Advertisement

ಪ್ರತಿ ಶನಿವಾರ ಇಲ್ಲಿ ವಿಶೇಷ ಉಪಾಹಾರ !

09:42 AM Mar 19, 2019 | Team Udayavani |

ರೋಣ: ಇಂದು ಬಹುತೇಕ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಡಿಮೆ ಇಲ್ಲವೆನ್ನುವಂತೆ ಪೈಪೋಟಿ ನೀಡುತ್ತಿವೆ. ಸರಕಾರ ವಿವಿಧ ಯೋಜನೆಗಳನ್ನು ತಂದು ಮಕ್ಕಳ ಹಾಜರಾತಿಯನ್ನು ಹೆಚ್ಚಿಸುತ್ತಿವೆ.

Advertisement

ತಾಲೂಕಿನ ಶಾಲೆಗಳ ಮಕ್ಕಳ ಹಾಜರಾತಿ ಹಾಗೂ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ತಾಲೂಕಾ ಪಂಚಾಯತಿ ಮತ್ತು ಅಕ್ಷರ ದಾಸೋಹ ಇಲಾಖೆ ಪ್ರತಿ ಶನಿವಾರ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿಶೇಷ ಉಪಾಹಾರ ವ್ಯವಸ್ಥೆಯನ್ನು ಮಾಡುವ ಮುಖಾಂತರ ಪ್ರಾಯೋಗಿಕವಾಗಿ ಯಶಸ್ಸು ಕಾಣಲಾಗಿದೆ.
 
ಸ್ಥಳೀಯ ಗ್ರಾಮಸ್ಥರಿಂದ ಇಡ್ಲಿ ಪಾತ್ರೆ ಸೇರಿದಂತೆ ಅವಶ್ಯಕ ವಸ್ತುಗಳನ್ನು ದೇಣಿಗೆ ರೂಪದಲ್ಲಿ ಪಡೆದು, ಸರ್ಕಾರದಿಂದ
ಅಕ್ಷರ ದಾಸೋಹ ಇಲಾಖೆಗೆ ಬರುವ ದವಸ ಧಾನ್ಯಗಳನ್ನೇ ಬಳಸಿಕೊಂಡು ಪ್ರತಿ ಶನಿವಾರ ಶಾಲೆಯಲ್ಲಿ ಮಕ್ಕಳಿಗೆ ಇಡ್ಲಿ,ಪುರಿ, ಬೆಲ್ಲದ ಬ್ಯಾಳಿ ಚಪಾತಿ ಸೇರಿದಂತೆ ಇತ್ಯಾದಿ ಉಪಾಹಾರಗಳನ್ನು ನೀಡುವುದರ ಮುಖಾಂತರ ಮಕ್ಕಳಲ್ಲಿ ಸಂತಸದ ಜೊತೆಗೆ ಕಲಿಕೆಯ ಹುಮ್ಮಸ್ಸು ಇಮ್ಮಡಿಯಾಗುವಂತೆ ಮಾಡಿದ್ದಾರೆ. ವಿಶೇಷ ಉಪಾಹಾರ ನೀಡಲು ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಮಕ್ಕಳ
ಹಾಜರಾತಿ ಸಂಖ್ಯೆಯಲ್ಲಿ ಶೇ.10 ಹೆಚ್ಚಳವಾಗಿದೆ.

ಸದ್ಯ ಎಲ್ಲಿ ಜಾರಿ: ಸದ್ಯ ತಾಲೂಕಿನ ಮುದೇನಗುಡಿ, ಕುರಹಟ್ಟಿ, ಕೌಜಗೇರಿ, ಅಬ್ಬಿಗೇರಿ, ಸವಡಿ, ಹೊಳೆಆಲೂರ, ರೋಣ, ಮಲ್ಲಾಪೂರ, ಬಸರಕೋಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬರುವ ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಈ ವಿಶೇಷ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಈ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಆಗಿರುವ ಬದಲಾವಣೆ ಕಂಡ ಬಹುತೇಕ ದಾನಿಗಳು, ಪಾಲಕರು ತಾಲೂಕಿನ ವಿವಿಧ ಶಾಲೆಗಳಿಗೆ ಪಾತ್ರೆ-ಪಗಡು ಸೇರಿದಂತೆ ದವಸಧಾನ್ಯ ನೀಡಲು ಮುಂದಾಗಿದ್ದಾರೆ ಸದ್ಯ ನಮ್ಮ ತಾಲೂಕಿನ ವಿವಿಧ ಶಾಲೆಗಳಲ್ಲಿ ಅಕ್ಷರ ದಾಸೋಹ ಇಲಾಖೆ ಸ್ಥಳೀಯ ಜನತೆಯ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಶನಿವಾರ ವಿಶೇಷ ಉಪಾಹಾರ ವ್ಯವಸ್ಥೆ ಮಾಡುವ ಮುಖಾಂತರ ಮಕ್ಕಳನ್ನು ಶಾಲೆಗೆ ಸೆಳೆಯುವ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ರಮವನ್ನು ಸರ್ಕಾರದಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ.  
  ಕಳಕಪ್ಪ ಬಂಡಿ,ಶಾಸಕ, ರೋಣ

ತಾಲೂಕಿನಲ್ಲಿ ಇರುವ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಶುದ್ಧ ನೀರಿನ ಘಟಕದಿಂದ ಪ್ರತಿನಿತ್ಯ ಶುದ್ಧ ನೀರು ನೀಡಲು ಆದೇಶಿಸಲಾಗಿದೆ. ಅಲ್ಲದೆ ನೀರನ್ನು ತೆಗೆದುಕೊಂಡು ಹೋಗಲು ಕ್ಯಾನ್‌ ಖರೀದಿಸಲು ವರ್ಷಕ್ಕೆ ನಾಲ್ಕು ಸಾವಿರ ರೂ.ಗಳನ್ನು ಇಲಾಖೆಯಿಂದ ಪ್ರತಿ ಶಾಲೆಗೆ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಸದುಪಯೋಗ ಪಡೆದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಜೊತೆ ಶಾಲೆಗಳ ಅಭಿವೃದ್ಧಿಯಾಗಬೇಕು. ಇದು ಸರ್ಕಾರದ ಮಹದಾಸೆ.
 ಎಂ.ವಿ.ಚಳಗೇರಿ, ತಾಪಂ ಇಒ 

ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿ ಮಧ್ಯಮ ಹಾಗೂ ಕೆಳ ವರ್ಗದ ಮಕ್ಕಳೇ ಹೆಚ್ಚಾಗಿರುತ್ತಾರೆ. ಅವರಿಗೆ ಅಪೌಷ್ಟಿಕತೆ ಹೋಗಲಾಡಿಸುವ ಹಾಗೂ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಶನಿವಾರ ತಾಲೂಕಿನ ವಿವಿಧ ಶಾಲೆಗಳಲ್ಲಿ ವಿಶೇಷ ಉಪಾಹಾರ ನೀಡುತ್ತಿದ್ದೇವೆ. ಇದರಿಂದ ಮಕ್ಕಳ ಹಾಜರಾತಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಯೋಜನೆಯನ್ನು ಎಲ್ಲ ಶಾಲೆಗಳಿಗೆ ವಿಸ್ತರಿಸುವ ಕಾರ್ಯವನ್ನು ಅಕ್ಷರ ದಾಸೋಹ ಇಲಾಖೆ ಮಾಡಲು ಮುಂದಾಗುತ್ತದೆ.
  ಬಸವರಾಜ ಅಂಗಡಿ, ಸಹಾಯ ನಿರ್ದೇಶಕ, ಅಕ್ಷರ ದಾಸೋಹ ಇಲಾಖೆ

Advertisement

„ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next