Advertisement

ಆರು ದಶಕಗಳ ಕೂಗು ಅರಣ್ಯರೋದನವೇ?

02:40 AM May 30, 2018 | Karthik A |

ಕಾಸರಗೋಡು: ಕೇರಳ ಸರಕಾರದ ಕಡ್ಡಾಯ ಮಲಯಾಳ ನೀತಿ ವಿರೋಧಿಸಿ ಜಿಲ್ಲೆಯ ಕನ್ನಡಿಗರು ಮತ್ತೆ ಸಿಡಿದೆದ್ದಿದ್ದಾರೆ. ಇಲ್ಲಿನ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಏಳು ದಿನಗಳ ಕಾಲ ಸತ್ಯಾಗ್ರಹ, ಪ್ರತಿಭಟನೆ ನಡೆಸಿದ್ದಾರೆ. ಕೇರಳೀಯರೆಲ್ಲರೂ ಒಂದನೇ ತರಗತಿಯಿಂದ ಕಡ್ಡಾಯ ಮಲಯಾಳ ಕಲಿಯಬೇಕೆಂಬ ಕೇರಳ ಸರಕಾರದ ನೀತಿಯನ್ನು ವಿರೋಧಿಸಿ ಕಳೆದ ವರ್ಷ ಮೇ ತಿಂಗಳ 23ರಂದು ಇಲ್ಲಿನ ಕನ್ನಡಿಗರು ಅತ್ಯಂತ ಯಶಸ್ವಿಯಾಗಿ ಜಿಲ್ಲಾಧಿಕಾರಿ ಕಚೇರಿ ಸ್ತಂಭನ ಪ್ರತಿಭಟನೆಯನ್ನು ನಡೆಸಿದ್ದರು. ಮತ್ತೆ ಅದೇ ಕೂಗೆದ್ದಿದೆ. ಜೂನ್‌ ತಿಂಗಳಲ್ಲಿ ಶಾಲೆಗಳು ಪ್ರಾರಂಭವಾದಲ್ಲಿಂದ ಒಂದು ಪಾಠ ಕಡ್ಡಾಯ ಮಲಯಾಳ ಕಲಿಯಬೇಕೆಂಬ ಕೇರಳ ಸರಕಾರದ ನಿರ್ದೇಶನವನ್ನು ಇಲ್ಲಿನ ಕನ್ನಡಿಗರು ವಿರೋಧಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯವರೆಗೆ ಐದಾರು ವಿಧಾನಸಭಾ ಸದಸ್ಯರನ್ನು ಕಳುಹಿಸುತ್ತಿದ್ದ ಬೆಳಗಾವಿಯ ಮರಾಠಿಗರು ಈ ಬಾರಿ ಭಾಷೆಯ ಹೆಸರಿನಲ್ಲಿ ಒಂದೂ ಸ್ಥಾನವನ್ನು ಪಡೆದಿಲ್ಲ. ಆದರೆ ಅಲ್ಲಿ ಮರಾಠಿಗರು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಬರುವುದಿಲ್ಲ. ಜನರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಾದಂತೆ ಚುನಾವಣೆಯಲ್ಲಿ ಭಾಷೆ ತನ್ನ ಶಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಕಾಸರಗೋಡು ಇನ್ನೊಂದು ಭಾಷೆಯನ್ನು ಒತ್ತಾಯವಾಗಿ ಹೇರಿದಾಗ ಜನ ಪ್ರತಿಭಟಿಸುವುದು ನಿರಂತರ.

Advertisement

ಅದು ರಾಜ್ಯ ಪುನರ್ವಿಂಗಡಣೆಯ ಕಾವು ಕಳೆದುಕೊಂಡ ಎಪ್ಪತ್ತರ ದಶಕ. ಕೇರಳ ಸರಕಾರ ಇಲ್ಲಿ ಕನ್ನಡಿಗರಿಗೆ ಒಂದಲ್ಲ ಒಂದು ರೀತಿ ತೊಂದರೆ ಕೊಡುತ್ತಿದ್ದ ಕಾಲ. ಎಲ್ಲ ಸರಕಾರಿ ಕಾಗದ ಪತ್ರಗಳು, ಸುತ್ತೋಲೆಗಳು ಮಲಯಾಳಂನಲ್ಲಿರಬೇಕು ಎಂಬ ಕೇರಳ ಸರಕಾರದ ನೀತಿಯ ಆರಂಭದ ದಿನಗಳು. ಅಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡಮಯ. ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಎಲ್ಲ ಸೀಟುಗಳು ಕಾಸರಗೋಡು ಕನ್ನಡ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಗೆದ್ದ ಕಾಲ. ಕಾಸರಗೋಡನ್ನು ಮತ್ತೆ ಕರ್ನಾಟಕಕ್ಕೆ ಸೇರಿಸುವ ಚಳವಳಿಯ ಕಾವು ಕಡಿಮೆಯಾಗಿದ್ದರೂ ಸಮ್ಮೇಳನಗಳ  ಮೂಲಕ, ಸಂಘಟನೆಗಳ ಮೂಲಕ, ಸತ್ಯಾಗ್ರಹಗಳ ಮೂಲಕ ಕನ್ನಡ ಅಸ್ತಿತ್ವ ಉಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು.

ಕೇಂದ್ರ ಸರಕಾರವೇ ನೇಮಿಸಿದ ಮಹಾಜನ ಕಮಿಷನ್‌ ನೀಡಿದ ವರದಿಯನ್ನು ಜಾರಿ ಮಾಡದ ಕೇಂದ್ರ ಸರಕಾರ, ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಭಾಷೆಯ ಹೆಸರಿನಲ್ಲಿ ವಿಧಾನಸಭಾ ಸದಸ್ಯರನ್ನು ಆರಿಸಿದರೂ ಬಳಿಕ ನಡೆದ ಚುನಾವಣೆಗಳಲ್ಲಿ ಕನ್ನಡದ ಸದಸ್ಯರು ಸೋತಾಗ ಇಲ್ಲಿ ಕನ್ನಡದ ಶಕ್ತಿ ಒಂದಷ್ಟು ಕುಂದಿದಂತೆ ಅನಿಸಿತು. ಇದರ ಲಾಭ ಪಡೆದ ಕೇರಳ ಸರಕಾರ ಇಲ್ಲಿ ಕನ್ನಡವನ್ನು ಅಳಿಸಿ ಹಾಕುವ ಪ್ರಯತ್ನವನ್ನು ಮಾಡತೊಡಗಿತು. 1974ರ ಮೊದಲು ಇಲ್ಲಿ ಕನ್ನಡದ ಉಳಿವಿಗಾಗಿ ಕೆಲವು ಸಮ್ಮೇಳನಗಳು ನಡೆದರೂ ಅತ್ಯಂತ ಯಶಸ್ವಿಯಾಗಿದ್ದರೂ 1974ರ ಕಾಸರಗೋಡು ಯುವಜನ ವಿದ್ಯಾರ್ಥಿ ಸಮ್ಮೇಳನ ಇಲ್ಲಿನ ಕನ್ನಡಿಗರಲ್ಲಿ ಹೋರಾಟದ ಕೆಚ್ಚನ್ನು ತುಂಬಿತು.

ಕನ್ನಡ ವಿದ್ಯಾರ್ಥಿ ಸಂಘದ ನಾಯಕತ್ವದಲ್ಲಿ ಸರಕಾರಿ ಕಾಲೇಜು ಮತ್ತು ತಾಲೂಕಿನ ಎಲ್ಲ ಶಾಲೆಗಳಲ್ಲಿ ಕನ್ನಡ ದ ಸಮ್ಮೇಳನದ ಉತ್ಸಾಹ ಮುಗಿಲುಮುಟ್ಟಿದ ಸಮಯ. ಹಿರಿಯ ಕವಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಸಮಸ್ತ ಕನ್ನಡ ಯುವಜನರು ಒಂದಾಗಿದ್ದರು. ಆದರೆ ಸಮ್ಮೇಳನದ ದಿನ ಅಪರಾಹ್ನ ಇಲ್ಲಿನ ಕನ್ನಡಿಗರಿಗೆ ಬರಸಿಡಿಲೊಂದು ಬಡಿದಿತ್ತು. ಇಲ್ಲಿನ ಕನ್ನಡದ ಧೀಮಂತ ನಾಯಕ, ಕನ್ನಡದ ಹೆಸರಲ್ಲಿ ಮಂಜೇಶ್ವರ ವಿಧಾನಸಭೆಯನ್ನು ಮೂರು ಬಾರಿ ಪ್ರತಿನಿಧಿಸಿದ ಮಹಾಬಲ ಭಂಡಾರಿ ಅವರು ವಿಧಿವಶರಾಗಿದ್ದರು. ಸಂಜೆ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಬೇಕಿದ್ದ ಸಮ್ಮೇಳನದ ವೇದಿಕೆಯಲ್ಲಿ ಶ್ರೀ ಭಂಡಾರಿಯವರ ಪಾರ್ಥಿವ ಶರೀರಕ್ಕೆ ಶಾಂತಿ ಕೋರುವ ಕಾರ್ಯಕ್ರಮವಾಗಿ ಬದಲಾಯಿತು. ಅದೇ ವೇದಿಕೆಯಲ್ಲಿ ಸೇರಿದ ಸಾವಿರಾರು ಕನ್ನಡಿಗರು ನೆಚ್ಚಿನ ನಾಯಕನ ಪಾರ್ಥಿವ ಶರೀರಕ್ಕೆ ಚರಮಾಂಜಲಿ ಅರ್ಪಿಸಿದರು.

ಮಹಿಳಾ ಸಮ್ಮೇಳನ : 1977ರ ತುರ್ತು ಪರಿಸ್ಥಿತಿ ಬಳಿಕ ಇಲ್ಲಿ ನಡೆದ ಕಾಸರಗೋಡು ಮಹಿಳಾ ಸಮ್ಮೇಳನ ಇಲ್ಲಿನ ಕನ್ನಡ ಚಳವಳಿಯಲ್ಲಿ ಮೈಲುಗಲ್ಲು. ಡಾ| ಲಲಿತಾ ಎಸ್‌.ಎನ್‌. ಭಟ್‌ ಅವರ ನೇತೃತ್ವದಲ್ಲಿ ನಡೆದ ಈ ಸಮ್ಮೇಳನದಲ್ಲಿ ಸಾವಿರಾರು ಮಹಿಳೆಯರು ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಾಗಿ ಒಂದಾಗಿದ್ದರು. ಸತ್ಯಾಗ್ರಹ, ಪ್ರತಿಭಟನೆ, ಸಮ್ಮೇಳನಗಳ ಮೂಲಕ ಇಲ್ಲಿ ಕಳೆದ ಆರು ದಶಕಗಳಿಂದ ಕನ್ನಡದ ಉಳಿವಿಗಾಗಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವೊಮ್ಮೆ ಇಲ್ಲಿ ಕನ್ನಡದ ಸತ್ವ ಮುಗಿಯಿತು ಎಂದಾಗ ಇಲ್ಲಿನ ಕನ್ನಡಿಗರು ಫೀನಿಕ್ಸ್‌ ಪಕ್ಷಿಯಂತೆ ಎದ್ದು ಬರುತ್ತಾರೆ. ಕನ್ನಡಿಗರೆಲ್ಲರೂ ಒಂದಾಗಲು ಕೇರಳ ಸರಕಾರವೇ ಅವಕಾಶ ಮಾಡಿಕೊಡುತ್ತದೆ. ತನ್ನ ಕನ್ನಡ ಭಾಷಾ ವಿರೋಧಿ ನೀತಿ ಇಲ್ಲಿನ ಕನ್ನಡಿಗರ ಒಗ್ಗಟ್ಟಿಗೆ ಕಾರಣವಾಗುತ್ತಿದೆ ಎಂಬ ಪ್ರಜ್ಞೆ ಕೇರಳ ಸರಕಾರಕ್ಕೆ ಇಲ್ಲ.
ಇದಕ್ಕೆ ಈಚಿನ ಉದಾಹರಣೆ ಕಳೆದ ವರ್ಷ ನಡೆದ ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಮತ್ತು ಈಗ ನಡೆದ ಒಂದು ವಾರ ಕಾಲದ ಸರಣಿ ಸತ್ಯಾಗ್ರಹ.

Advertisement

ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನವನ್ನು ನೋಡಿದ ದಕ್ಷಿಣದ ಮಲಯಾಳಿಗಳೂ ಬೆಚ್ಚಿಬಿದ್ದರು. ಅವರಲ್ಲೆಲ್ಲ ಮಲಯಾಳದಲ್ಲಿ ವ್ಯವಹರಿಸುತ್ತಿದ್ದ ಇಲ್ಲಿನ ಕನ್ನಡಿಗರ ಶಕ್ತಿಯನ್ನು ಆ ತನಕ ಅವರು ನೋಡಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಒಳಗೆ ಯಾವುದೇ ನೌಕರ, ಅಧಿಕಾರಿ ಒಳ ಹೋಗದಂತೆ ಮಾಡಿದ ದಿಗ್ಬಂಧನ ಮಲಯಾಳಿಗಳಿಗಷ್ಟೇ ಅಲ್ಲ. ಕೇರಳ ಸರಕಾರಕ್ಕೂ ಎಚ್ಚರಿಕೆ ನೀಡಿತ್ತು.

ಸರಣಿ ಸತ್ಯಾಗ್ರಹ : ಈ ಒಂದು ವಾರ ಕಾಲ ಸರಣಿ ಸತ್ಯಾಗ್ರಹ ನಡೆಯಿತು. ತನ್ನ ಅತ್ಯಂತ ವೇಗದ ಬದುಕಿನ ನಡುವೆಯೂ ಇಲ್ಲಿನ ಕನ್ನಡಿಗ ಎಚ್ಚೆತ್ತುಕೊಂಡಿದ್ದಾನೆ. ತನ್ನ ಭಾಷೆ, ಸಂಸ್ಕೃತಿಗೆ ಅಪಚಾರವಾದರೆ, ಮಲಯಾಳ ಭಾಷೆಯನ್ನು ಕಡ್ಡಾಯವಾಗಿ ಹೇರಿದರೆ ಕನ್ನಡಿಗರೆಲ್ಲ ಒಗ್ಗಟ್ಟಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.
– ಬಿ. ರಾಮಮೂರ್ತಿ

ಆರು ದಶಕಗಳ ಕತೆ 
ನವೆ‌ಂಬರ್‌ 1, 1956 ಕಾಸರಗೋಡು ಕನ್ನಡಿಗರ ಪಾಲಿಗೆ ಕರಾಳ ದಿನ. ಅಂದು ಭಾಷಾವಾರು ರಾಜ್ಯ ಪುನರ್ವಿಂಗಡಣೆಯಾದಾಗ ಅಚ್ಚ ಕನ್ನಡ ಪ್ರದೇಶ ಕಾಸರಗೋಡು ಕೇರಳದ ಭಾಗವಾಗಿತ್ತು. ಅಂದಿನಿಂದ ಕಾಸರಗೋಡು ಕನ್ನಡಿಗರು ಒಂದಲ್ಲ ಒಂದು ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೆ ಕರ್ನಾಟಕದ ಜೊತೆ ಸೇರುವುದು ಅಂದಿನ ಏಕ ಮಂತ್ರವಾಗಿದ್ದರೆ ಇಂದು ಇಲ್ಲಿ ಕನ್ನಡದ ಅಸ್ತಿತ್ವ ಉಳಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆ ನೋಡಿದರೆ ಒಂದು ಭಾಷೆಯ ಅಸ್ತಿತ್ವಕ್ಕಾಗಿ ಕಳೆದ ಅರುವತ್ತ ಎರಡು ವರ್ಷಗಳಿಂದ ಕಾವು ಕಳೆದುಕೊಳ್ಳದೆ ಪ್ರತಿಭಟನೆ ನಡೆಸುತ್ತಿರುವುದು ಭಾರತದ ಮಟ್ಟಿಗೆ ದಾಖಲೆಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next