ನೂರಾರು ಭಕ್ತರು ಭಾಗವಹಿಸಿದ್ದರು.
ಬಪ್ಪನಾಡು ದೇವಸ್ಥಾನದಲ್ಲಿ ದೀಪಾವಳಿ ಪೂಜೆ
ಮೂಲ್ಕಿ: ನಗರದೆಲ್ಲೆಡೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಸೋಮವಾರದಂದು ಸಾರ್ವಜನಿಕರು ದೇಗುಲ ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮತ್ತು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ವಿಶೇಷ ಪೂಜೆ ಜರಗಿದವು. ದೇವಸ್ಥಾನದಲ್ಲಿ ಆಯುಧ ಪೂಜೆಯ ಪ್ರಯುಕ್ತವಾಗಿ ವಾಹನಗಳಿಗೆ ಪೂಜೆ ಮಾಡಿಸಿದರು.