Advertisement

ವಾಣಿಜ್ಯೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ ನೀಡಿ

03:42 PM Jun 27, 2021 | Team Udayavani |

ಕಲಬುರಗಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಾಣಿಜ್ಯೋದ್ಯಮಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಮತ್ತು ಎಲ್ಲ ವಾಣಿಜ್ಯ ಮಳಿಗೆಗಳ ಮೇಲಿನ ತೆರಿಗೆಯಲ್ಲಿ ಪ್ರಸಕ್ತ ವರ್ಷದ ತೆರಿಗೆ ರಿಯಾಯ್ತಿ ನೀಡಬೇಕೆಂದು ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪ್ರಶಾಂತ ಮಾನಕರ್‌, ಗೌರವ ಕಾರ್ಯದರ್ಶಿ ಶರಣಬಸಪ್ಪ ಪಪ್ಪಾ ಆಗ್ರಹಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಕೊರೊನಾದಿಂದ ಎಲ್ಲ ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದಾರೆ. ಈ ನಡುವೆ ಕಲಬುರಗಿ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು. ಕೊರೊನಾ ಲಾಕ್‌ಡೌನ್‌ದಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕರು ಸೇರಿದಂತೆ ಎಲ್ಲ ವರ್ಗ ಮತ್ತು ವಲಯದ ಜನರಿಗೆ ಮಹಾನಗರ ಪಾಲಿಕೆಯ ಈ ಅವೈಜ್ಞಾನಿಕ ತೆರಿಗೆ ಹೆಚ್ಚಳ ಆಘಾತ ತಂದಿದೆ.

ಈ ಹಿಂದಿನ ತೆರಿಗೆ ಹೆಚ್ಚಳಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ದುಪ್ಪಟ್ಟು ತೆರಿಗೆ ಹೊರೆಯಾಗಿದೆ. ತರಕಾರಿ ಮಾರ್ಕೆಟ್‌ನ ವಾಣಿಜ್ಯ ಆಸ್ತಿಯ ತೆರಿಗೆ ಕೆಳದ ವರ್ಷದ 26,828ರೂ. ಇತ್ತು. ಈಗ ಅದೇ ಆಸ್ತಿ ತೆರಿಗೆ 56,408ರೂ. ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದೋಷಪೂರಿತ ತೆರಿಗೆ ಹೆಚ್ಚಳವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ಕಾರಣಕ್ಕೆ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಮೇ ಮತ್ತು ಜೂನ್‌ ತಿಂಗಳ ವಿದ್ಯುತ್‌ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದು, ಸ್ವಾಗರ್ತಹವಾಗಿದೆ. ಈ ತೆರಿಗೆ ವಿನಾಯಿತಿಯನ್ನು ಎಲ್ಲ ಕೈಗಾರಿಕೆಗಳಿಗೆ ವಿಸ್ತರಿಸಬೇಕು.

ಅದೇ ರೀತಿ ವಾಣಿಜ್ಯ ವಾಹನಗಳ ತೆರಿಗೆಯಲ್ಲಿ ಜೂನ್‌ ತಿಂಗಳಿಗೆ ಶೇ.50ರಷ್ಟು ವಿನಾಯ್ತಿ ನೀಡಲಾಗಿದೆ. ಕೊರೊನಾ ಸಮಸ್ಯೆಯಿಂದ ವಾಣಿಜ್ಯ ವಾಹನ ವಲಯವೂ ತೀವ್ರವಾಗಿ ಕುಸಿದಿದೆ. ಆದ್ದರಿಂದ ಕನಿಷ್ಟ ಆರು ತಿಂಗಳು ಕಾಲ ಶೇ.50ರಷ್ಟು ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು. ಮೋಟರ್‌ ವಾಹನಗಳ ತೆರಿಗೆ ಪಾವತಿಯನ್ನು ಕನಿಷ್ಟ ಎರಡು ತಿಂಗಳ ಕಾಲ ಅಂದರೆ ಆಗಸ್ಟ್‌ವರೆಗೆ ಮುಂದೂಡಬೇಕು. ವರ್ತಕರು ನೌಕರರ ಸಂಬಳ ಮತ್ತು ಕಟ್ಟಡದ ಬಾಡಿಗೆ ಕಟ್ಟಬೇಕಾಗಿದ್ದರಿಂದ ಸರ್ಕಾರ ನೆರವಿಗೆ ಧಾವಿಸುವ ಅಗತ್ಯ ಇದೆ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಚ್‌ಕೆಸಿಸಿಐ ನಾಗರಿಕ ವಿದ್ಯಮಾನಗಳ ಉಪಸಮಿತಿ ಅಧ್ಯಕ್ಷ ರಾಮಚಂದ್ರ ಕೋಸಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next