Advertisement

ಅಷ್ಟಮಿಗೆ ತಯಾರಿಸಿ ಹೊಸ ಬಗೆ

06:42 PM Aug 29, 2019 | Sriram |

ಆಗಸ್ಟ್‌ ತಿಂಗಳು ಆರಂಭವಾದಂತೆ ಸಾಲು ಸಾಲು ಹಬ್ಬಗಳು ಬರತೊಡಗುತ್ತವೆ. ಕೃಷ್ಣ ಜನ್ಮಾಷ್ಟಮಿಯೂ ಅವು ಗಳಲ್ಲಿ ಒಂದು. ಕೆಲವು ಹಬ್ಬ ಗಳಿಗೆ ಅವುಗಳದ್ದೇ ಆದ ವಿಶೇಷ ತಿಂಡಿಗಳಿರುತ್ತವೆ. ಅವುಗಳನ್ನು ಒಂದೊಂದು ಊರುಗಳಲ್ಲಿ ಬೇರೆ ಬೇರೆ ವಿಧಗಳಲ್ಲಿ ತಯಾರಿ ಸುತ್ತಾರೆ. ಈ ಅಷ್ಟಮಿಗೆ ತಯಾರಿಸಲು ಕೆಲವು ಸಿಹಿತಿಂಡಿಗಳು ಇಲ್ಲಿವೆ.

Advertisement

ಪಂಚಕಜ್ಜಾಯ
ಬೇಕಾಗುವ
ಸಾಮಗ್ರಿಗಳು
ಉದ್ದಿನ ಬೇಳೆ: ಅರ್ಧ ಕಪ್‌
ತೆಂಗಿನ ತುರಿ: ಒಂದು ಕಪ್‌
ಬೆಲ್ಲ: ಅರ್ಧ ಕಪ್‌
ಗೋಡಂಬಿ, ಬಾದಾಮಿ: ಸ್ವಲ್ಪ
ತುಪ್ಪ: 4 ಚಮಚ

ಮಾಡುವ ವಿಧಾನ
ಉದ್ದಿನ ಬೇಳೆಯನ್ನು ಕೆಂಬಣ್ಣ ಬರುವವರೆಗೆ ಹುರಿದಿಟ್ಟುಕೊಳ್ಳಬೇಕು. ಅನಂತರ ತೆಂಗಿನ ತುರಿಯನ್ನು ಹುರಿಯಬೇಕು. ಬೆಲ್ಲ ಹಾಗೂ ಹುರಿದ ಉದ್ದಿನ ಬೇಳೆ, ತೆಂಗಿನ ತುರಿಯನ್ನು ನೀರು ಸೇರಿಸದೆ ಮೃದುವಾಗುವವರೆಗೆ ಅರೆಯಬೇಕು ಅಥವಾ ಹುಡಿ ಮಾಡಿಟ್ಟುಕೊಳ್ಳಬೇಕು. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಅದಕ್ಕೆ ಗೋಡಂಬಿ ಬಾದಾಮಿಯನ್ನು ಹಾಗೂ ಬಿಸಿ ಮಾಡಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ಆಗ ಪಂಚಕಜ್ಜಾಯ ಸವಿಯಲು ಸಿದ್ಧವಾಗುತ್ತದೆ.

ಅವಲಕ್ಕಿ ಲಡ್ಡು
ಬೇಕಾಗುವ
ಸಾಮಗ್ರಿಗಳು
ಅವಲಕ್ಕಿ ಒಂದು ಕಪ್‌
ಬೆಲ್ಲ: ಅರ್ಧ ಕಪ್‌
ತುಪ್ಪ: ಐದು ಚಮಚ
ಏಲಕ್ಕಿ : ಸ್ವಲ್ಪ
ಕೊಬ್ಬರಿ ತುರಿ: ಕಾಲು ಕಪ್‌
ಬಾದಾಮಿ, ಗೋಡಂಬಿ: ಸ್ವಲ್ಪ


ಮೊದಲು ಅವಲಕ್ಕಿಯನ್ನು ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.ಅನಂತರ ಮಿಕ್ಸಿ ಜಾರಿಗೆ ಅವಲಕ್ಕಿ, ಕೊಬ್ಬರಿ ತುರಿ, ಬೆಲ್ಲ, ಏಲಕ್ಕಿಯನ್ನು ಹಾಕಿ ನೀರು ಸೇರಿಸದೆ ಹುಡಿ ಮಾಡಬೇಕು. ಒಂದು ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಅದಕ್ಕೆ ಗೋಡಂಬಿ, ಬಾದಾಮಿಯನ್ನು ಸೇರಿಸಬೇಕು. ತುಪ್ಪವನ್ನು ಬಿಸಿ ಮಾಡಿ ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ನಾದಿಕೊಳ್ಳಬೇಕು. ಮಿಶ್ರಣ ಅಂಟಾದಾಗ ಉಂಡೆ ಕಟ್ಟಬೇಕು. ಅಲ್ಲಿಗೆ ಅವಲಕ್ಕಿ ಲಡ್ಡು ಸಿದ್ಧವಾಗುತ್ತದೆ.

ಕಡಲೇ ಬೀಜ ಉಂಡೆ
ಬೇಕಾಗುವ
ಸಾಮಗ್ರಿಗಳು
ಕಡಲೇ ಬೀಜ: ಕಾಲು ಕಪ್‌
ಬೆಲ್ಲ: ಕಾಲು ಕಪ್‌
ನೀರು: ಸ್ವಲ್ಪ
ತುಪ್ಪ: 2 ಚಮಚ


ಮಾಡುವ ವಿಧಾನ
ಕಡಲೇ ಬೀಜವನ್ನು ಚೆನ್ನಾಗಿ ಹುರಿದು ಒಂದು ಬಟ್ಟೆಯ ಮೇಲೆ ಹರಡಬೇಕು. ಕೈಯಿಂದ ಹೀಗೆ ಲಟ್ಟಿಸಿ ಬೀಜದ ಸಿಪ್ಪೆ ತೆಗೆದು ಬೀಜವನ್ನು ಸ್ವಲ್ಪ ಕುಟ್ಟಿ ಹುಡಿ ಮಾಡಬೇಕು. ಒಂದು ಪಾತ್ರೆಯಲ್ಲಿ ಬೆಲ್ಲದ ರವೆ ಮಾಡಿಕೊಂಡು ಹುಡಿ ಮಾಡಿದ ಕಡಲೇ ಬೀಜವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದು ಗಟ್ಟಿಯಾಗುವಾಗ ಉಂಡೆ ಕಟ್ಟಬೇಕು.

Advertisement

ನಿಪ್ಪಟ್ಟು
ಬೇಕಾಗುವ
ಸಾಮಗ್ರಿಗಳು
ಹುರಿದ ನೆಲಗಡಲೆ: 1/4 ಕಪ್‌
ಹುರಿಗಡಲೆ: ಅರ್ಧ ಕಪ್‌
ಅಕ್ಕಿಹಿಟ್ಟು: ಒಂದು ಕಪ್‌
ಮೈದಾ: ಕಾಲು ಕಪ್‌
ಕರಿಬೇವಿನ ಸೊಪ್ಪು: 5 - 6
ಹಸಿಮೆಣಸು ಪೇಸ್ಟ್‌: 2 ಚಮಚ
ಒಣಮೆಣಸು ಪೇಸ್ಟ್‌: 1 ಚಮಚ
ಬೆಣ್ಣೆ: ಎರಡು ಚಮಚ

ಮಾಡುವ ವಿಧಾನ
ಮೊದಲು ಹುರಿಗಡಲೆ ಹಾಗೂ ನೆಲಗಡಲೆಯನ್ನು ಕೆಂಬಣ್ಣ ಬರುವವರೆಗೆ ಹುರಿದು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಟ್ಟುಕೊಳ್ಳಬೇಕು. ಅನಂತರ ಒಂದು ಪಾತ್ರೆಗೆ ಅಕ್ಕಿಹಿಟ್ಟು, ಮೈದಾ, ಕರಿಬೇವಿನ ಸೊಪ್ಪು, ಉಪ್ಪು, ಹಸಿಮೆಣಸಿನ ಪೇಸ್ಟ್‌, ಒಣ ಮೆಣಸಿನ ಪೇಸ್ಟ್‌ ಹಾಗೂ ನೆಲಗಡಲೆ, ಹುರಿಗಡಲೆ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಗೂ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರ ಮಾಡಬೇಕು. ಒಂದು ಸಿಲ್ವರ್‌ ಶೀಟ್‌ನ ಮೇಲೆ ಹಿಟ್ಟನ್ನು ದೊಡ್ಡ ಚಪಾತಿಯ ಆಕಾರಕ್ಕೆ ಲಟ್ಟಿಸಬೇಕು. ಅನಂತರ ಅದನ್ನು ಉರುಟುರುಟಾದ ಸಣ್ಣ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕರಿದರೆ ನಿಪ್ಪಟ್ಟು ಸಿದ್ಧವಾಗುತ್ತದೆ.

ಕೋಡುಬಳೆ
ಒಂದು ಪಾತ್ರೆಯಲ್ಲಿ ಎರಡು ಕಪ್‌ ನೀರು ಹಾಕಿ ಬಿಸಿಯಾದಾಗ ಜೀರಿಗೆ, ಮೆಣಸಿನ ಹುಡಿ, ಕರಿ ಮೆಣಸಿನ ಹುಡಿ ಹಾಗೂ ಬೆಣ್ಣೆ ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪ ಉಪ್ಪು ಕೂಡಾ ಸೇರಿಸಬೇಕು. ಅದಕ್ಕೆ ರವೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಮೂರು ನಿಮಿಷ ಕುದಿಸಬೇಕು. ಅನಂತರ ಗ್ಯಾಸ್‌ ಆಫ್ ಮಾಡಿ ಅದಕ್ಕೆ ಅಕ್ಕಿಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ಮಿಶ್ರಣ ಹುಡಿಹುಡಿಯಾಗಿದ್ದರೆ ಅದಕ್ಕೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರ ಮಾಡಬೇಕು. ಹಿಟ್ಟನ್ನು ಚೆನ್ನಾಗಿ ನಾದಿಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿ ಅದಕ್ಕೆ ಬಳೆಯ ಆಕಾರ ನೀಡಿ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೆ ಕರಿದರೆ ಕೋಡುಬಳೆ ಸವಿಯಲು ಸಿದ್ಧ.

ಬೇಕಾಗುವ ಸಾಮಗ್ರಿ
ರವೆ: ಒಂದು ಕಪ್‌
ಅಕ್ಕಿಹಿಟ್ಟು: ಎರಡು ಕಪ್‌
ನೀರು: ಸ್ವಲ್ಪ
ಮೆಣಸಿನ ಹುಡಿ: ಒಂದು ಚಮಚ
ಕರಿಮೆಣಸಿನ ಹುಡಿ: ಒಂದು ಚಮಚ
ಬೆಣ್ಣೆ: ಎರಡು ಚಮಚ
ಜೀರಿಗೆ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು

(ಸಂಗ್ರಹ) ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next