Advertisement

ದೀಪಾವಳಿ ವಿಶೇಷ ಲೇಖನ: ಪುರಾಣಗಳ ಸತ್ವ, ಬೆಳಕಿನ ಮಹತ್ವ ತಿಳಿಸುವ ಸಂಭ್ರಮದ ದೀಪಾವಳಿ 

11:34 AM Oct 24, 2022 | Team Udayavani |

ಹಬ್ಬಗಳ ಪೈಕಿ ದೇಶದೆಲ್ಲೆಡೆ ಹೆಚ್ಚು ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬದೀಪಾವಳಿ. ನಾನಾ ಬಗೆಯ ದೀಪಗಳು, ವೈವಿಧ್ಯಮಯ ಸಿಹಿ ತಿನಿಸುಗಳು ಹಾಗೂ ಭಕ್ತಿಭಾವದಿಂದ ಕೂಡಿದ ಅನೇಕ ಸಂಪ್ರದಾಯಗಳೇ ದೀಪಾವಳಿಯ ವಿಶೇಷತೆಗಳು.

Advertisement

ರಾಮಾಯಣದ ಪ್ರಕಾರ, ರಾಮನು ಲಂಕೆಯಲ್ಲಿ ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಜನರು ದೀಪಗಳನ್ನು ಬೆಳಗಿ ರಾಮನನ್ನು ಸ್ವಾಗತಿಸಿದರು. ಅಂದಿನಿಂದ ಪ್ರತಿವರ್ಷವೂ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸುವ ಪದ್ಧತಿ ಜಾರಿಗೆ ಬಂದಿತು ಎನ್ನಲಾಗಿದೆ.

ಇದಲ್ಲದೇ ಇನ್ನೂ ಹಲವು ಪೌರಾಣಿಕ ಕಥೆಗಳು ದೀಪಾವಳಿ ಜತೆ ತಳಕು ಹಾಕಿಕೊಂಡಿವೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಸ್ಥಾನವಿದೆ. ಅಂಧಕಾರವನ್ನು ಹೋಗಲಾಡಿಸಿ ಬೆಳಕು ನೀಡುವ ದೀಪವನ್ನು ಸಕಾರಾತ್ಮಕ ವಿಚಾರಗಳ ಪ್ರತೀಕವಾಗಿ ಕಾಣುತ್ತೇವೆ. ಕತ್ತಲೆಯನ್ನು ಅಜ್ಞಾನಕ್ಕೂ ಬೆಳಕನ್ನು ಜ್ಞಾನಕ್ಕೂ ಹೋಲಿಕೆ ಮಾಡಿ, ದೀಪವನ್ನು ಜ್ಞಾನದೆಡೆಗೆ ಕರೆದೊಯ್ಯುವ ಗುರುವಿನಂತೆ ಭಾವಿಸಿ ಗೌರವಿಸುತ್ತೇವೆ. ಇಂತಹ ಮಹತ್ವ ಹೊಂದಿರುವ ದೀಪಗಳನ್ನು ದೀಪಾವಳಿಯ ರಾತ್ರಿಗಳಲ್ಲಿ ನೋಡುವುದೇ ಕಣ್ಣುಗಳಿಗೆ ಹಬ್ಬ.

ಪೌರಾಣಿಕ ಕಥೆಗಳ ಹಿನ್ನೆಲೆ: ದೀಪಾವಳಿ ಕುರಿತ ಪ್ರಮುಖ ಕಥೆ ಎಂದರೆ ವಿಷ್ಣುವು ಬಲಿ ಚಕ್ರವರ್ತಿಯನ್ನು ವಾಮನ ಅವತಾರದಲ್ಲಿ ಬಲಿ ಪಡೆದಿದ್ದು. ಮಹಾದಾನಿಯಾದ ಬಲಿ ಚಕ್ರವರ್ತಿಯು ಇಡೀ ಭೂಮಂಡಲವನ್ನು ಆಳುತ್ತಿದ್ದ. ಅವನ ದರ್ಪವನ್ನು ಅಡಗಿಸಲು ವಿಷ್ಣುವು ಕುಳ್ಳ ದೇಹದ ವಾಮನ ಅವತಾರದಲ್ಲಿ ಬರುತ್ತಾನೆ. ವಾಮನನು ಮೂರು ಹೆಜ್ಜೆ ಜಾಗವನ್ನು ದಾನ ಕೇಳಿದಾಗ, ಬಲಿಚಕ್ರವರ್ತಿ ದಾನ ನೀಡಲು ಒಪ್ಪಿದನು. ಆಗ ವಾಮನನು ತನ್ನ ದೇಹವನ್ನು ದೊಡ್ಡದಾಗಿಸಿಕೊಂಡು, ಮೊದಲ ಹೆಜ್ಜೆಯನ್ನು ಭೂಮಿಯ ಮೇಲೆ ಹಾಗೂ ಎರಡನೇ ಹೆಜ್ಜೆಯನ್ನು ಆಕಾಶದ ಮೇಲೆ ಇಟ್ಟನು. ಮೂರನೇ ಹೆಜ್ಜೆ ಎಲ್ಲಿಡುವುದೆಂದು ಕೇಳಿದಾಗ ವಾಮನನು ತನ್ನ ತಲೆಯ ಮೇಲೆಯೇ ಇಡುವಂತೆ ಹೇಳಿದನು. ಹೀಗೆ ವಿಷ್ಣುವು ತಲೆಯ ಮೇಲೆ ಕಾಲಿಟ್ಟು ಬಲಿ ಚಕ್ರವರ್ತಿಯನ್ನು ಸಾಯಿಸಿದನು. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಯ ಸ್ಮರಣಾರ್ಥ ಪ್ರತಿವರ್ಷದ ಕಾರ್ತಿಕ ಮಾಸದ ಮೊದಲ ದಿನದಂದು ಬಲಿಪಾಡ್ಯಮಿ ಆಚರಿಸಲಾಗುತ್ತಿದೆ. ನರಕ ಚತುರ್ದಶಿ ದಿನಕ್ಕೆ ಸಂಬಂಧಿಸಿ ನರಕಾಸುರನನ್ನು ವಧಿಸಿದ ಕಥೆಯಿದೆ. ಭಗವಂತ ವಿಷ್ಣು ವರಾಹ ಅವತಾರದಲ್ಲಿರುವಾಗ ಭೂದೇವಿಯ ಮೇಲೆ ಉಂಟಾದ ಪ್ರೇಮದಿಂದ ನರಕಾಸುರ ಜನಿಸಿದನು. ಆತನಲ್ಲಿ ರಾಕ್ಷಸ ಗುಣ ಇರುವುದನ್ನು ಕಂಡ ವಿಷ್ಣುವು ಆ ಮಗುವನ್ನು ಕೊಲ್ಲಲು ಮುಂದಾದನು. ಆದರೆ ಭೂದೇವಿ ತನ್ನ ಮಗುವನ್ನು ಕೊಲ್ಲದಂತೆ ವಿಷ್ಣುವನ್ನು ತಡೆದಳು ಹಾಗೂ ತನ್ನ ಮಗನಿಗೆ ಸಾವು ಬರಬಾರದೆಂದು ವರ ಕೇಳಿದಳು. ಆಗ ವಿಷ್ಣು ಕೇವಲ ಭೂದೇವಿಯಿಂದ ಮಾತ್ರ ನರಕಾಸುರ ಸಾಯಬಹುದು ಎಂದು ವರ ಕೊಟ್ಟನು. ತನಗೆ ಸಾವು ಬರಲು ಸಾಧ್ಯವೇ ಇಲ್ಲ ಎಂದುಕೊಂಡ ನರಕಾಸುರನು ದರ್ಪದಿಂದ ಮೆರೆದನು. ಹಲವಾರು ದೇವತೆಗಳನ್ನು ಲೂಟಿ ಮಾಡಿದನು. ಭೂಮಿಯ ಮೇಲಿನ ರಾಜರುಗಳನ್ನೆಲ್ಲ ತನ್ನ ಒತ್ತೆಯಾಳಾಗಿ ಮಾಡಿಕೊಂಡು, 16,000 ರಾಣಿಯರನ್ನು ತನ್ನ ಬಂಧನದಲ್ಲಿ ಇರಿಸಿಕೊಂಡನು. ಹೀಗೆ ಮೆರೆಯುತ್ತಿದ್ದ ನರಕಾಸುರನಿಗೆ ಅಂತ್ಯ ಹಾಡಲು ವಿಷ್ಣುವು ಕೃಷ್ಣನ ಅವತಾರ ಹಾಗೂ ಭೂದೇವಿಯು ಸತ್ಯಭಾಮೆಯ ಅವತಾರ ತಾಳಿದರು. ನರಕಾಸುರನ ಮೇಲೆ ಕೃಷ್ಣನು ಯುದ್ಧ ಸಾರಿದಾಗ ಕೃಷ್ಣನೇ ಮೂರ್ಛೆ ಹೋದನು. ಆಗ ಕೋಪದಲ್ಲಿ ಸತ್ಯಭಾಮೆಯು ನರಕಾಸುರನ ಮೇಲೆ ಬಾಣಗಳ ಸುರಿಮಳೆಗೈದು ಅವನನ್ನು ಸಾಯಿಸಿದಳು. ಅನಂತರ ಕೃಷ್ಣನು ಅವನ ಬಂಧನದಲ್ಲಿದ್ದ 16,000 ರಾಣಿಯರನ್ನು ಸೆರೆಯಿಂದ ಬಿಡಿಸಿದನು. ಹೀಗೆ ನರಕಾಸುರನನ್ನು ಕೊಂದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತಿದೆ.

ಯಾವ್ಯಾವ ದಿನ ಏನೇನು?: ದೀಪಾವಳಿಯು ಹಲವು ದಿನಗಳು ಆಚರಿಸ್ಪಡುವ ಸುದೀರ್ಘ‌ ಹಬ್ಬ. ಭಾರತದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಯಿದ್ದು, ಕೆಲವು ಕಡೆ ಐದು ದಿನಗಳು ಆಚರಿಸಿದರೆ, ಇನ್ನು ಕೆಲವು ಕಡೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲನೇ ದಿನವಾದ ತ್ರಯೋದಶಿಯಂದು ಸ್ನಾನಗೃಹದ ಹಂಡೆಯನ್ನು ತೊಳೆದು ಅದಕ್ಕೆ ನೀರು ತುಂಬಿ, ಹೂವುಗಳಿಂದ ಸಿಂಗರಿಸಿ ಪೂಜಿಸಲಾಗುತ್ತದೆ. ಇದನ್ನು ನೀರು ತುಂಬುವ ಹಬ್ಬ ಎಂದೇ ಕರೆಯಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಈಗಲೂ ಇದು ಆಚರಣೆಯಲ್ಲಿದೆ. ಆಧುನಿಕ ಮನೆಗಳಲ್ಲಿ ಹಂಡೆಗಳ ಬದಲು ಟ್ಯಾಂಕ್‌ನಲ್ಲಿ ಸಂಗ್ರಹವಾದ ನೀರು ನಲ್ಲಿಗಳಲ್ಲಿ ಬರುವುದರಿಂದ ಈ ಸಂಪ್ರದಾಯ ಕಡಿಮೆ ಯಾಗುತ್ತಿದೆ. ಎರಡನೇ ದಿನವಾದ ಚತುರ್ದಶಿಯಂದು ಎಲ್ಲೆಡೆ ನರಕ ಚತುರ್ದಶಿ ಆಚರಿಸಲಾಗುತ್ತದೆ. ಈ ದಿನದಂದು ದೇಹಕ್ಕೆ ಎಣ್ಣೆ ಹಚ್ಚಿಕೊಂಡು, ಅನಂತರ ಸೀಗೇಕಾಯಿ ಪುಡಿ ಬಳಸಿ ಸ್ನಾನ ಮಾಡುವ ಸಂಪ್ರದಾಯವಿದೆ. ಮೂರನೇ ದಿನವಾದ ಅಮಾವಾಸ್ಯೆಯಂದು ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತದೆ. ಈ ದಿನದ ಸಂಜೆ ಭಾಕ್ತಿಭಾವದಿಂದ ಧನಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಲಕ್ಷ್ಮೀಯ ಆಶೀರ್ವಾದದಿಂದ ಎಲ್ಲೆಡೆ ಸಮೃದ್ಧಿ ಕೂಡಿರಲಿ ಎಂದು ಪ್ರಾರ್ಥಿಸಲಾಗುತ್ತದೆ.

Advertisement

ನಾಲ್ಕನೇ ದಿನ ಬಲಿಪಾಡ್ಯಮಿ. ಇದು ಆಶ್ವಯುಜ ಮಾಸ ಅಂತ್ಯವಾಗಿ ಕಾರ್ತಿಕ ಮಾಸ ಆರಂಭವಾಗುವ ದಿನ. ಗೋವುಗಳಿಗೆ ಸ್ನಾನ ಮಾಡಿಸಿ, ಅವುಗಳನ್ನು ಪೂಜಿಸಿ, ರುಚಿಕರ ತಿನಿಸುಗಳನ್ನು ಅವುಗಳಿಗೆ ನೀಡುವ ಸಂಪ್ರದಾಯವಿದೆ. ಬಲಿ ಚಕ್ರವರ್ತಿಯ ಮೂರ್ತಿಯನ್ನು ತಯಾರಿಸಿ ಪೂಜಿಸುವ ಪದ್ಧತಿಯೂ ಇದೆ. ಐದನೇ ದಿನವಾದ ಬಿದಿಗೆಯಂದು ಯಮದ್ವಿತೀಯ ಎಂದು ಕೆಲವು ಕಡೆ ಆಚರಿಸಲಾಗುತ್ತದೆ. ಈ ದಿನದಂದು ಅಣ್ಣತಮ್ಮಂದಿರು ಅಕ್ಕತಂಗಿಯರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸುವ ಸಂಪ್ರ ದಾಯವಿದೆ. ಪುರಾಣದ ಪ್ರಕಾರ ಯಮನು ಇದೇ ದಿನ ದಂದು ತನ್ನ ತಂಗಿ ಯಮಿ ಅಥವಾ ಯಮುನಾಳ ಮನೆಗೆ ತೆರಳಿ ಊಟ ಮಾಡಿ ಶುಭ ಹಾರೈಸಿದ್ದನು.

 ದಿವ್ಯಶ್ರೀ ಬೆಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next