Advertisement

ಕರ್ತವ್ಯದಲ್ಲಿದ್ದ ಚಾಲಕರ ಪಾದವನ್ನು ತಮ್ಮ ತಲೆಯ ಮೇಲಿಟ್ಟು ಸಾರಿಗೆ ನೌಕರರ ವಿಶೇಷ ಪ್ರತಿಭಟನೆ

09:08 PM Apr 12, 2021 | Team Udayavani |

ಚಾಮರಾಜನಗರ : ಮುಷ್ಕರಕ್ಕೆ ಕರೆ ಕೊಟ್ಟಿದ್ದರೂ, ಅಧಿಕಾರಿಗಳಿಗೆ ಹೆದರಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಚಾಲಕರಿಗೆ ಮುಷ್ಕರ ನಿರತ ಕೆಎಸ್‌ ಆರ್‌ ಟಿಸಿ ನೌಕರರು ಹಾರ ಹಾಕಿ, ಅವರ ಪಾದಗಳನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳುವ ಮೂಲಕ ಸೋಮವಾರ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.

Advertisement

6ನೇ ವೇತನ ಆಯೋಗ ಜಾರಿಗಾಗಿ ಕೆಎಸ್‌ ಆರ್‌ ಟಿಸಿ ನೌಕರರು ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಮುಷ್ಕರ ನಡೆಸುತ್ತಿದ್ದ ನೌಕರರನ್ನು ಅಂತರ ವಿಭಾಗಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಅಧಿಕಾರಿಗಳು ಹಲವು ನೌಕರರಿಗೆ ಕರೆ ಮಾಡಿ ತೀವ್ರ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಕೆಲವು ನೌಕರರು ಕೆಲಸಕ್ಕೆ ಮರಳಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಮ್ಮ ಸಹೋದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ನೊಂದ ಮುಷ್ಕರ ನಿರತ ನೌಕರರು, ಜಿಲ್ಲೆಯ ಕೆಲವೆಡೆ ಅಂತಹ  ಚಾಲಕರು, ನಿರ್ವಾಹಕರಿಗೆ ಹಾರ ಹಾಕಿ, ಅವರ ಕಾಲುಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ತಮ್ಮ ನೋವು, ಹತಾಶೆಯನ್ನು ವ್ಯಕ್ತಪಡಿಸಿದರು.

ನಗರದ ಸಂತೆಮರಹಳ್ಳಿ ವೃತ್ತ, ಕೊಳ್ಳೇಗಾಲ ಬಸ್ ನಿಲ್ದಾಣ, ಮೆಲ್ಲಹಳ್ಳಿ ಗೇಟ್ ಮತ್ತಿತರ ಕಡೆ ನೌಕರರ ಗುಂಪು ನಿಂತಿದ್ದ ಬಸ್ ಚಾಲಕರ ಬಳಿ ತೆರಳಿ, ಅವರಿಗೆ ಹಾರ ಹಾಕಿತು. ಬಳಿಕ ಚಾಲಕರ ಕಾಲುಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡರು.  ಇದರಿಂದ ಚಾಲಕರು ನಿರ್ವಾಹಕರು ಮುಜುಗರ ಅನುಭವಿಸಿದರು.

Advertisement

ಹೀಗೆ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರ ನಿರ್ವಾಹಕರನ್ನುದ್ದೇಶಿಸಿ, ನೀವು ನಿಮ್ಮ ಮಕ್ಕಳು ಚೆನ್ನಾಗಿರಬೇಕು ಕಣಣ್ಣ, ನಾವೆಲ್ಲ ಏನಾದರೂ ನಿಮಗೆ ಅದರ ಚಿಂತೆ ಬೇಡಣ್ಣ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಮುಷ್ಕರ ನಿರತ ನೌಕರರು ಕಣ್ಣೀರು ಹಾಕಿದರು. ತಮ್ಮ ಸಹೋದ್ಯೋಗಿಗಳ ಈ ಹತಾಶೆ, ನೋವು, ನಿರಾಶೆ ಕಂಡ ಕರ್ತವ್ಯ ನಿರತ ಕೆಲ ಚಾಲಕರು ಆ ಟ್ರಿಪ್ ಮುಗಿಸಿ, ಮತ್ತೆ ಮುಷ್ಕರಕ್ಕೆ ಬೆಂಬಲ ನೀಡಿದರು.

ಕಲ್ಲು ತೂರಾಟ: ನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದಕ್ಕೆ ತಾಲೂಕಿನ ಉತ್ತುವಳ್ಳಿ ಬಳಿ ಅಪರಿಚಿತರು ಬೈಕ್‌ನಲ್ಲಿ ಹಿಂಬಾಲಿಸಿ  ಕಲ್ಲು ತೂರಾಟ ಮಾಡಿದ ಘಟನೆ ಸೋಮವಾರ ನಡೆದಿದೆ. ಇದರಿಂದ ಬಸ್‌ನ ಮುಂದಿನ ಗಾಜು ಬಿರುಕು ಬಿಟ್ಟಿದೆ. ಬಸ್‌ನಲ್ಲಿ 22 ಪ್ರಯಾಣಿಕರಿದ್ದು, ಅವರನ್ನು ಬೇರೆ ಬಸ್‌ನಲ್ಲಿ ಕಳುಹಿಸಿಕೊಡಲಾಯಿತು. ಕಲ್ಲು ತೂರಾಟ ಮಾಡಿದವರು ಯಾರೆಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next