ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಹಣ್ಣು-ತರಕಾರಿ, ಹೂವು ಬೆಳೆದು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿ ಪತ್ರ ಬರೆದಿರುವ ಅವರು, ಒಂದು ತಿಂಗಳ ಲಾಕ್ ಡೌನ್‌ನಿಂದ ಹಣ್ಣು-ತರಕಾರಿಗೆ ಬೇಡಿಕೆ ಇಲ್ಲದೆ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಕೃಷಿ-ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ, ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ರೈತರ ಸಮಸ್ಯೆ ಕುರಿತು “ಉದಯವಾಣಿ’ಯಲ್ಲಿ ಏ.24ರಂದು ಲಾಕ್‌ಡೌನ್‌ನಿಂದ ಒಂದು ಲಕ್ಷ ಟನ್ ಹಣ್ಣು 15 ಸಾವಿರ ಟನ್ ತರಕಾರಿಗೆ ಬೇಡಿಕೆ ಇಲ್ಲದೆ ರೈತರು ಸಮಸ್ಯೆ ಎದುರಿಸುತ್ತಿರುವ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಯ ಕ್ಲಿಪಿಂಗ್ ಸಹ ದೇವೇಗೌಡ ಲಗತ್ತಿಸಿದ್ದಾರೆ.
ಪತ್ರದ ಸಾರಾಂಶ: ಹಳೇ ಮೈಸೂರು, ಹೈದರಾಬಾದ್ -ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು-ತರಕಾರಿ, ಹೂವು ಬೇಡಿಕೆ
ಇಲ್ಲದೆ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದ ರೈತರು ಇಂದು ಸಾಲಗಾರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು. ಅಧಿಕಾರಿಗಳಿಂದ ಸಮೀಕ್ಷೆ
ಮಾಡಿಸಿ ನಷ್ಟಗೊಂಡ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಯಾವುದೇ ಕಾರಣಕ್ಕೂ ಕೈ ಬಿಡಬೇಡಿ’ ಎಂದು ಮನವಿ ಮಾಡಿದ್ದಾರೆ.