Advertisement

ಜಮೀನು ಖಾತೆಗೆ ವಿಶೇಷ ಕಾರ್ಯಕ್ರಮ

06:12 AM Jan 12, 2019 | |

ಹುಣಸೂರು: ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಜಮೀನು ಖಾತೆಗಳ ಜಟಿಲ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಕಂದಾಯ ಇಲಾಖೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ತಾಲೂಕಿನ ಹನಗೋಡು-ಹೆಗ್ಗಂದೂರು ಗ್ರಾಮ ಪಂಚಾಯ್ತಿಯಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ವಿಶೇಷ ಕಾರ್ಯಕ್ರಮ ಪ್ರಥಮವಾಗಿ ಗಾವಡಗೆರೆ ಹೋಬಳಿಯಿಂದ ನಡೆಯಲಿದ್ದು, ಕಾಲಮಿತಿಯಲ್ಲಿ  ಸರ್ವೆ ನಡೆಸಿ, ಪಕ್ಕಾಪೋಡು, ಹದ್ದು ಬಸ್ತು ಮಾಡಿಕೊಡುವ ಕೆಲಸ ಆರಂಭಗೊಳ್ಳಲಿದೆ ಎಂದರು.

ಹನಗೋಡು ನಾಡಕಚೇರಿಯಲ್ಲಿ ಅಧಿಕಾರಿಗಳು ಮಧ್ಯವರ್ತಿಗಳನ್ನು ನೇಮಿಸಿಕೊಂಡಿದ್ದು, ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತಿವೆ, ವೃದ್ಧಾಪ್ಯ, ವಿಧವಾ ವೇತನಕ್ಕೆ 2ರಿಂದ 3 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ. ಗ್ರಾಮಲೆಕ್ಕಿಗರು  ರೈತರ ಕೈಗೆ ಸಿಗುತ್ತಿಲ್ಲ. ಯಾವ ಗ್ರಾಮ ಸಭೆಗೂ ಬರುವುದಿಲ್ಲ ಎಂದು ರೈತರು ಅವಲತ್ತುಕೊಂಡರು.

ಇದಕ್ಕೆ ಶಾಸಕರು, ಉಪತಹಶೀಲ್ದಾರ್‌ ಗುರುಸಿದ್ದಯ್ಯರನ್ನು ತರಾಟೆಗೆ ತೆಗೆದುಕೊಂಡು ಮುಂದೆ ದೂರು ಬಾರದಂತೆ ಎಚ್ಚರವಹಿಸಬೇಕು, ಗ್ರಾಮಲೆಕ್ಕಿಗರು ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ಖಾತ್ರಿ ಹಣ ಸಿಗುತ್ತಿಲ್ಲ: ಗ್ರಾಪಂ ಅಧ್ಯಕ್ಷ ಎಚ್‌.ಬಿ.ಮಧು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸಕಾಲದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಬಿಡುಗಡೆಯಾಗುವ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ ಎಂದರು. ಅಲ್ಲಿಂದಲೇ ಸಂಬಂಧಿಸಿದ ಕಾರ್ಯದರ್ಶಿಯನ್ನು ಸಂಪರ್ಕಿಸಿ ಸರಿಪಡಿಸುವಂತೆ ಶಾಸಕರು ಸೂಚಿಸಿದರು.

Advertisement

ನಾಲಾ ಆಧುನೀಕರಣ ನೆಪದಲ್ಲಿ ನಾಲಾಮಣ್ಣನ್ನು ಏರಿ ಮೇಲೆ ಹಾಕಿದ್ದು, ರೈತರು ಓಡಾಡಲು ತೊಂದರೆಯಾಗಿದೆ ಎಂದು ದಾ.ರಾ.ಮಹೇಶ್‌ ದೂರಿದರೆ, ಸವಲಯ್ಯನಕೆರೆಯ ಕೋಡಿನೀರು ಹರಿದು ಹೋಗಲು ಜೆಸಿಬಿ ಮೂಲಕ ಕೋಡಿನಾಲೆಯನ್ನು ಬೇಕಾಬಿಟ್ಟಿ ಅಗಲ ಮಾಡಿ, ಕಪ್ಪುಮಣ್ಣನ್ನು ರಸ್ತೆಗೆ ಹಾಕಿಲಾಗಿದೆ ಎಂದು ತಾಪಂ ಮಾಜಿ ಸದಸ್ಯ ರಮೇಶ್‌ ತಿಳಿಸಿದರು. ತಾವೇ ಖುದ್ದಾಗಿ ಸ್ಥಳ ಪರಿಶೀಲಿಸುವುದಾಗಿ ಶಾಸಕರು ತಿಳಿಸಿದರು.

ವಿದ್ಯುತ್‌ ಪರಿವರ್ತಕ ಕೆಟ್ಟರೆ ಸಕಾಲದಲ್ಲಿ ದುರಸ್ತಿ ಪಡಿಸುತ್ತಿಲ್ಲ. ಚೆಸ್ಕಾಂನವರು ರೈತರನ್ನು ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ. ಬೇಕಾಬಿಟ್ಟಿಯಾಗಿ ವಿದ್ಯುತ್‌ ಕಡಿತ ಮಾಡುತ್ತಾರೆಂದರು. ಶಾಸಕರು, ಚೆಸ್ಕಾಂ ಎಇಇಗೆ ದೂರು ಬಾರದಂತೆ ಕ್ರಮವಹಿಸಬೇಕೆಂದು ತಾಕೀತು ಮಾಡಿದರು. ಸಭೆಯಲ್ಲಿ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಇಒ ಕೃಷ್ಣಕುಮಾರ್‌, ಎಪಿಎಂಸಿ ಸದಸ್ಯ ಸುಭಾಷ್‌, ಮುಖಂಡರಾದ ಕಿರಂಗೂರು ಬಸವರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next