ಬೆಂಗಳೂರು: ತಮ್ಮ ಮತ್ತು ಕೆ.ಎಸ್.ಈಶ್ವರಪ್ಪ ಮಧ್ಯೆ ಇರುವ ವೈಮನಸ್ಯ ಹೋಗಲಾಡಿಸಲು ತಾವೇ ಮುಂದಾಳತ್ವ ವಹಿಸಿ ಅವರೊಂದಿಗೆ ಮಾತನಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 18ರಿಂದ 36 ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಎಲ್ಲಾ ಮುಖಂಡರು ನನ್ನ ಜತೆಗಿರುತ್ತಾರೆ. ಈಶ್ವರಪ್ಪ ಅವರೂ ಬರುತ್ತಾರೆಂಬ ವಿಶ್ವಾಸವಿದೆ ಎಂದರು.
ಈಶ್ವರಪ್ಪ ಅವರೊಂದಿಗೆ ಇನ್ನೆರಡು ದಿನಗಳಲ್ಲಿ ಮಾತನಾಡಿ ರಾಜ್ಯ ಪ್ರವಾಸಕ್ಕೆ ನನ್ನೊಂದಿಗೆ ಬರುವಂತೆ ಆಹ್ವಾನಿಸುತ್ತೇನೆ. ಕೆಲವು ಜಿಲ್ಲೆಗಳಿಗಾದರೂ ಅವರು ಬರಬೇಕು ಎಂಬುದು ತಮ್ಮ ಒತ್ತಾಸೆ. ಬಂದೇ ಬರುತ್ತಾರೆ ಎಂಬ ವಿಶ್ವಾಸವೂ ಇದೆ. ನಮ್ಮಿಬ್ಬರ ನಡುವಿನಗೊಂದಲ ಬಗೆಹರಿಸಿಕೊಳ್ಳಲು ನಾನೇ ಮುಂದಾಳತ್ವ ವಹಿಸುತ್ತೇನೆ ಎಂದರು.
ಜನ ಸಂಪರ್ಕ ಅಭಿಯಾನ: ರಾಜ್ಯ ಪ್ರವಾಸಕ್ಕೆ ಜನ ಸಂಪರ್ಕ ಅಭಿಯಾನ ಎಂಬ ಹೆಸರಿಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅಧ್ಯಯನದ ಜತೆಗೆ ಕಾರ್ಯಕರ್ತರೊಂದಿಗೆ ಸಮಾಲೋಚನೆ, ಸಂಜೆ ಸಾರ್ವ ಜನಿಕ ಸಭೆ ನಡೆಸುವ ಮೂಲಕ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಲಾಗುವುದು ಎಂದರು.
ಶ್ರೀನಿವಾಸ ಪ್ರಸಾದ್ ಅವರು ಚುನಾವಣೆಯಲ್ಲಿ ಸೋತರೂ ಅವರಿಗೆ ಗೌರವ ಕೊಡಬೇಕೆಂಬ ದೃಷ್ಟಿಯಿಂದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದರು.
ಆಗಸ್ಟ್ ಮೊದಲ ವಾರ ರಾಜ್ಯಕ್ಕೆ ಅಮಿತ್ ಶಾ
ರಾಷ್ಟ್ರಾದ್ಯಂತ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ ಮೊದಲ ವಾರ ರಾಜ್ಯಕ್ಕೆ
ಆಗಮಿಸಲಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ. ಪ್ರಸ್ತುತ ಸಿದ್ಧವಾಗಿರುವ ವೇಳಾಪಟ್ಟಿ ಪ್ರಕಾರ ಆಗಸ್ಟ್ 2, 3 ಮತ್ತು 4ರಂದು ಶಾ ರಾಜ್ಯಕ್ಕೆ ಬರಲಿದ್ದಾರೆ ಎಂದರು.