Advertisement

ಅಂಬೆಗೆ ಆದ ಅನ್ಯಾಯ ಯಾರಿಗೂ ಕಾಣಿಸದೇಕೆ?

01:45 AM Jun 26, 2022 | Team Udayavani |

ಮಹಾಭಾರತದ ಕಥೆ ಓದಿದವರು, ಕೇಳಿದವರು ಮತ್ತು ನೋಡಿದವರೆಲ್ಲಾ ಭೀಷ್ಮನ ಸ್ಥಿತಿಗೆ ಮರುಗುತ್ತಾರೆ. ಪಾಪ ಭೀಷ್ಮ, ತಂದೆಗೆ ನೀಡಿದ ವಚನ ಪಾಲಿಸಲು ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟ ಎನ್ನುತ್ತಾರೆ. ಆದರೆ ಭೀಷ್ಮನ ಅವಸರ ಮತ್ತು ಅವಿವೇಕದ ನಿರ್ಧಾರದಿಂದಲೇ ಅಂಬೆ ಎಂಬ ಹತಭಾಗೆÂಗೆ ಒದಗಿಬಂದ ಸಂಕಟದ ಬಗ್ಗೆ ಯೋಚಿಸುವುದೇ ಇಲ್ಲ…

Advertisement

ವಿಪರ್ಯಾಸವಲ್ಲವೆ?
ನನ್ನ ಪರಿಚಯ ಬಹುಶಃ ಎಲ್ಲರಿಗೂ ಇರುತ್ತದೆ. ಆದರೂ ಸಂಕ್ಷಿಪ್ತವಾಗಿ ಹೇಳಿ ಬಿಡುತ್ತೇನೆ. ನಾನು ಅಂಬೆ. ಕಾಶಿಯ ದೊರೆ ಕಶ್ಯನ ಹಿರಿಯ ಮಗಳು. ನನಗೆ ಲೋಕಸುಂದರಿ ಎಂಬ ಹೆಸರಿತ್ತು. ಅಂಬಿಕೆ, ಅಂಬಾಲಿಕೆ ಎಂಬ ತಂಗಿಯರೂ ನನಗಿದ್ದರು. ಅವರೂ ಸೌಂದರ್ಯ ವತಿಯರೇ. ಅದೇನು ಲೆಕ್ಕಾಚಾರವೋ ಏನು ಕಥೆಯೋ… ತಂದೆ ಕಶ್ಯ ಮಹಾರಾಜರು, ನನ್ನ ಜತೆಯಲ್ಲಿಯೇ ತಂಗಿಯರಿಗೂ ಸ್ವಯಂವರ ಏರ್ಪಡಿಸಿ ಬಿಟ್ಟರು. ಸಾಲಾಗಿ ಕುಳಿತ ರಾಜಕುವರರು, ಅವರಿಗೆ ಇದ್ದ ಬಿರುದುಗಳು, ಅವರ ವೇಷ-ಆಸೆಯನ್ನು ವಾರೆಗಣ್ಣಿಂದ ನೋಡುತ್ತಿ¨ªಾಗಲೇ ಕಂಚಿನ ಕಂಠದ ದನಿಯೊಂದು ಕೇಳಿಸಿತು: ನನ್ನ ತಮ್ಮ ವಿಚಿತ್ರವೀರ್ಯನಿಗಾಗಿ ಈ ಮೂವರೂ ರಾಜಕುಮಾರಿಯರನ್ನು ನಾನು ಕರೆದೊಯ್ಯುತ್ತಿದ್ದೇನೆ. ರಾಜಕುಮಾರಿಯರು ನಮಗೇ ಬೇಕು ಎನ್ನುವವರು ನನ್ನೊಂದಿಗೆ ಯುದ್ಧ ಮಾಡಿ ಗೆಲ್ಲಬೇಕಾಗುತ್ತದೆ…’ ಧೀರ ಗಂಭೀರ ದನಿಯಲ್ಲಿ ಹೀಗೆ ಹೇಳುತ್ತಲೇ ನಾವು ಮೂವರೂ ಕುಳಿತಿದ್ದ ಜಾಗಕ್ಕೇ ತನ್ನ ರಥ ತಂದ ಭೀಷ್ಮ ಹೇಳಿದ: ಹೂಂ, ರಥವೇರಿ. ಹಸ್ತಿನಾವತಿಗೆ ಹೋಗೋಣ.’

ಈ ಸಂದರ್ಭದಲ್ಲಿ ನನ್ನ ಪ್ರಿಯತಮ ಸಾಳ್ವ ಮಹಾರಾಜ ನುಗ್ಗಿ ಬರುತ್ತಾನೆ. ಭೀಷ್ಮನ ಎದುರು ನಿಂತು ತೊಡೆ ತಟ್ಟುತ್ತಾನೆ. ಅವನ ಸವಾಲನ್ನು ಮೆಟ್ಟಿನಿಂತು ನನ್ನನ್ನು ಗೆದ್ದುಕೊಳ್ಳುತ್ತಾನೆ ಎಂದೆಲ್ಲಾ ನಾನು ಯೋಚಿಸುತ್ತಿದ್ದೆ. ಆದರೆ ಆಗಿದ್ದೇ ಬೇರೆ. ಹೊಳೆದಂಡೆಯಲ್ಲಿ ನಿಂತು-“ಸ್ವಯಂವರಕ್ಕೆ ಸಾûಾತ್‌ ದೇವೇಂದ್ರನೇ ಬಂದರೂ ನಿನ್ನನ್ನು ಬಿಟ್ಟು ಕೊಡಲಾರೆ’ ಎಂದಿದ್ದ ಸಾಳ್ವ, ಭೀಷ್ಮನ ಠೇಂಕಾರದ ಮಾತಿಗೆ ಹೆದರಿ ಸ್ವಯಂವರ ಮಂಟಪದಿಂದಲೇ ನಾಪತ್ತೆಯಾಗಿಬಿಟ್ಟ.

ಸಾಳ್ವ ಪುಕ್ಕಲನಿರಬಹುದೇ ಎಂಬ ಅನುಮಾನ ನನ್ನನ್ನು ಹಲವು ಬಾರಿ ಕಾಡಿತ್ತು. ಪ್ರೇಮದ ಆರಂಭದ ದಿನಗಳಲ್ಲಿ ಕದ್ದು ಭೇಟಿಯಾ ಗುತ್ತಿ¨ªೆವಲ್ಲ; ಆಗೆಲ್ಲ ಒಂದು ಕಡ್ಡಿ ಅಲುಗಾಡಿದರೂ ಸಾಕು, ಸಾಳ್ವ ಬೆಚ್ಚುತ್ತಿದ್ದ. ಹತ್ತಾರು ಬಾರಿ ಸುತ್ತಮುತ್ತ ನೋಡುತ್ತಿದ್ದ. “ನಮ್ಮ ಪ್ರೀತಿ ಯನ್ನು ತಂದೆಯವರು ಒಪ್ಪುವುದಿಲ್ಲ. ಸ್ವಯಂವರದಲ್ಲಿ ಗೆದ್ದವರಿಗೇ ಮಗಳನ್ನು ಕೊಡುವುದಾಗಿ ಖಂಡಿತವಾಗಿ ಹೇಳಿಬಿಟ್ಟಿ¨ªಾರೆಂದು’ ನಾನು ಹೇಳಿದಾಗ ಅವನ ಮುಖ ಬಾಡಿತ್ತು. ಅದನ್ನು ನೋಡಲಾಗದೆ ನಾನೇ ಹೇಳಿದ್ದೆ: ಮಹಾರಾಜ, ನಿನಗೋಸ್ಕರ, ನಿನ್ನ ಮೇಲಿನ ಪ್ರೀತಿಗೋ ಸ್ಕರ ಏನು ಮಾಡುವುದಕ್ಕೂ ನಾನು ಸಿದ್ಧಳಿದ್ದೇನೆ. ಸ್ವಯಂವರದಲ್ಲಿ ಭಾಗವಹಿಸಲು ಇಷ್ಟವಿಲ್ಲದಿದ್ದರೆ ದಯಮಾಡಿ ಹೇಳಿ. ಸ್ವಯಂವರಕ್ಕೂ ಮುಂಚೆಯೇ ನನ್ನನ್ನು ಹಾರಿಸಿಕೊಂಡು ಹೋಗಿ. ಬೇಕಿದ್ದರೆ ಅದಕ್ಕೆ ಹೊಂದುವಂಥ ಉಪಾಯವನ್ನು ನಾನೇ ಮಾಡುತ್ತೇನೆ!’

ಪುಣ್ಯಾತ್ಮ ಅದಕ್ಕೂ ಒಪ್ಪಲಿಲ್ಲ. ಬೇರ್ಯಾವುದೋ ವಿಷಯ ತೆಗೆದು ಮಾತು ಹಾರಿಸಿದ. “ಸ್ವಯಂವರದ ಸಂದರ್ಭದಲ್ಲಿ ನನ್ನ ಪರಾಕ್ರಮ ವನ್ನು ನೀನೇ ನೋಡುವೆಯಂತೆ. ಇದು ಪ್ರೀತಿಯ ಮಾತುಗಳ ಹಂಚಿ ಕೆಗೆ, ಸರಸಕ್ಕೆ, ದೇಹ-ಮನಸುಗಳ ಮಿಲನಕ್ಕೆ ದೊರೆತ ಅಮೃತಘಳಿಗೆ. ಈಗ ಯಾವ ವಿಷಯವನ್ನೂ ತೆಗೆಯಬೇಡ’ ಎನ್ನುತ್ತಾ ಬಾಚಿ ತಬ್ಬಿಕೊಂಡಿದ್ದ.
ಹಸ್ತಿ ನಾವತಿಗೆ ಹೋಗಲು ಭೀಷ್ಮನ ರಥವೇರಿದಾಗ ಇದೆಲ್ಲ ನೆನಪಾಯಿತು. ಸ್ವಯಂವರಕ್ಕೆ ಬಂದಿದ್ದ ಐದಾರು ರಾಜಕುಮಾರರು ಭೀಷ್ಮನ ವರ್ತನೆ ಯನ್ನು ಪ್ರಶ್ನಿಸಿದರು. ಅವನನ್ನು ಎದುರಿಸಲು ಮುಂದೆ ಬಂದರು. ಆದರೆ ಭೀಷ್ಮ ಒಂದೇ ಒಂದು ಬಾಣ ಪ್ರಯೋಗಿಸಿ ಅವರನ್ನೆಲ್ಲ ಬಂಧಿಸಿಬಿಟ್ಟ. ಅನಂತರ ನನ್ನ ತಂದೆಗೆ ನಿಂತಲ್ಲಿಯೇ ನಮಸ್ಕರಿಸಿದ. ನನ್ನ ತಂದೆಯ ಕಂಗಳಲ್ಲೂ ಹೊಸ ಹಿಗ್ಗು. ಹಸ್ತಿನಾವತಿಯಂಥ ಬಹುದೊಡ್ಡ ರಾಜ್ಯದ ನೆಂಟಸ್ತಿಕೆ ಸಿಗುತ್ತದೆ. ಆಗಲೇ ನಡುವಯಸ್ಸು ದಾಟಿದಂತೆ ಕಾಣುತ್ತಿದ್ದ ಭೀಷ್ಮ ತನ್ನ ಮಕ್ಕಳನ್ನು ಮದುವೆಯಾಗಲಾರ. ಬದಲಿಗೆ ಸಿಂಹಾಸನದಲ್ಲಿ ಕುಳಿತಿರುವ ಮಹಾರಾಜ ವಿಚಿತ್ರವೀರ್ಯ ನಿಗೆ ಮದುವೆ ಮಾಡಿಕೊಡುತ್ತಾನೆ ಎಂಬುದೂ ತಂದೆಯ ಖುಷಿ ಹೆಚ್ಚಲು ಕಾರಣವಾಗಿತ್ತು. ಆತ ಸಂಭ್ರಮದಿಂದಲೇ ಭೀಷ್ಮನನ್ನು ಬೀಳ್ಕೊಟ್ಟ.

Advertisement

ಹಾದಿಯುದ್ದಕ್ಕೂ ಭೀಷ್ಮ ಹಸ್ತಿನಾವತಿಯನ್ನು ವರ್ಣಿಸಿದ. ತನ್ನ ತಮ್ಮನ ಸೌಂದರ್ಯವನ್ನು ಹೊಗಳಿದ. ಅತ್ತೆಯಾಗಲಿರುವ ಸತ್ಯವತಿ ಯ ಬದುಕಿನ ಕಥೆ ಹೇಳಿದ. ಅರಮನೆಯಲ್ಲಿ ನಮಗೆ ಸಿಗಬಹುದಾದ ನೂರೆಂಟು ಅನುಕೂಲಗಳ ಕುರಿತು ಹೇಳಿದ. ಅವನ ಒಂದೊಂದು ಮಾತಿಗೂ ತಂಗಿಯರ ಮುಖ ಅರಳುತ್ತಿತ್ತು. ಕಾರಣ ಅವರ ವಯಸ್ಸು ಚಿಕ್ಕದಿತ್ತು. ತಿಳಿವಳಿಕೆಯೂ. ಆದರೆ ನನ್ನ ಸ್ಥಿತಿ ಹಾಗಿರಲಿಲ್ಲ. ಮನದ ತುಂಬಾ ಸಾಳ್ವನೇ ಇದ್ದ. ಕೊರಳಲ್ಲಿ, ತೋಳ ನಡುವೆ, ಎದೆಯ ಮಧ್ಯೆ, ಆತನ ಬೆರಳ ಗುರುತು ಅಳಿಸಲಾಗದಂತೆ ಇಳಿದು ಹೋಗಿತ್ತು. ಒಂದು ವೇಳೆ ವಿಚಿತ್ರವೀರ್ಯನ ಹೆಂಡತಿಯಾದರೆ ಸುಖವಾಗಿ ಇರಲಾರೆ ಎಂಬುದು ಖಾತ್ರಿಯಾದಾಗ ನಾನು ನೇರವಾಗಿ ಹೇಳಿಬಿಟ್ಟೆ; ಭೀಷ್ಮಾ, ನಾವು ಮೂವರನ್ನೂ ಹೊತ್ತು ತಂದವನು ನೀನು. ಹೊತ್ತು ತಂದವನೇ ಮದುವೆಯಾಗಬೇಕು. ಅದೇ ಧರ್ಮ. ನೀನು ನೋಡಿದರೆ ಮುಖ ಪರಿ ಚಯವೇ ಇಲ್ಲದ ವಿಚಿತ್ರವೀರ್ಯನಿಗೆ ನಮ್ಮನ್ನು ಕಟ್ಟಲು ಹೊರ ಟಿದ್ದೀ. ಅವನು ರಾಜನಿರಬಹುದು. ಸುಂದರನೂ ಇರಬಹುದು. ಆದರೆ ಅವನನ್ನು ಗಂಡನೆಂದು ಒಪ್ಪಲು ನಾನಂತೂ ಸಿದ್ಧಳಿಲ್ಲ. ಏಕೆಂದರೆ ನನ್ನ ಮನದೊಳಗೆ ಸಾಳ್ವನ ಚಿತ್ರವಿದೆ. ನಮ್ಮ ಪ್ರೇಮದ ವಿಷಯ ನಮ್ಮ ತಂದೆಗೂ ಗೊತ್ತಿತ್ತು. ಸ್ವಯಂವರದಲ್ಲಿ ಅವನಿಗೇ ಮಾಲೆ ಹಾಕಲು ನಾನು ನಿರ್ಧರಿಸಿ¨ªೆ. ಆದರೆ ಅಂಥ ಸಂದರ್ಭಕ್ಕೆ ನೀನು ಅವಕಾಶವನ್ನೇ ಕೊಡಲಿಲ್ಲ. ನೀನು ಧರ್ಮಭೀರು ಎಂಬುದೇ ಸತ್ಯವಾಗಿದ್ದರೆ ನನ್ನನ್ನು ಸಾಳ್ವನ ಬಳಿಗೆ ಕಳಿಸಿಕೊಡು…’

ಭೀಷ್ಮನಿಗೆ ನನ್ನ ಮಾತು ತತ್‌ಕ್ಷಣವೇ ಅರ್ಥವಾಯಿತು. ಅಂಬೆ, ನೀನು ಇಚ್ಛಿಸಿದಂತೆಯೇ ಆಗಲಿ. ಈ ವಿಷಯವನ್ನು ಮೊದಲೇ ಹೇಳಿದ್ದರೆ ಸ್ವಯಂವರ ಮಂಟಪದಲ್ಲಿಯೇ ನಿನ್ನನ್ನು ಸಾಳ್ವನಿಗೆ ಒಪ್ಪಿಸಿ ಬರುತ್ತಿದ್ದೆ. ಇರಲಿ ಈಗ ತುಂಬಾ ತಡವಾಗಿಲ್ಲ. ಈಗಲೇ ನಿನ್ನನ್ನು ಕಳಿಸಿಕೊಡುತ್ತೇನೆ. ನಿನ್ನ ಪ್ರೀತಿ ಗೆಲ್ಲಲಿ. ಸಂಭ್ರಮದ ಬದುಕು ನಿನ್ನದಾಗಲಿ’ ಎಂದದ್ದಷ್ಟೇ ಅಲ್ಲ, ತುಂಬ ಗೌರವದಿಂದ ಕಳಿಸಿಕೊಟ್ಟ.

ನನ್ನ ಕಣ್ತುಂಬ ಹೊಸ ಮಿಂಚು. ಎದೆಯೊಳಗೂ. ಜಗತ್ತೇ ನನ್ನದಾದಷ್ಟು ಖುಷಿ. ಹಸ್ತಿನಾವತಿಯ ರಥ ಸಾಳ್ವನ ಅರಮನೆಯ ಮುಂದೆ ನಿಂತಾಕ್ಷಣ, ಜಿಗಿದು ಓಡೋಡುತ್ತಲೇ ಸಾಳ್ವನನ್ನು ತಲುಪಿ, ಅವನ ಎದೆಗೆ ಒರಗಿ ಬಿಕ್ಕಳಿಸುತ್ತಾ ಹೇಳಿದೆ: ನಾನು ಬಂದುಬಿಟ್ಟೆ!’ ಆ ಕ್ಷಣದಲ್ಲಿ ನನ್ನ ಮಾತುಗಳಲ್ಲಿ ಸಂತೋಷವಿತ್ತು. ಆನಂದಬಾಷ್ಪವಿತ್ತು. ಪುಟ್ಟ ಹೊಳೆ, ಸಮುದ್ರವನ್ನು ಕೂಡಿದಾಗ ಆಗುತ್ತದಲ್ಲ; ಅಂಥ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಸಾಳ್ವ ನನ್ನ ಮೈದಡವುತ್ತಾನೆ. ಹಣೆಗೊಂದು ಮುತ್ತಿಡುತ್ತಾನೆ. ಕಂಬನಿ ಒರೆಸುತ್ತಾನೆ. ಸಮಾಧಾನ ಹೇಳುತ್ತಾನೆ. ಅಗ್ನಿಸಾಕ್ಷಿಯಾಗಿ ಮದುವೆಯಾಗುವ ಮಾತುಗಳನ್ನೂ ಆರಂಭಿಸುತ್ತಾನೆ ಎಂದೆಲ್ಲಾ ಲೆಕ್ಕ ಹಾಕಿದೆ. ಆದರೆ, ಸಾಳ್ವ ಒಂದು ಮಾತೂ ಆಡಲಿಲ್ಲ. ಕಲ್ಲಿನಂತೆ ಸುಮ್ಮನೇ ನಿಂತಿದ್ದ. ಒಂದೆರಡು ಕ್ಷಣಗಳ ನಂತರ ನನ್ನನ್ನು ಒಮ್ಮೆ ಝಾಡಿಸಿ ತಳ್ಳಿ ಹೇಳಿದ: ಎಲವೋ ನಾಚಿಕೆಗೆಟ್ಟ ಹೆಣ್ಣೆ, ತೊಲಗಾಚೆ, ನಾಯಿ ಮುಟ್ಟಿದ ಮಡಿಕೆಗೆ ಅರಮನೆಯಲ್ಲಿ ಪ್ರವೇಶವಿರುವುದಿಲ್ಲ…’

ಹಸ್ತಿನಾವತಿಗೆ ಹೋಗುವ ಹಾದಿಯುದ್ದಕ್ಕೂ ದಾರಿ ಸವೆಸುವ ನೆಪದಲ್ಲಿ ಭೀಷ್ಮ ನಮಗೆ ಕಥೆ ಹೇಳಿದ್ದ. ಛಕ್ಕನೆ ರಥ ನಿಲ್ಲಿಸಿ ಜಿಂಕೆ ಮರಿಯೊಂದನ್ನು ತೋರಿಸಿದ್ದ. ಪೊದೆಯಲ್ಲಿ ಅಡಗಿದ್ದ ಮೊಲದ ಮರಿಯನ್ನು ತೋರಿಸಿ- ಬೇಕಿದ್ದರೆ ಹಿಡಿದು ಕೊಡುವೆ ಎಂದಿದ್ದ. ಆದರೆ ಯಾವ ಸಂದರ್ಭದಲ್ಲೂ ಆತ ನಮ್ಮ ಮೈ ಮುಟ್ಟಿರಲಿಲ್ಲ. ಕೈ ಸೋಕಿಸಿರಲಿಲ್ಲ. ಹೀಗಿರುವಾಗ ಸಾಳ್ವ ನನ್ನನ್ನು ನಾಯಿ ಮುಟ್ಟಿದ ಮಡಕೆ ಎಂದಿದ್ದ. ಇಷ್ಟಾದರೂ ನನಗೆ ಸಾಳ್ವನ ಮೇಲೆ ಸಿಟ್ಟು ಬರಲಿಲ್ಲ. ನಾನು ದೀನಳಾಗಿ ಅವನ ಕಾಲ ಬಳಿ ಕುಸಿದು ಹೇಳಿದೆ; ಪ್ರಭು, ನನ್ನನ್ನು ಅನುಮಾನಿಸಬೇಡ. ಅವಮಾನಿಸಬೇಡ. ನಿನ್ನ ಪೂಜೆಗೆಂದೇ ಮೀಸಲಾದ ಹೂವಿದು. ನನ್ನನ್ನು ಬೀದಿಗೆ ಎಸೆಯಬೇಡ. ನೀನು ನನ್ನ ಜೀವ. ನೀನೇ ನನ್ನ ಸರ್ವಸ್ವ…’ ಮುಂದೆ ಮಾತನಾಡಲು ಸಾಳ್ವ ಅವಕಾಶವನ್ನೇ ಕೊಡಲಿಲ್ಲ. ಒಮ್ಮೆ ಕೊಸರಿಕೊಂಡು ನಾಲ್ಕು ಹೆಜ್ಜೆ ಹೋದವನು, ಸೇವಕನನ್ನು ಕರೆದು ಹೇಳಿದ “ಈ ನೀಚ ಹೆಂಗಸನ್ನು ಅರಮನೆಯಿಂದ ಆಚೆ ತಳ್ಳಿ…’

ಹೌದು. ಸಾಳ್ವ ನನಗೆ ಮೋಸ ಮಾಡಿದ. ದ್ರೋಹ ಬಗೆದ. ಮದುವೆಗೂ ಮೊದಲೇ ಬಳಸಿಕೊಂಡ. ಆದರೂ ಅವನ ಮೇಲೆ ನನಗೆ ಕೋಪ ಬರಲಿಲ್ಲ. ದ್ವೇಷ ಹುಟ್ಟಲಿಲ್ಲ. ಈ ಕಾರಣದಿಂದಲೇ ನಾನು ಅವನ ಮೇಲೆ ಮುನಿಯಲಿಲ್ಲ. ಕನಲಲಿಲ್ಲ. ಏನೂ ತೋಚದವಳಂತೆ ಸೀದಾ ಹಸ್ತಿನಾವತಿಗೆ ಬಂದು ಭೀಷ್ಮನ ಮುಂದೆ ನಿಂತು ಹೇಳಿದೆ: “ದೊರೆಯೇ, ಸಾಳ್ವ ನನ್ನನ್ನು ಒಪ್ಪಲಿಲ್ಲ. ಆತ ನನ್ನನ್ನು ಅನುಮಾನಿಸಿದ. ಈಗ ನನ್ನ ಭವಿಷ್ಯ ನಿರ್ಧಾರವಾಗಬೇಕು. ಹೊತ್ತು ತಂದವನು ನೀನಲ್ಲವೆ? ಹಾಗಾಗಿ ನೀನೇ ಮದುವೆಯಾಗು…’ ಇಷ್ಟು ಹೇಳುವ ವೇಳೆಗೆ ನನ್ನ ಕೊರಳು ತುಂಬಿ ಬಂದಿತ್ತು. ಕಣ್ಣೀರು ಧಾರಾಕಾರ. ಆದರೂ ಭೀಷ್ಮ ಕರಗಲಿಲ್ಲ. ನಾನು ಬ್ರಹ್ಮ ಚಾರಿಯಾಗಿರುತ್ತೇನೆ ಎಂದು ಶಪಥ ಮಾಡಿ¨ªಾಗಿದೆ. ವಚನಭ್ರಷ್ಟನಾಗ ಲಾರೆ ಅಂದುಬಿಟ್ಟ. ಅರಮನೆಯಲ್ಲಿ ಕಲಿತಿದ್ದ ಹಠ ಈಗ ನನ್ನ ನೆರವಿಗೆ ಬಂತು. ಉಹುಂ, ನೀನು ಮದುವೆಯಾಗಲೇಬೇಕು ಎಂದು ಪಟ್ಟು ಹಿಡಿದೆ. ಭೀಷ್ಮ ಮಣಿಯದೇ ಹೋದಾಗ ಪರಶುರಾಮರ ಮೊರೆ ಹೋದೆ.
ಭೀಷ್ಮ ಜಗಮೊಂಡ. ಪರಶುರಾಮರ ಮಾತಿಗೂ ಅವನು ಬಗ್ಗಲಿಲ್ಲ. ಅವರೋ ಉಗ್ರಕೋಪಿ. ನನ್ನ ಮಾತು ಮೀರುವಂತಿದ್ದರೆ ಯುದ್ಧಕ್ಕೆ ಸಿದ್ಧ ನಾಗು ಎಂದರು. ಸರಿ, ಅಂಬೆ ಎಂಬ ದುರಾದೃಷ್ಟದ ಹೆಣ್ಣಿನ ಕಾರಣಕ್ಕೆ ಭೀಷ್ಮ-ಪರಶುರಾಮರ ಮಧ್ಯೆ ಏಳು ಹಗಲು-ಏಳು ರಾತ್ರಿ ಯುದ್ಧ ನಡೆಯಿತು. ನನ್ನ ಲೆಕ್ಕಾಚಾರವೆಲ್ಲ ತಲೆಕೆಳಕಾಗುವಂತೆ ಪರಶುರಾಮರೇ ಸೋತರು. ಆ ಕ್ಷಣದಲ್ಲಿ ಭೀಷ್ಮನ ಮೇಲೆ ನನಗೆ ಹೆಮ್ಮೆ, ಅಭಿಮಾನ ಉಂಟಾಗಬೇಕಿತ್ತು. ಉಹುಂ, ಹಾಗಾಗಲಿಲ್ಲ. ನನ್ನ ಬದುಕನ್ನು ಹಾಳು ಮಾಡಿದವನೇ ಇವನು. ಇವನನ್ನು ಕೊಲ್ಲಲೇಬೇಕು ಎಂದು ಅವತ್ತೇ, ನಿರ್ಧರಿಸಿದೆ. ಕೆಲವೇ ದಿನಗಳಲ್ಲಿ ತಪಸ್ಸಿಗೆ ಕೂತೆ. ಶಿವನಿಂದ ವರ ಪಡೆದೆ. ಆತ್ಮಾಹುತಿಯ ಮೂಲಕ ದೇಹ ತ್ಯಜಿಸಿದೆ. ಅನಂತರ ಶಿಖಂಡಿಯಾಗಿ ಹುಟ್ಟಿ…

ಮಹಾಭಾರತ ಓದಿದವರೆಲ್ಲ ನನ್ನನ್ನು ಟೀಕಿಸುತ್ತಾರೆ. ಭೀಷ್ಮನಂಥ ಧೀರನಿಗೆ ಅದೆಂಥ ಯಾತನಾದಾಯಕ ಅಂತ್ಯ ಎಂದು ಮರುಗುತ್ತಾರೆ. ಆದರೆ ಅದೇ ಜನ ತಮಾಷೆಗೂ ಕೂಡ ಅಂಬೆ ಎಂಬ ಹೆಂಗಸಿಗೆ ಒದಗಿಬಂದ ಸಂಕಟದ ಬಗ್ಗೆ ಯೋಚಿಸುವುದೇ ಇಲ್ಲ. ಏಕೆಂದರೆ ಭೀಷ್ಮ ಗಂಡು. ಅಂಬೆ ಹೆಣ್ಣು! ನ್ಯಾಯವೆಂಬುದು ಸದಾ ಗಂಡಿನ ಪರವಾಗಿಯೇ ಇರುತ್ತದೆ! ಈ ನ್ಯಾಯ ಪದ್ಧತಿಗೆ ಧಿಕ್ಕಾರವಿರಲಿ…!
*****
ವಾರದ ಹಿಂದೆ ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯರ ಮಹಾಭಾರತದ ಕಥೆ ಹೇಳುವ ಚಿತ್ರಗಳನ್ನು ನೋಡಿ ಬಂದ ಅನಂತರ ಬಿಟ್ಟೂಬಿಡದೆ ಕಾಡುತ್ತಿದ್ದ ಪಾತ್ರ ಅಂಬೆಯದು. ಆಕೆಯ ಧ್ಯಾನದಲ್ಲೇ ನಿದ್ರೆಗೆ ಜಾರಿದಾಗ ಅಂಬೆ ಕನಸಿಗೆ ಬಂದಳು. ತನ್ನ ಮನಸಿನ ಮಾತುಗಳನ್ನೆಲ್ಲಾ ಹೇಳಿಕೊಂಡಳು…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next