Advertisement

ತೆಂಗು ಕೃಷಿ ಲಾಭಕರವಾಗುವತ್ತ ಇರಲಿ ಪ್ರಯತ್ನ

02:10 AM Sep 01, 2018 | Karthik A |

ಪಡುಬಿದ್ರಿ: ಇಂದು ವಿಶ್ವ ತೆಂಗು ದಿನ ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ, ಸಾವಯವ ಪದ್ಧತಿಯನ್ನು ಅನುಸರಿಸಿಕೊಂಡು ಉತ್ತಮ ಬೆಳೆ ತೆಗೆಯುವ ಅವಕಾಶಗಳಿವೆ. ಇದನ್ನು ಅರಿತು ಕೃಷಿಕರು ಕಾರ್ಯವೆಸಗಬೇಕಾಗಿದ್ದು, ಸರಕಾರ ಕೂಡ ಅಗತ್ಯ ಬೆಂಬಲ ಬೆಲೆ 5 ರೂ. ನೀಡಿ, ರೈತರ ಹಿತ ಕಾಪಾಡಬೇಕೆಂಬ ಬೇಡಿಕೆ ಇದೆ.  ದ.ಕ., ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ತೆಂಗುಬೆಳೆ ಈಗ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ವರಮಾನದ ಮೂಲವಾಗಿದೆ. ಆದರೆ ಸೂಕ್ತ ಮಾಹಿತಿ ಕೊರತೆಯಿಂದ ತೆಂಗಿನ ಕೃಷಿಯನ್ನು ಲಾಭಕರವನ್ನಾಗಿ ಮಾಡುವಲ್ಲಿ ಕೃಷಿಕ ಇನ್ನೂ ಎಡವುತ್ತಲೇ ಇದ್ದಾನೆ.

Advertisement

ತೆಂಗಿನ ಬೆಳೆಗೆ ಅತಂತ್ರ ಸ್ಥಿತಿ
ಜಿಲ್ಲೆಯಲ್ಲಿ ಮೂರ್ತೆದಾರಿಕೆಯು ಬಹಳಷ್ಟು ಬಲಯುತವಾಗಿದ್ದಾಗ ಕಾಯಿಲೆ ಬಂದಾಗಲೂ ತೆಂಗಿನ ಕೊಂಬನ್ನು ಸೀಳಿ ಬಿಡುತ್ತಿದ್ದರು. ಆಗ ಇಳುವರಿಯೂ ಹೆಚ್ಚಾಗುತ್ತಿತ್ತು. ಹಾಗಾಗಿ ತೆಂಗಿನ ಮರದ ರಕ್ಷಣೆಗೂ ಮೂರ್ತೆದಾರಿಕೆ ಒಂದು ಉಪಕ್ರಮವಾಗಿತ್ತು. ಈಗ ಮೂರ್ತೆದಾರಿಕೆಯೂ ಜಿಲ್ಲೆಯಲ್ಲಿ ಕ್ಷೀಣಿಸಿದೆ. ಹಾಗಾಗಿ ಈಗ ತೆಂಗಿನ ಬೆಳೆ ಅತಂತ್ರ ಸ್ಥಿತಿಯಲ್ಲಿದೆ ಎನ್ನುತ್ತಾರೆ. ಮೂರ್ತೆದಾರಿಕೆ ಕುಟುಂಬದಿಂದ ಬಂದಿರುವ ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳುತ್ತಾರೆ.

ಅವೈಜ್ಞಾನಿಕ ಪದ್ಧತಿ
ತೆಂಗು ಕೃಷಿಕರಾದ ಬಂಟಕಲ್ಲು ರಾಮೃಕಷ್ಣ ಶರ್ಮರು ಹೇಳುವಂತೆ ತೆಂಗಿನ ಗಿಡದಿಂದ ಗಿಡಕ್ಕೆ 27 ಅಡಿ ದೂರವಿರಬೇಕು. ಈ ಗಿಡಗಳ ನಡುವೆ ಸಣ್ಣ ಗಿಡಗಳನ್ನು ಮತ್ತೆ ನೆಡುತ್ತಾರೆ. ಇದು ತಪ್ಪು. ಇದರಿಂದ ಇಳುವರಿ ಶೇ.10ಕ್ಕೆ ಬರುತ್ತದೆ. ತೆಂಗಿನ ಗಿಡ ನಿಧಾನವಾಗಿ ಬೆಳೆಯುತ್ತದೆ. ಕ್ರಮಬದ್ಧವಾಗಿ ತೆಂಗಿನ ಕೃಷಿ ಮಾಡಿದಲ್ಲಿ ಸುಮಾರು 10ವರ್ಷಗಳ ಕಾಲ ನಾವು ಫಲವನ್ನು ಕೈಯಿಂದಲೇ ಕೊಯ್ಯಬಹುದಾಗಿದೆ. ಅವೈಜ್ಞಾನಿಕ ಬೇಸಾಯ ಕ್ರಮದಿಂದ ತೆಂಗಿನ ಇಳುವರಿ ನಮ್ಮ ಜಿಲ್ಲೆಯಲ್ಲಿ ಸಹಜವಾಗಿಯೇ ಕಡಿಮೆಯಾಗಿದೆ.

ಬೀಜಕ್ಕೆ ತಾಯಿಮರದ ಆಯ್ಕೆ ಸರಿಯಾಗಿರಲಿ
ಜಿಲ್ಲೆಯ ಮಣ್ಣಿನಲ್ಲಿ ಸಾವಯವ ಅಂಶಗಳು ಕಡಿಮೆಯಿದ್ದು ಮಣ್ಣಿನ ಫ‌ಲವತ್ತತೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ತಾಯಿ ಮರದಿಂದ ಬೀಜದ ಆಯ್ಕೆ ಮಾಡಿಕೊಳ್ಳುವುದೂ ಅತ್ಯಂತ ಪ್ರಶಸ್ತವಾಗಿರಬೇಕು. ಇದರಿಂದಾಗಿ ಶೆ.50ರಷ್ಟು ಇಳುವರಿ ಹೆಚ್ಚಾಗುತ್ತದೆ ಎನ್ನುತ್ತಾರೆ ಶರ್ಮಾ ಅವರು. ಅವರ ಅಭಿಪ್ರಾಯದಂತೆ ತೆಂಗಿನ ಮರದ ಕೊಳೆ ರೋಗದಿಂದ ಅಷ್ಟೇನೂ ಸಮಸ್ಯೆಯಿಲ್ಲ. ಸುಳಿ ಕೊಳೆ ರೋಗದಿಂದ ಮಳೆಗಾಲದಲ್ಲಿ ಶೇ. 4 – 5ರಷ್ಟು ಮರಗಳು ಸಾಯುತ್ತವೆ. ಕಪ್ಪು ಹುಳ ಬಾಧೆ, ಬಳಿ ನೊಣ, ಕೆಂಪು ಮೂತಿ ಹುಳ ಅಲ್ಪ ಮಟ್ಟಿಗೆ ತೆಂಗಿನ ಕೃಷಿಯನ್ನು ಬಾಧಿಸುತ್ತವೆ. ಫಲವತ್ತತೆಯನ್ನು ಹೆಚ್ಚಿಸಿ ವೈಜ್ಞಾನಿಕವಾಗಿ ತೆಂಗಿನ ಬೆಳೆ ಬೆಳೆದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ. ಮಣ್ಣಿನ ಫಲವತ್ತತೆಗೆ ಎರೆಹುಳುಗಳೂ ಸಾಮಾನ್ಯವಾಗಿಯೇ ಕಾರಣವಾಗುತ್ತವೆ. ತೆಂಗಿನ ಸೋಗೆ, ದಂಡುಗಳನ್ನೂ ತೆಂಗಿನ ಬುಡಕ್ಕೆ ಹಾಕಿದಾಗಲೂ ಫಲವತ್ತತೆ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಕಳೆಗಳೂ ಹೆಚ್ಚು ಹೆಚ್ಚು ಬೆಳೆದಾಗ ಅವುಗಳೂ ಮಣ್ಣಿನ ಫಲವತ್ತತೆಗೆ ಪರೋಕ್ಷ ಕಾರಣವೆನಿಸುತ್ತದೆ. ಕಳೆಯ ಬೇರುಗಳು, ಎಲೆಗಳು ಕೊಳೆತು ಗೊಬ್ಬರವಾದಾಗ ತೆಂಗಿನ ಇಳುವರಿಯೂ ಅಧಿಕವಾಗಬಲ್ಲದು ಎನ್ನುತ್ತಾರೆ.

— ಆರಾಮ

Advertisement
Advertisement

Udayavani is now on Telegram. Click here to join our channel and stay updated with the latest news.

Next