Advertisement

ಪುರುಷನೆ ಅಪರಾಧಿ, ಮಹಿಳೆಯೆ ಸಂತ್ರಸ್ತೆ ಎಂಬ ಮನಃಸ್ಥಿತಿಯಿಂದ ಹೊರಬರುವುದು ಅನಿವಾರ್ಯ.!?

02:09 PM Mar 08, 2021 | Team Udayavani |

ಮಹಿಳಾ ದಿನಾಚರಣೆ, ಮಹಿಳೆಯರಿಗೆ ಅವಮಾನ, ಆಕೆಯ ಮೇಲೆ ಅತ್ಯಾಚಾರ ಇತ್ಯಾದಿಗಳು ಸಂಭವಿಸಿದಾಗ ಮಹಿಳಾ ಸಬಲೀಕರಣ, ಸಶಕ್ತೀಕರಣ, ಸಮಾನತೆ ಇತ್ಯಾದಿ ವಿಷಯಗಳು ಮುಖ್ಯವಾಹಿನಿಗೆ ಬರುತ್ತದೆ. ಭಾರತದಲ್ಲಿ ನೋಡಿದರೆ  ಕೆಲವೇ ವಿಷಯಗಳು ಶೀಘ್ರದಲ್ಲೇ ಇತ್ಯರ್ಥಗೊಂಡರೂ, ಹಲವು ವಿಷಯಗಳು ವರ್ಷಾನುಗಟ್ಟಲೆ ನ್ಯಾಯಾಲಯದಲ್ಲೇ ಅಲೆದಾಡುತ್ತಿರುತ್ತವೆ. ಕೆಲವರು ಇದೊಂದು ಅವಮಾನ ಎಂಬ ಕಾರಣಕ್ಕೆ ಒಳಗಿಂದೊಳಗೆ ಪ್ರಕರಣಗಳನ್ನು ಮುಚ್ಚಿಹಾಕಿದರೆ, ಮುಖ್ಯವಾಹಿನಿಗೆ ಬರುವ ಹಲವು ಪ್ರಕರಣಗಳು ಅಂತ್ಯಗೊಳ್ಳುವುದೂ ಇಲ್ಲ. ಹಲವು ಪ್ರಕರಣಗಳು ಮಹಿಳೆಯ ವಿರುದ್ಧ ಇದೆ ಎಂದ ಮಾತ್ರಕ್ಕೆ ಪ್ರತೀ ಬಾರಿ ಮಹಿಳೆಯೇ ಸಂತ್ರಸ್ತೆ ಎಂದುಕೊಂಡರೆ ತಪ್ಪಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹುಡುಗಿಯರು, ತಮ್ಮ ಪರವಾಗಿರುವ ಕಾನೂನುಗಳನ್ನು ದುರ್ಬಳಕೆ ಮಾಡಿ ಹುಡುಗರ ಮೇಲೆ ಸುಳ್ಳು ಆರೋಪಗಳನ್ನು ಮಾಡಿದೂ ಉಂಟು. ಆದರೆ ಭಾರತದ ಕಾನೂನು ವ್ಯವಸ್ಥೆಯ ಮೂಲಕ ಒಂದು ಪ್ರಕರಣ ಇತ್ಯರ್ಥಗೊಳ್ಳುವಾಗ ಆರೋಪಕ್ಕೊಳಗಾಗಿರುವ ಹುಡುಗ, ಆತನ ಕುಟುಂಬ ಎದುರಿಸುವ ಅಪಮಾನಗಳು ಅಷ್ಟಿಷ್ಟಲ್ಲ!

Advertisement

ಓದಿ : ಪ್ರಚಾರದ ಗೀಳಿಲ್ಲ, ಕಾಯಕವೇ ಕೈಲಾಸ: ಸಮಾಜಕ್ಕೆ “ಬೆಳಕಾದ’ ನಾಡಿನ ಮಹಿಳಾಮಣಿಗಳು

ಆತನ ಹೆಸರು ವಿಷ್ಣು ತಿವಾರಿ. ಸೆಪ್ಟೆಂಬರ್ 16, 2000 ದಂದು ಎಸ್‌ ಸಿ ಎಸ್‌ ಟಿ ಕಾಯ್ದೆಯಡಿ ಆತನನ್ನು ಬಂಧಿಸಲಾಗಿತ್ತು. ಆತ ನೆಲೆಸಿದ್ದ ಹಳ್ಳಿಯ ಮಹಿಳೆಯೊಬ್ಬರು, ತಾನು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ತಿವಾರಿಯರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ ಆಧಾರದ ಮೇಲೆ ಅಲಹಾಬಾದ್ ಹೈಕೋರ್ಟ್ ಆತನಿಗೆ ೧೦ ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿತ್ತು. ಆದರೆ ಬಳಿಕ ವಿಚಾರಣಾ ನ್ಯಾಯಾಲಯದ ನಿರ್ದೇಶನದಂತೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿತ್ತು. ಆದರೆ ಈ ವರ್ಷ(2021) ಜನವರಿಯಲ್ಲಿ ವಿಷ್ಣು ತಿವಾರಿ ನಿರಪರಾಧಿ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್, ಸುಳ್ಳು ಆರೋಪದಡಿ ಅನುಭವಿಸಿದ ಜೈಲುವಾಸ 20 ವರ್ಷಗಳ ಬಳಿಕ ಕೊನೆಗೊಂಡಿತು. ಬಂಧಿಸುವಾಗ ಈತನಿಗೆ 23 ವರ್ಷ. ಉತ್ತರಪ್ರದೇಶ ರಾಜ್ಯದ ಲಲಿತ್‌ಪುರ ಜಿಲ್ಲೆಯ ಪುಟ್ಟ ಗ್ರಾಮದ ವಿಷ್ಣು ತಿವಾರಿ, ಜೈಲಿನಿಂದ ಹೊರ ಬಂದಾಗ ವಯಸ್ಸು 43! ಸಣ್ಣ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದ ವಿಷ್ಣು, ತನ್ನ ಜೈಲುವಾಸದ ಅವಧಿಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ತನ್ನ ತಂದೆ ಹಾಗೂ ಒಬ್ಬ ಸಹೋದರನನ್ನೂ ಕಳೆದುಕೊಂಡರು. ಬೇಸರದ ಸಂಗತಿಯೆಂದರೆ, ತನ್ನ ತಂದೆ ಹಾಗೂ ಸಹೋದರನ ಅಂತ್ಯಸಂಸ್ಕಾರಕ್ಕೂ ವಿಷ್ಣುಗೆ ಹೋಗಲಾಗಲಿಲ್ಲ! ನಾವು ಒಳ್ಳೆಯವರಾಗಿದ್ದರೆ ಯಾರಾದರೂ ಒಬ್ಬರು ನಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂಬ ಮಾತಿನಂತೆ, ವಿಷ್ಣು ತಿವಾರಿಯವರ ಪರವಾಗಿ ಜೈಲಿನ ಅಧಿಕಾರಿಗಳೇ ನಿಂತರು. ಮನೆಯವರೂ ಯಾರೂ ಇಲ್ಲದಿದ್ದರೂ, ಆತ ಎಂತಹ ಮುಗ್ಧ ಎಂದು ಜೈಲಿನ ಅಧಿಕಾರಿಗಳಿಗೆ ಅರಿವಾಗತೊಡಗಿತು. ಕೊನೆಗೆ ಇವರೇ ಆರೋಪಿ ವಿಷ್ಣು ತಿವಾರಿ ಪರವಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು. ಕೊನೆಗೆ 20ವರ್ಷಗಳ ಬಳಿಕ, ಈತ ನಿರಪರಾಧಿ ಎಂದು ಸಾಬೀತಾಯಿತು. ವಿಪರ್ಯಾಸವೆಂದರೆ ಈತನ ಬಿಡುಗಡೆಯ ಸಂದರ್ಭ ಯಾರೂ ಬಂದಿರಲಿಲ್ಲ. “ಮನೆಗೆ ಹೋಗಲು ಜೈಲಿನವರೇ ನನಗೆ 600 ರೂಪಾಯಿ ಕೊಟ್ಟಿದ್ದಾರೆ” ಎಂದು ವಿಷ್ಣು ಮಾಧ್ಯಮದ ಮುಂದೆ ಹೇಳಿಕೆ ನೀಡಿದರು. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಸೋಲು ಎಂದೆನಿಸಿದರೂ ತಪ್ಪೇನಿಲ್ಲ!

ಒಂದು ಹೆಣ್ಣು ಸುಳ್ಳು ಆರೋಪ ನಡೆಸಿದರೂ, ಅಲ್ಲಿ ಪುರುಷನೇ ನಿಸ್ಸಹಾಯಕ ಪರಿಸ್ಥಿತಿಯಲ್ಲಿರುತ್ತಾನೆ. ನೀವೇ ಒಂದು ಕ್ಷಣ ಯೋಚಿಸಿ. ನಿಮ್ಮದೇನೂ ತಪ್ಪಿರದಿದ್ದರೂ, ಇಡೀ ಸಮಾಜ ನಿಮ್ಮನ್ನು ತೆಗಳುತ್ತಿದ್ದರೆ ನೀವೇನು ಮಾಡುವಿರಿ? ಮಹಿಳಾ ಸಬಲೀಕರಣ ಆಗಬೇಕು. ಮಹಿಳೆಯ ಉತ್ತೇಜನಕ್ಕೆ ಪುರುಷರೂ ಬೆನ್ನೆಲುಬಾಗಿ ನಿಲ್ಲಬೇಕು. ಮಹಿಳೆಯರ ಮೇಲಿನ ಅಪರಾಧಗಳು ಕೊನೆಗೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಇದರಲ್ಲೇನೂ ಸಂಶಯವಿಲ್ಲ. ಆದರೆ ಇದೇ ವೇಳೆ ಪುರುಷರ ಹಕ್ಕಿನ ಬಗ್ಗೆ ಯಾರು ಮಾತನಾಡುತ್ತಾರೆ? ಉದಾಹರಣೆಗೆ, ರಸ್ತೆಯಲ್ಲಿ ಒಂದು ಅಪಘಾತ ಸಂಭವಿಸಿದರೂ, ಅದರಲ್ಲಿ ಮೊದಲು ಪುರುಷನದ್ದೇ ತಪ್ಪು ಎಂದು ಬೊಟ್ಟು ಮಾಡಲಾಗುತ್ತದೆ. ನೈಜ ಮಾಹಿತಿ ಹೊರಬರುವವರೆಗೂ ಪುರುಷನೇ ಎಲ್ಲಾ ತಪ್ಪುಗಳನ್ನು ಹೊತ್ತುಕೊಳ್ಳಬೇಕಾಗುತ್ತದೆ.

ಓದಿ : ಮಕ್ಕಳ ಫೋಟೋ ಶೇರ್ ಮಾಡಿ ಮಹಿಳಾ ದಿನಕ್ಕೆ ವಿಶ್ ಮಾಡಿದ ಕೊಹ್ಲಿ, ಕರೀನಾ

Advertisement

ಎರಡು ವರ್ಷಗಳ ಹಿಂದೆ ರಸ್ತೆಯಲ್ಲಿ ಒಂದು ಕಾರು ಮತ್ತು ಒಬ್ಬಳು ಪಾದಾಚರಿಯ ನಡುವೆ ಸಣ್ಣ ಅಪಘಾತ ಸಂಭವಿಸಿತು. ಆ ಹೆಣ್ಣು ನೆಲಕ್ಕುರುಳಿದ್ದೇ ತಡ. ಸುತ್ತಲೂ ಇದ್ದ ಜನರು ಸೇರಿ ಕಾರಿನಲ್ಲಿದ್ದವರದ್ದೇ ತಪ್ಪು ಎಂದು ಹೇಳಲಾರಂಭಿಸಿದರು. ಕಾರಣ, ಕಾರಿನಲ್ಲಿ ೫ ಮಂದಿ ಇದ್ದರು. ಅದರಲ್ಲಿ ನಾಲ್ವರು ಪುರುಷರು, ಮತ್ತೊಬ್ಬಳು ಕಾಲೇಜು ಹುಡುಗಿ. ಜನರೆಲ್ಲರೂ ಸೇರಿ, ಪಾದಾಚಾರಿ ಹೆಣ್ಣಿಗೆ ಆಸ್ಪತ್ರೆಯಲ್ಲಿ ತಗಲುವ ಎಲ್ಲಾ ವೆಚ್ಚಗಳನ್ನು ಕಾರಿನವರೇ ಭರಿಸಬೇಕು ಎಂದರು. ಆದರೆ ಈ ಸಂದರ್ಭ ಕಾರಿನಲ್ಲಿ ಆ ಹುಡುಗಿ ಇರದಿದ್ದರೆ, ಏನಾಗುತ್ತಿತ್ತೋ ಏನೋ! ಆಕೆ ಹೊರ ಬಂದು ವಾಗ್ವಾದಕ್ಕಿಳಿದಳು. ಆ ಪಾದಾಚಾರಿ ಹೆಣ್ಣಿನದ್ದೇ ತಪ್ಪಾಗಿದ್ದು, ಆಕೆ ಮೊಬೈಲ್ ನೋಡಿ ನಡೆದಾಡಿ ಬರುತ್ತಿದ್ದಳು ಎಂದು ನೆರೆದಿದ್ದ ಜನರನ್ನು ತರಾಟೆಗೆ ತಗೊಂಡಳು. ಕಾರಿನಲ್ಲಿದ್ದ ಎಲ್ಲಾ ಪುರುಷರು ಮೂಕಪ್ರೇಕ್ಷಕರಾಗಿಯೇ ಉಳಿದರು! ಕೊನೆಗೂ ಹುಡುಗಿ ವರ್ಸಸ್ ಹುಡುಗಿ ನಡುವಿನ ಯುದ್ಧವು ಕೊನೆಗೊಂಡರೂ, ಕಾರಿನವರು ಒಂದಷ್ಟು ಖರ್ಚನ್ನು ಭರಿಸುವುದೆಂದು ಒಪ್ಪಿಕೊಂಡರು. ಒಂದು ವೇಳೆ ಕಾರಿನಲ್ಲಿ ಎಲ್ಲರೂ ಪುರುಷರೇ ಇದ್ದಿದ್ದರೆ, ಚಿತ್ರಣವೇ ಬದಲಾಗುತ್ತಿತ್ತು!

ಇಲ್ಲಿ ನಾವು ಚರ್ಚಿಸಬೇಕಾಗಿರುವುದು ಜನರ ಮನಃಸ್ಥಿತಿಯ ಬಗ್ಗೆ. ಪ್ರತೀ ಬಾರಿ ಪುರುಷನೇ ತಪ್ಪಿತಸ್ಥನಾಗಿರುವುದಿಲ್ಲ ಎಂಬುವುದನ್ನು ನಾವೆಲ್ಲರೂ ಒಪ್ಪಬೇಕು. ಮೇಲಿನ ಎರಡೂ ಸಂದರ್ಭಗಳಲ್ಲಿ ಪುರುಷನ ಬಳಿ ಒಂದೇ ಒಂದು ಮಾತನ್ನೂ ಆಡದೆ, ನೇರವಾಗಿ ಆತನೇ ಅಪರಾಧಿ ಎಂಬಂತೆ ಬಿಂಬಿಸಲಾಗಿದೆ. ಯಾವುದೇ ದಾಖಲೆಗಳಿಲ್ಲದಿದ್ದರೂ, ಪುರುಷನೇ ಅಪರಾಧಿ, ಮಹಿಳೆಯೇ ಸಂತ್ರಸ್ತೆ ಎಂಬ ಮನಃಸ್ಥಿತಿ ಈ ಸಮಾಜದ್ದು!

2009ರ ನವೆಂಬರ್ ತಿಂಗಳು. ಚೆನ್ನೈನ ಒಬ್ಬಳು ಯುವತಿಯ ತಾಯಿ, ಸಂತೋಷ್ ಎಂಬಾತನ ಮನೆಗೆ ಬಂದು, ” ನನ್ನ ಮಗಳು ಗರ್ಭಿಯಾಗಲು ನೀನೇ ಕಾರಣ. ಇವಳನ್ನು ನೀನೇ ಮದುವೆಯಾಗಬೇಕು. ಇಲ್ಲದಿದ್ದರೆ ಪೋಲೀಸ್ ಪ್ರಕರಣ ದಾಖಲಿಸುತ್ತೇವೆ” ಎಂದು ಹೇಳಿದಳು. ಆತ ನಿರಾಕರಿಸಿದಾಗ, ಯುವತಿಯ ಮನೆಯವರು, ಈತನ ಮೇಲೆ ಅತ್ಯಾಚಾರದ ಆರೋಪ ದಾಖಲಿಸಿದರು. ಈ ಆರೋಪದಡಿ, ಇವನ್ನನ್ನು ಬಂಧಿಸಲಾಯಿತು. ಸುಮಾರು ೩ ತಿಂಗಳ ಬಳಿಕ, ಅವಳು ಮಗುವನ್ನು ಹೆತ್ತಾಗ ಆತನಿಗೆ ಜಾಮೀನು ನೀಡಲಾಗಿತ್ತು. ಆದರೆ ಬಳಿಕ ನಡೆದ ಡಿಎನ್‌ಎ ಪರೀಕ್ಷೆಯ ಆಧಾರದ ಮೇಲೆ ಆತನ ತಪ್ಪಿಲ್ಲ ಎಂದು ಸಾಬೀತಾಗಿತ್ತು. ಆದರೂ ಬಳಿಕ ಮತ್ತೊಮ್ಮ ಮನೆಯವರು ಆತನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದರು. ವಿಚಾರಣೆಯು ಸುಮಾರು ಏಳು ವರ್ಷಗಳ ಕಾನಡೆಯಿತು. 2016ರಲ್ಲಿ ಈತನದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾದಾಗ, ಈತನು ಆರೋಪ ಹೊರಿಸಿದ ಮನೆಯವರಿಂದ 30 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಕೇಳಿದನು. ಕೊನೆಗೂ, 2020ರ ನವೆಂಬರ್ ತಿಂಗಳಿನಲ್ಲಿ ಆದೇಶ ಹೊರಡಿಸಿದ ಮದ್ರಾಸ್ ಹೈಕೋರ್ಟ್, ೧೫ ಲಕ್ಷ ರೂಪಾಯಿಗಳನ್ನು ಯುವಕನಿಗೆ ನೀಡಬೇಕೆಂದಿತು.7 ವರ್ಷಗಳ ಸೆರೆಮನೆವಾಸ ಅನುಭವಿಸಿದ ಈತನಿಗೆ ಇಂಜಿನಿಯರಿಂಗ್ ಪದವಿಯೂ ತಪ್ಪಿ ಹೋಗಿತ್ತು..!

ಸಣ್ಣ ವಯಸ್ಸಿನಿಂದಲೂ ತನ್ನ ಸುತ್ತಮುತ್ತಲಿನ ವಾತಾವರಣ ಒಬ್ಬ ಹುಡುಗನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಪುಟ್ಟ ಬಾಲಕ ಅಳುತ್ತಿದ್ದರೆ, ನೀನೇನು ಹುಡುಗಿಯಾ ಅಳೋದಿಕ್ಕೆ? ಹುಡುಗರು ಹೀಗೆಲ್ಲ ಅಳಬಾರದು ಎನ್ನುತ್ತಾರೆ. ಶಾಲಾ ಕಾಲೇಜು ಶಿಕ್ಷಣ ಪಡುಯುವಾಗ, ಚೆನ್ನಾಗಿ ಓದಬೇಕು. ಮುಂದೆ ಒಳ್ಳೆ ಸಂಪಾದನೆ ಮಾಡಿ, ಕುಟುಂಬವನ್ನು ನೋಡಿಕೊಳ್ಳಬೇಕು. ಸರ್ಕಾರಿ ಹುದ್ದೆ ಸಿಕ್ಕರೆ ಸಾಕು. ಲೈಫ್ ಸೆಟಲ್, ಇತ್ಯಾದಿ ಮಾತುಗಳನ್ನಾಡಿ ಒತ್ತಡ ಹಾಕಲಾಗುತ್ತದೆ. ಅದೇ ಹುಡುಗಿಯರ ಮನೆಯವರು, ಹುಡುಗ ಏನು ಮಾಡಿಕೊಂಡಿದ್ದನೆ, ಎಷ್ಟು ಆದಾಯಗಳಿಸುತ್ತಿದ್ದಾನೆ ಇತ್ಯಾದಿಯ ಬಗ್ಗೆ ನೋಡುತ್ತಾರೆಯೇ ವಿನಃ ನಮ್ಮ ಹುಡುಗಿಯ ಅರ್ಹತೆ ಏನು? ಆಕೆಗೆ ಸ್ವಂತ ಆದಾಯದ ಮೂಲ ಇದೆಯಾ? ಮದುವೆ ಆದ ಮೇಲೆ ಇವಳನ್ನು ಕೆಲಸಕ್ಕೆ ಕಳಿಹಿಸದಿದ್ದರೂ ಪರವಾಗಿಲ್ಲ. ಗಂಡ ಚೆನ್ನಾಗಿ ಸಂಪಾದಿಸಬೇಕು ಎಂದು ಮಾತ್ರ ನೋಡುತ್ತಾರೆ. ಎಲ್ಲದಕ್ಕೂ ಮುಖ್ಯ, ಹುಡುಗನಾಗಲಿ, ಹುಡುಗಿಯೇ ಆಗಲಿ ಅವರಲ್ಲಿ ಯಾವೆಲ್ಲಾ ಮಾನವೀಯ ಮೌಲ್ಯಗಳನ್ನು ಹೊಂದಿದ್ದಾರೆ? ಮನೆಗೆಲಸದಲ್ಲಿ ಹೆಂಡತಿಯೊಂದಿಗೆ ಪಾಲುದಾರನಾಗಿ, ಆಕೆಯನ್ನು ಕೆಲಸಕ್ಕೆ ಕಳುಹಿಸಿ ಕೊಡುತ್ತಾನಾ ಗಂಡ? ಎಂಬಿತ್ಯಾದಿ ಗುಣಗಳನ್ನು ನೋಡಬೇಕು. ಇಂತಹ ಮನಃಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.

ಓದಿ : ದೇವಿಯೆನ್ನುತ್ತಾ ಗುಡಿಯೊಳಗೆ ಕೂಡಿಬಿಡುವ ಧೋರಣೆಯ ನಡುವೆ ಬೊಗಸೆ ಉಸಿರನು ಹೆಕ್ಕುತ್ತ…!

ಹೇಳುತ್ತಾ ಹೋದರೆ ಪುಂಖಾನುಪುಂಖ ಆರೋಪಗಳು ನಮ್ಮ ಕಣ್ಣೆದುರಿಗೆ ಬರುತ್ತದೆ. ಉದ್ಯೋಗದಲ್ಲಿ ಭಡ್ತಿ ನೀಡಲಿಲ್ಲವೆಂದು, ಪುರುಷನೊಬ್ಬ ಕ್ಯಾಂಟೀನ್‌ ಗೆ ಬರ್ತಿರಾ ಎಂದು ಕೇಳಿದ್ದಕ್ಕೆ, ರಸ್ತೆಯಲ್ಲಿ ಹೋಗುತ್ತಿರುವಾಗ ಹುಡುಗ ಕಾಮೆಂಟ್ ಮಾಡಿದನೆಂದು, ತನ್ನ ಮಾತನ್ನು ಯಾರೂ ಕೇಳಲಿಲ್ಲವೆಂಬ ಇತ್ಯಾದಿ ಕಾರಣಗಳಿಗೆ ಪುರುಷರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಹಲವು ಪ್ರಕರಣಗಳು ಯಾವುದೇ ಪರಿಹಾರವಿಲ್ಲದೆ ಮುಚ್ಚಿಹೋಗುತ್ತದೆ. ಪ್ರತೀ ಬಾರಿಯೂ ಪುರುಷನೇ ತಪ್ಪಿತಸ್ಥ ಎಂಬ ಮತಿಭ್ರಮಣೆಯಿಂದ ಹೊರಬರಬೇಕಾಗಿದೆ. ಮಹಿಳೆಯರ ಸಬಲೀಕರಣ ಮಾತ್ರವಲ್ಲದೆ, ಪುರುಷರ ಹಕ್ಕನ್ನೂ ರಕ್ಷಿಸುವ ಕಾನೂನು ಹೊರತರಬೇಕಾಗಿರುವುದು ಈಗಿನ ಅನಿವಾರ್ಯತೆ. 2016ರಲ್ಲಿ ಉಚ್ಛನ್ಯಾಯಾಲಯವು ಪುರುಷರ ಹಕ್ಕಿನ ಬಗ್ಗೆ ಎತ್ತಿಹಿಡಿದರೂ, ಇದರ ಬಗ್ಗೆ ಇನ್ನೂ ಯಾವುದೇ ಚರ್ಚೆಗಳಾಗದಿರುವುದು, ಪ್ರಶ್ನಾರ್ಹವಾಗಿದೆ!

-ಇಂದುಧರ ಹಳೆಯಂಗಡಿ

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು ಮೂಡುಬಿದಿರೆ 

ಓದಿ : ಕರ್ನಾಟಕ ಬಜೆಟ್ 2021: ಮಹಿಳೆಯರಿಗೆ ಬಂಪರ್ ಯೋಜನೆ ಘೋಷಣೆ, ಶೇ.4ರ ಬಡ್ಡಿದರದಲ್ಲಿ 2 ಕೋಟಿ ಸಾಲ

Advertisement

Udayavani is now on Telegram. Click here to join our channel and stay updated with the latest news.

Next