ನಟ ಶರಣ್ ಈ ವರ್ಷ “ಅವತಾರ ಪುರುಷ’ನಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಸದ್ಯ ಶರಣ್ ಅಭಿನಯದ “ಅವತಾರ ಪುರುಷ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿಯೇ ನಡೆಯುತ್ತಿದ್ದು, ಇದೇ ವೇಳೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದೆ.
ನಟ ಶರಣ್ ಇಂದು (ಫೆ. 06) ತಮ್ಮ ಬರ್ತ್‌ಡೇ ಸಂಭ್ರಮದಲ್ಲಿದ್ದು, ಇದೇ ವೇಳೆ ಚಿತ್ರತಂಡ ಶರಣ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ “ಅವತಾರ ಪುರುಷ’ ಚಿತ್ರದ ಟೀಸರ್ ಅನ್ನು ಹೊರತರುವ ಯೋಜನೆ ಹಾಕಿಕೊಂಡಿದೆ. ಗುರುವಾರ (ಇಂದು) ಬೆಳಿಗ್ಗೆ 10 ಗಂಟೆಗೆ ಪುಷ್ಕರ್ ಫಿಲಂಸ್ ಯೂ-ಟ್ಯೂಬ್ ಚಾನೆಲ್‌ನಲ್ಲಿ “ಅವತಾರ ಪುರುಷ’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಸುನಿ, “ಇಂದು “ಅಷ್ಟದಿಗ್ಬಂದನ ಮಂಡಲಕ’ ಅನ್ನೋ ಹೆಸರಿನಲ್ಲಿ “ಅವತಾರ ಪುರುಷ’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಈ ಟೀಸರ್‌ನಲ್ಲಿ ನಟ ಶರಣ್ ಅವರ ಡಿಫರೆಂಟ್ ಮ್ಯಾನರಿಸಂ ಮತ್ತು ಕಾಮಿಡಿ ಫ್ಲೇವರ್ ಇರಲಿದ್ದು, ಕೊನೆಯ 20 ಸೆಕೆಂಡ್ ಬ್ಯಾಕ್ ಮ್ಯಾಜಿಕ್ ಬಗ್ಗೆಯೂ ಹೇಳುತ್ತಿದ್ದೇವೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್‌ಲುಕ್‌ಗೆ ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ನಿರೀಕ್ಷೆ ಮೂಡಿಸಲು “ಅವತಾರ ಪುರುಷ’ ಯಶಸ್ವಿಯಾಗಿದ್ದಾನೆ’ ಎಂದಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಅವತಾರ ಪುರುಷ’ ಚಿತ್ರಕ್ಕೆ ಸಿಂಪಲ್ ಸುನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಸದ್ಯ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಒಂದೆಡೆ ಬಾಕಿಯಿರುವ ಹಾಡುಗಳ ಚಿತ್ರೀಕರಣಕ್ಕೂ ಪ್ಲಾನ್ ಹಾಕಿಕೊಂಡಿದ್ದು, ಮತ್ತೂಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲೂ ನಿರತವಾಗಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ, ಇದೇ ಮೇ ತಿಂಗಳಿನಲ್ಲಿ “ಅವತಾರ್ ಪುರುಷ’ ತೆರೆಗೆ ಬರುವ ಸಾಧ್ಯತೆ ಇದೆ.