Advertisement
ದಾರಿಯೂ ಇಲ್ಲ
ಸುಮಾರು 25 ವರ್ಷಗಳಿಂದ ಪಟ್ರಮೆ ಗ್ರಾಮದ ಕಲ್ಕೊಡಂಗೆ ಎಂಬಲ್ಲಿ 40 ಸೆಂಟ್ಸ್ ಸರಕಾರಿ ಭೂಮಿಯಲ್ಲಿ ಏಕನಾಥ ಭಟ್ ಕುಟುಂಬ ಕೃಷಿ ಮಾಡುತ್ತಿದೆ. ಅದು ಇಳಿಜಾರು ಪ್ರದೇಶ. ನಾಲ್ಕು ವರ್ಷಗಳ ಹಿಂದೆ ಭಟ್ಟರ ಜಮೀನಿನ ಪಕ್ಕದ ಸ್ಥಳವನ್ನು ವ್ಯಕ್ತಿಯೊಬ್ಬರು ಖರೀದಿಸಿದ ಬಳಿಕ ಪರಂಬೋಕು ತೋಡನ್ನು ಅವರು ಭಟ್ಟರ ಜಮೀನಿಗೆ ತಿರುಗಿಸಿದ್ದಾರೆ. ಇಳಿಜಾರಿನಲ್ಲಿರುವ ಭಟ್ಟರ ಭೂಮಿ ಕೃಷಿಗೆ ಹಾನಿಗೆ ಒಳಗಾಗುತ್ತಿದೆ. ಸದ್ಯ ಮನೆ ಹಾಗೂ ಕೊಟ್ಟಿಗೆಯೂ ಕುಸಿಯುವ ಭೀತಿ ಎದುರಾಗಿದೆ. ಕುಡಿಯುವ ನೀರಿಗಾಗಿ ಬಾವಿ ತೋಡಲೂ ಸಾಧ್ಯವಿಲ್ಲದ ಬಡ ಕುಟುಂಬ ಜಮೀನಿನ ಪಕ್ಕ ಇರುವ ಬಂಡೆಗಲ್ಲಿನ ಒರತೆ ನೀರನ್ನೇ ಹಿಡಿಯುತ್ತಿದೆ. ಈಗ ಅದಕ್ಕೂ ಬೆದರಿಕೆ ಒಡ್ಡಲಾಗಿದೆ. ಕೇಳಿದರೆ ‘ಎಲ್ಲ ಸ್ಥಳವೂ ನನ್ನದೇ’ ಎಂದು ಹೇಳುತ್ತಿದ್ದಾರೆ. ಜಮೀನು ಖರೀದಿಸಿದ ವ್ಯಕ್ತಿ ರಬ್ಬರ್ ಗಿಡಗಳನ್ನು ನೆಟ್ಟಿರುವುದರಿಂದ ಇದ್ದ ಒಂದು ಕಾಲು ದಾರಿಯೂ ಮುಚ್ಚಿ ಹೋಗಿದೆ ಎನ್ನುತ್ತಾರೆ ಸಂತ್ರಸ್ತರು. ಇದರಿಂದ ನೊಂದಿರುವ ಭಟ್ಟರ ಕುಟುಂಬ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಪಿಡಿಒ, ತಾಲೂಕು ಪಂಚಾಯತ್-ಜಿಲ್ಲಾ ಪಂಚಾಯತ್ ಸದಸ್ಯರಿಗೆ – ಹೀಗೆ ಎಲ್ಲರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ಕೊರಗಿನಲ್ಲಿ ತಾಲೂಕು ದಂಡಾಧಿಕಾರಿಗೆ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ.
25 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ವಾಸಿಸುತ್ತಿದ್ದು, ನಾಲ್ಕು ವರ್ಷಗಳ ಹಿಂದೆ ಪಕ್ಕದ ಜಮೀನು ಖರೀದಿಸಿದ ವ್ಯಕ್ತಿಗಳಿಂದ ನಮ್ಮ ಮೇಲೆ ದಬ್ಟಾಳಿಕೆ ನಡೆಯುತ್ತಿದೆ. ಎರಡು ವರ್ಷಗಳಿಂದ ಕಂದಾಯ ಅಧಿಕಾರಿಗಳು ಹಾಗೂ ಹಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿಯೂ ನ್ಯಾಯ ದೊರೆತಿಲ್ಲ. ಕಿರುಕುಳಗಳಿಂದ ಬೇಸತ್ತು ಬೇರಾವುದೇ ದಾರಿ ಕಾಣದೇ ತಾಲೂಕು ದಂಡಾಧಿಕಾರಿಯವರಲ್ಲಿ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಏಕನಾಥ ಭಟ್ ಹೇಳಿದ್ದಾರೆ.
ತೋಡು ತಿರುಗಿಸಿದ್ದು ಸರಿಯಲ್ಲ
ಎರಡು ವರ್ಷಗಳ ಹಿಂದೆ ಏಕನಾಥ ಭಟ್ ಅವರು ತಮ್ಮ ಜಮೀನಿನ ಪಕ್ಕ ತೋಡು ತಿರುಗಿಸಿದ್ದರಿಂದ ಕೃಷಿಗೆ ಹಾನಿಯಾಗುತ್ತಿದೆ ಎಂದು ದೂರು ನೀಡಿದ್ದರು. ಪರಿಶೀಲನೆಗಾಗಿ ನಾವು, ಜಿ.ಪಂ. ಸದಸ್ಯರು ಹಾಗೂ ಪಿಡಿಒ ಜತೆಗೆ ಹೋಗಿದ್ದೆವು. ದಾಖಲೆಯಲ್ಲಿ ಇರುವ ತೋಡನ್ನು ತಿರುಗಿಸಿದ್ದು ಕಾನೂನಿಗೆ ವಿರುದ್ಧವೆಂದು ಆ ವ್ಯಕ್ತಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ತೋಡನ್ನು ಹಿಂದೆ ಇದ್ದಂತೆಯೇ ಮಾಡಿಕೊಡುವಂತೆ ಸೂಚಿಸಿದ್ದೇವೆ. ಇದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಇಲಾಖೆ ಅಧಿಕಾರಿಗಳು ಬಡ ಕುಟುಂಬಕ್ಕೆ ತತ್ ಕ್ಷಣ ನ್ಯಾಯ ಒದಗಿಸಬೇಕು.
– ನವೀನ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷರು