Advertisement
ಕನ್ನಡದ ಸ್ಪಷ್ಟ ಮಾತುಗಾರಿಕೆ, ಸೊಗಸಾದ ಉಚ್ಚಾರ, ಆ ಏರಿಳಿತಗಳು ಒಟ್ಟಿನಲ್ಲಿ ಕನ್ನಡತನವೆನ್ನುವ ಎಲ್ಲವನ್ನೂ ಕೇಳಿಸಿಕೊಳ್ಳಬೇಕೆಂದರೆ ಕನ್ನಡ ಚಿತ್ರರಂಗದ ದಂತಕತೆ, ವರನಟ ಡಾ ರಾಜಕುಮಾರ್ ಚಿತ್ರಗಳನ್ನು ನೋಡಬೇಕು. ಕುಂದಿಲ್ಲದ ಕನ್ನಡದ ಮಾತು ಡಾ| ರಾಜ್‌ಕುಮಾರ್ ಅವರದು. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ’ ಎಂದು ಕುವೆಂಪು ನುಡಿಗಳಿಗೆ ದನಿಯಾದರು ಕೂಡ ಡಾ ರಾಜಕುಮಾರ್. ಆ ಮೂಲಕ ಕನ್ನಡದ ಅಸ್ಮಿತೆಯಾಗಿ ಇಂದಿಗೂ ನಮ್ಮ ಜ್ಞಾಪಕಚಿತ್ರ ಶಾಲೆಯಲ್ಲಿ ಮಿನುಗುವ ನಕ್ಷತ್ರವಾಗಿದ್ದಾರೆ. ಇಂತಹ ಕನ್ನಡದ ಸಾರ್ವಭೌಮತೆಗೆ ನಟಸಾರ್ವಭೌಮನಾಗಿ ಮೆರುಗು ಹೆಚ್ಚಿಸಿದ ರಾಜಣ್ಣ ಅವರ ನೆನಪು ಒತ್ತರಿಸಿ ಬಂದಿದ್ದು ನೂತನ ಉನ್ನತ ಶಿಕ್ಷಣ ಸಚಿವರ ಇಂಗ್ಲಿಷ್ ಮಾತುಗಳು ಟ್ರೋಲ್ ಆದ ಕಾರಣ.
Related Articles
Advertisement
ಉನ್ನತ ಸ್ಥಾನದಲ್ಲಿ, ಸಾಮಾಜಿಕ ಬದುಕಿನಲ್ಲಿರುವ ವ್ಯಕ್ತಿಗಳ ಬಗ್ಗೆ ಜನಸಾಮಾನ್ಯರಿಗೆ ಯಾವತ್ತೂ ಒಂದು ರೀತಿಯ ಕುತೂಹಲ ಮತ್ತು ಅಷ್ಟೇ ಅಸಹನೆಯಿರುವುದನ್ನು ಕಾಣುತ್ತೇವೆ. ರಾಜಕೀಯ ವ್ಯಕ್ತಿಗಳಿರಬಹುದು, ಕಲಾವಿದರಿರಬಹುದು. ಪತ್ರಿಕೆಯೊಂದರ ಸಂಪಾದಕ ಬದಲಾದ ಎಂದು ತಿಳಿದ ಕೂಡಲೇ ಆ ಸಂಪಾದಕನ ಬಗ್ಗೆ ಕುಹಕ ಮಾತುಗಳನ್ನು ಆಡುವುದು, ಮತ್ತೆ ಆ ಸಂಪಾದಕ ಇನ್ನೊಂದು ಪತ್ರಿಕೆಗೆ ಟವೆಲ್ ಹಾಕಿದ್ದಾನೆ ಎನ್ನುವಂತಹ ಕೀಳುಮಟ್ಟದ ಟೀಕೆಗಳನ್ನು ಆಡುತ್ತಾ, ಅವರಿಗೆ ಸಿಗದೇ ಹೋದ ಅವಕಾಶಗಳನ್ನು ಅಥವಾ ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಂಡ ಹೀಗೆ ಎಲ್ಲರೂ ಒಂಥರಾ ತಜ್ಞರಾಗಿ ತಂತಮ್ಮ ಊಹೆಗಳ ಆಧಾರದಲ್ಲಿ ಮಾತಾಡುವುದು ಅಭ್ಯಾಸವಾಗಿದೆ. ಹಾಗೆ ಬರೆದ ವ್ಯಕ್ತಿಗಳೂ ಅದೇ ಸಂಪಾದಕನಲ್ಲಿ ಉದ್ಯೋಗಾವಕಾಶ ಕೇಳಿಕೊಂಡು ಹೋಗಿರುವ ಉದಾಹರಣೆಗಳನ್ನು ನೀಡಬಹುದು. ಇದು ಮನಸ್ಥಿತಿಗಳ ವಿಷಯವಷ್ಟೇ.
ಎಲ್ಲ ನಿರುದ್ಯೋಗಿಗಳ ಹಾಗೆಯೇ ನಾನೂ ಮೂನ್ನೂರ ಅರುವತ್ತೈದು ದಿನಗಳ ಕಾಲ ನಿರುದ್ಯೋಗಿ ಆಗಿದ್ದೆ. ಇಂಗ್ಲಿಷ್ ತಿಳಿಯದವರನ್ನು ಗೇಲಿ ಮಾಡಿದಂತೆ, ಉದ್ಯೋಗವಿಲ್ಲದ ನನ್ನನ್ನೂ ಗೇಲಿ ಮಾಡಿದವರಿದ್ದಾರೆ. ನನ್ನ ಕೌಶಲ್ಯವನ್ನೂ ಅವಹೇಳನ ಮಾಡಿದವರಿದ್ದಾರೆ. ಶಿವ ಫೊಟೋ ತೆಗೆಯಲು ಕಾಡಿಗೆ ಹೋಗಿದ್ದರಿಂದ ಕಾಡಿನಿಂದ ನಾಡಿಗೆ ಹುಲಿಗಳು ಬರುತ್ತಿವೆ ಎಂದು ಹೇಳಿದ ಅವಿವೇಕಿಗಳೂ ಇದ್ದಾರೆ. ಈ ಅವಹೇಳನದಿಂದ ನಾನು ಭಯಪಡಲಿಲ್ಲ. ನನ್ನೊಳಗಿನ ಪತ್ರಕರ್ತ ಇನ್ನಷ್ಟು ಗಟ್ಟಿಯಾಗಿದ್ದ. ನನ್ನ ಫೋಟೋಗ್ರಫಿ ಕೌಶಲ್ಯ ಕೂಡಾ ಹೆಚ್ಚಿಸಿಕೊಂಡೆ ಅಷ್ಟೆ. ಹಾಗೆಯೇ ಕನ್ನಡ ಮಾತನಾಡುವುದರಿಂದ ಅವಹೇಳನಕ್ಕೆ ಒಳಗಾಗುತ್ತೇವೆಂದು ನಾವು ಹೆದರಬೇಕಾಗಿಲ್ಲ. ರಾಜಕೀಯ ಪಕ್ಷಗಳು ಸಂಸ್ಕಾರಹೀನರಾಗಿ ಪರಸ್ಪರ ಕೊಳಕು ಮಾತುಗಳನ್ನು ಆಡುವುದು ಸರ್ವೇಸಾಮಾನ್ಯವಾದ ವಿಚಾರವೇ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ರೋಗವಾಗಿ ಬಿಟ್ಟಿದೆ. ಯಾರನ್ನೋ ಗೇಲಿ ಮಾಡಿ ಬಿಟ್ಟರೆ ತಾವೇನೋ ದೊಡ್ಡ ಮನುಷ್ಯರಾಗಿ ಬಿಡುತ್ತೇವೆ ಎನ್ನುವ ಭ್ರಮೆಯಿಂದಲೇ ಬದುಕುತ್ತಾರೆ.
ಆದರೆ ಇಲ್ಲೊಂದು ತಮಾಷೆೆಯಿದೆ. ಇಲ್ಲೂ ರಾಜಕೀಯ ಮತ್ತು ಜಾತಿ ಧರ್ಮಗಳ ಬಣ್ಣ ಹತ್ತಿಸಿಕೊಂಡು ಬಿಡುವುದು. ಹೀಗೆ ಗೇಲಿಗೆ ಗುರಿಯಾದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಮತ್ತೆ ಅದೇ ಹಳೆಯ ರಾಗವನ್ನು ಹಾಡುವುದೂ ತಮಾಷೆಯಾಗಿ ಕಾಣುತ್ತದೆ. ಭಯಂಕರರು, ಅಸಹನಾ ಭಯಂಕರರು. ಇವರಿಗೆ ಯಾರೂ ಆಗುತ್ತಾರೆ, ಯಾವ ವಸ್ತುವೂ ಆಗುತ್ತದೆ, ಯಾವ ವಿಷಯವೂ ಆಗುತ್ತದೆ. ನಿರಂತರವಾಗಿ ಇವರ ಮನಸ್ಸಿನ ಅಸಹನೆಯನ್ನು ಬಹಿರಂಗ ಮಾಡಿಕೊಳ್ಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಚತುರರು. ಮೊನ್ನೆ ಸಚಿವೆ ಜಯಮಾಲಾ ಅವರು ಹೇಳಿದಂತೆ ‘ಹೊಟ್ಟೆಕಿಚ್ಚಿಗೆ ಔಷಧಿಯಿಲ್ಲ’ ಎನ್ನುವಂತೆ ಇಂಥವರ ಕುಹಕ ಇಂತಹ ಸಂದರ್ಭಗಳಿಂದ ಬಯಲಾಗುತ್ತದೆ ಅಷ್ಟೇ ಹೊರತು ಇಂಥ ವಾಗ್ಧಾಳಿಗಳಿಂದ ಯಾವ ಪುರುಷಾರ್ಥ ಸಾಧನೆಯೂ ಆಗದು.
ಮತ್ತೆ ಕನ್ನಡ ಮಾತಾಡುವ ಯೋಚನೆಗೆ ಬರೋಣ. ದೂರದ ಪಂಜಾಬಿನಿಂದ ಬಂದು ಇಲ್ಲಿ ಅಧಿಕಾರಿಯಾಗಿದ್ದುಕೊಂಡು ಇಲ್ಲೇ ಇರುವ IAS ಅಧಿಕಾರಿ ಚಿರಂಜೀವಿ ಸಿಂಗ್ ಅವರ ಸರಳ, ಸುಲಲಿತ ಕನ್ನಡ ನೆನಪಿಗೆ ಬರುತ್ತದೆ. ಸಂಸತ್ತಿನಲ್ಲಿ ಜೆ.ಎಚ್.ಪಟೇಲ, ಮುದ್ದಹನುಮೇಗೌಡ, ಪುಟ್ಟರಾಜು ಮೊದಲಾದವರು ಕನ್ನಡದಲ್ಲಿ ಮಾತಾಡಿರುವ ಸಂದರ್ಭವೂ ಇದೆ. ಇಲ್ಲಿನವರೇ ಆದ ಅನೇಕ ಅಧಿಕಾರಿಗಳು ಇಂಗ್ಲಿಷಿನಲ್ಲಿ ಮಾತಾಡುವುದನ್ನು, ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿ ಕನ್ನಡ ಮಾತಾಡುವವರನ್ನು ನೋಡುತ್ತೇವೆ. ಇಂಗ್ಲಿಷ್ ಮಾತಾಡಿದ ತಕ್ಷಣ ಶ್ರೇಷ್ಠವೆಂದು ನಿರ್ಧರಿಸುವುದು ಅಜ್ಞಾನವೆಂದಷ್ಟೇ ಹೇಳಬಹುದು. ಮಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ನೇಪಾಳಿ ಯುವಕ ಸುಲಲಿತವಾಗಿ ತುಳು ಮಾತನಾಡುತ್ತಿದ್ದುದು ನೋಡಿದ್ದೇನೆ. ಇಂಗ್ಲಿಷು ಬಾರದ ಹರೇಕಳ ಹಾಜಬ್ಬ ಕಿತ್ತಳೆ ಮಾರಿ ಶಾಲೆ ಕಟ್ಟಿಸಿರುವುದು ಅವರೊಳಗಿನ ಜ್ಞಾನಿಯನ್ನು ಪರಿಚಯಿಸುತ್ತದೆ. ಜ್ಞಾನಕ್ಕೆ ವಿದ್ಯೆಯ, ಅಕ್ಷರದ ಹಂಗಿಲ್ಲ. ಭಾರಿ ವಿದ್ಯಾವಂತರಲ್ಲದ ಕೃಷಿಯಲ್ಲಿ ಅದ್ಭುತ ಜ್ಞಾನವಿರುವ ಸಾವಿರಾರು ಜನರನ್ನು ಬಲ್ಲೆ. ಅತ್ತಿತ್ತ ಸೂಕ್ಷ್ಮವಾಗಿ ಮಣ್ಣನ್ನು ನೋಡಿ ಇಂಥದೇ ಸ್ಥಳದಲ್ಲಿ ನೀರಿದೆ ಎಂದು ಕರಾರುವಕ್ಕಾಗಿ ಹೇಳುವವರಿದ್ದಾರೆ. ಅವರೆಲ್ಲರನ್ನು ಇಂಗ್ಲಿಷು ಬಾರದೆಂದು ಗೇಲಿ ಮಾಡಿದರೆ ನಾವು ನಮ್ಮ ಸಣ್ಣತನಗಳನ್ನು ಬಹಿರಂಗವಾಗಿಸುತ್ತೇವಷ್ಟೆ. ನಮಗೆ ಹೆಚ್ಚು ಭಾಷೆ ತಿಳಿದಷ್ಟೂ ಅನುಕೂಲವೇ. ಆದರೆ, ನಾವು ಏಕಭಾಷಿಯಾಗಿದ್ದರೂ ತಪ್ಪೇನಲ್ಲ. ಮಂತ್ರಿಗಳು ಏಕಭಾಷಿಗಳಾಗಿದ್ದರೆ ಅನುವಾದಕರನ್ನು ನೇಮಿಸಿಕೊಳ್ಳಬಹುದು. ಅದನ್ನು ಬಿಟ್ಟು ಇಂಗ್ಲಿಷ್ ತಿಳಿಯದೆಂದು ಪರಿತಪಿಸಬಾರದು. ಕುಚೋದ್ಯ ನಡೆಸಿ ಟ್ರೋಲ್ ಮಾಡುವವರಿಗೆ ಆಹಾರವಾಗಬಾರದು!
— ಶಿವಸುಬ್ರಹ್ಮಣ್ಯ ಕೆ.