Advertisement

ಹೇಳಲಾರೆನು ತಾಳಲಾರೆನು…

08:13 PM Nov 18, 2020 | Suhan S |

ಈ ಭೂಮಿ ಮೇಲೆ ಹುಟ್ಟಿದವರೆಲ್ಲರೂ ಸಂತೋಷದಿಂದ, ಆನಂದದಿಂದ ಬದುಕುತ್ತಿಲ್ಲ. ಎಷ್ಟೋ ನೋವು, ಅವಮಾನ, ಅಪಮಾನ, ಸಂಕಟಗಳನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು, ಮೇಲೆ ನಗುನಗುತ್ತಾ ಬಾಳುತ್ತಿದ್ದಾರೆ. ಹೃದಯದಲ್ಲಿ ಅದೆಂತಹ ಅಗ್ನಿಪರ್ವತ ಇರುತ್ತದೆಯೋ, ಅದೆಂತಹ ಜ್ವಾಲಾಮುಖೀ ಉಕ್ಕುತ್ತಿರುತ್ತದೆಯೋ,ಅವರಿಗಷ್ಟೇ ಗೊತ್ತು; ನೋಡುವವರಿಗೆ ಅವರ ನಗುಮುಖ ಮಾತ್ರ ಕಾಣಿಸುತ್ತದೆ. ಅದನ್ನು ಕಂಡವರು- ವಾಹ್‌, ಇವರೆಷ್ಟು ಸುಖ- ಸಂತೋಷದಿಂದ ಇದ್ದಾರೆ ಎಂದು ಭಾವಿಸಿಬಿಡುತ್ತಾರೆ.

Advertisement

ಅದಕ್ಕೆ ಮುಖ್ಯಕಾರಣ, ತಮ್ಮೊಳಗಿನ ನೋವು- ಸಂಕಟಗಳನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ತಾವುಸಂತೋಷವಾಗಿಯೇ ಇದ್ದೀವಿ ಎಂದುತೋರಿಸಿಕೊಳ್ಳುತ್ತಾರೆ. ಸಂಕಟಗಳನ್ನು ಹಂಚಿ ಕೊಳ್ಳಲು ಇಷ್ಟ ಪಡದ ಅದೆಷ್ಟೋ ಜನ, ತಮ್ಮ ಸಂಭ್ರಮವನ್ನು ಮಾತ್ರ ಇತರರೊಂದಿಗೆಹಂಚಿಕೊಳ್ಳಲು ಬಯಸುತ್ತಾರೆ. ಈ ಸ್ವಭಾವ ಕೆಲವರ ಕುಹಕಕ್ಕೂ ಕಾರಣವಾಗಬಹುದು.

ಸರೋಜಾ ಜೋರಾಗಿ ನಗುತ್ತಾ ಸಹೋದ್ಯೋಗಿ ವಿನುತಾ ಜೊತೆ ಮಾತನಾಡುತ್ತಿದ್ದಳು. ಅದನ್ನು ನೋಡಿ ಅಂಬಿಕಾ ಮೂಗು ಮುರಿದು- ಏನು ಹೆಂಗಸಪ್ಪ, ಮನೆಯಲ್ಲಿ ನೋಡಿದರೆ ಹಾಸಿ ಹೊದೆಯುವಷ್ಟುಕಷ್ಟ ಇದೆ, ಇವಳು ನೋಡಿದ್ರೆ, ಸುಖ- ಸಂತೋಷ ಅನ್ನೋದುಇಲ್ಲೇ ಕಾಲು ಮುರಿದುಕೊಂಡು ಕುಳಿತುಬಿಟ್ಟಿದೆ ಅನ್ನೋ ಹಾಗೆ ನಗುನಗ್ತಾ ಇದಾಳೆ. ಹೀಗೆಲ್ಲಾ ನಾಟಕ ಆಡೋಕೆ ಅದು ಹೇಗೆ ಮನಸ್ಸು ಬರುತ್ತದೆಯೋ ಅಂದುಬಿಟ್ಟಳು. ತಟ್ಟನೆ- ಮತ್ತೆ ತನಗೆಕಷ್ಟ ಇದೆ, ನೋವು ಇದೆ ಅಂತ ಸದಾ ಅಳುತ್ತಾ ಇರಬೇಕಾ ಅಂತ ಪ್ರತಿಕ್ರಿಯಿದ್ದೆ. ಸರೋಜ ಪೆಚ್ಚಾಗಿ ಅಲ್ಲಿಂದ ದುರ್ದಾನ ತೆಗೆದುಕೊಂಡಂತೆ ಎದ್ದು ಹೋಗಿದ್ದಳು. ನಗುತ್ತಲೇ ಎಲ್ಲವನ್ನೂಎದುರಿಸುವುದು ಸುಲಭದ ಮಾತಿಲ್ಲ.ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲಒಂದು ಸಂಕಷ್ಟಗಳಿಗೆ ಗುರಿಯಾಗುವುದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ಅಳುಮುಂಜಿ ಆದರೆ ಸುತ್ತಲಿನವರಿಗೂ ಕಷ್ಟವೇ

***

ರಾಗಿಣಿ ದಂಪತಿ ಅಪಘಾತದಲ್ಲಿ ಮಗನನ್ನುಕಳೆದುಕೊಂಡು ವರ್ಷವಾದರೂ, ಆ ದುಃಖದಿಂದ ಹೊರಬರದೆ ಶೋಕದಲ್ಲಿ ಮುಳುಗಿದ್ದರು. ಇವರನ್ನು ಹೀಗೆಯೇ ಬಿಟ್ಟರೆ ಇವರೂ ಮಗನ ಹಾದಿ ಹಿಡಿದುಬಿಟ್ಟಾರೆಂದು ಹೆದರಿದ ಬಂಧು ಬಳಗದವರು, ಭಾರತ ಪ್ರವಾಸ ಏರ್ಪಡಿಸಿ, ರಾಗಿಣಿ ದಂಪತಿಯನ್ನೂ ಕರೆದುಕೊಂಡು ಎರಡು ತಿಂಗಳಕಾಲ ಸುತ್ತಾಡಿಸಿಕೊಂಡು ಬಂದರು. ಹೊಸ ಪ್ರವಾಸಿ ತಾಣ, ತೀರ್ಥಕ್ಷೇತ್ರ ನೋಡಿಕೊಂಡು ಬಂದಮೇಲೆ, ಮಗನ ಅಗಲಿಕೆಯ ನೋವಿನಿಂದ ಸ್ವಲ್ಪ ಹೊರಬಂದ ದಂಪತಿ, ಹೊರಗಿನವರ ಜೊತೆಬೆರೆಯತೊಡಗಿದ್ದರು. ಎಲ್ಲರೊಡನೆ ಬೆರೆತು ಸಹಜವಾಗಿರಲು ಪ್ರಯತ್ನ ನಡೆಸಿದ್ದರು. ಆದರೆಕೆಲ ಅಧಿಕಪ್ರಸಂಗಿಗಳು- ಮಗ ಸತ್ತು ವರ್ಷವಾಗಿಲ್ಲ, ಆಗಲೇ ಇವರ ಸುತ್ತಾಟ ಏನು, ಸಂತೋಷ ಏನು, ಏನು ಜನರಪ್ಪ ಅಂತಕುಹಕದ ಮಾತಾಡಿದ್ದುಕೇಳಿ ತುಂಬಾ ಬೇಸರವಾಗಿತ್ತು. ಪುತ್ರ ಶೋಕ ನಿರಂತರ. ಸಾಯುವ ತನಕ ಆ ನೋವು, ಸಂಕಟ ಶಾಶ್ವತವಾಗಿ ಉಳಿದಿರುತ್ತದೆ. ಹಾಗಂತ ಸದಾ ಅಳುತ್ತಾಕೂರಲು ಸಾಧ್ಯವೇ? ಗಂಡನಿಗೆ ಗೊತ್ತಾಗದಂತೆ ಹೆಂಡತಿ, ಹೆಂಡತಿಗೆ ಗೊತ್ತಾಗದಂತೆ ಗಂಡ ಸಂಕಟಪಡುತ್ತಿದ್ದರೂ ಅದು ಪರಸ್ಪರ ಗೊತ್ತಾಗದಂತೆ, ದುಃಖ ಮರೆತವರಂತೆ ನಟಿಸುತ್ತಾ ಪರಸ್ಪರರಿಗಾಗಿ ಬದುಕಲು ಪ್ರಯತ್ನಿಸುತ್ತಿದ್ದರು.ಈ ಸತ್ಯ, ಕುಹಕವಾಡುವವರಿಗೇನು ಗೊತ್ತು?

Advertisement

ಪತಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಮಮತಾಗೆ ಪ್ರಪಂಚವೇ ಬೇಡವೆನಿಸಿತ್ತು.ತಿಂಗಳಾನುಗಟ್ಟಲೆ ಗಂಡನಿಗಾಗಿ ಕಂಬನಿ ಹರಿಸುತ್ತ ಊಟ- ತಿಂಡಿ ತ್ಯಜಿಸಿಗೋಳಾಡಿದ್ದಳು. ನೆಂಟರಿಷ್ಟರುಕೆಲವು ದಿನಗಳು ಜೊತೆಯಲ್ಲಿ ಇದ್ದು ಸಂತೈಸಿದ್ದರು. ನಂತರ ಅವರವರ ದಾರಿಹಿಡಿದುಹೊರಟಾಗ ಮನೆಯಲ್ಲಿ ಅವಳು, ಅವಳ ಮಕ್ಕಳು, ತಾಯಿ ಮಾತ್ರವೇ ಉಳಿದಾಗ, ಮುಂದಿನ ಬದುಕನ್ನು ನೋಡಿಕೊಳ್ಳಲೇಬೇಕಾಯಿತು. ಟಿವಿ ಚಾನಲೊಂದರಲ್ಲಿ ಕೆಲಸ ಸಿಕ್ಕಾಗ ಬದುಕಿಗೆ ದಾರಿಯಾಯಿತು. ಕೆಲಸಕ್ಕೆಂದು ಹೋಗುವಾಗ ಹೇಗೇಗೊ ಹೋಗಲುಸಾಧ್ಯವೆ? ಅದೂ ಕೂಡ ಜನರ ಬಾಯಿಗೆ ಆಹಾರವಾಯಿತು. ಅವಳ ಅಲಂಕಾರದ ಬಗ್ಗೆ ಕೊಂಕುಮಾತುಗಳು ಬಂದವು. ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಮತಾ ತನ್ನ ಪಾಡಿಗೆ ತಾನು ಇದ್ದುಬಿಟ್ಟಳು.

***

ಮನುಷ್ಯ ಅಂದಮೇಲೆಕಷ್ಟ, ದುಃಖ, ಸಂಕಟ ಇವೆಲ್ಲವೂ ಇದ್ದದ್ದೇ.ಕಷ್ಟವಿದೆ, ದುಃಖವಿದೆ ಅಂತ ಸದಾ ತಾವೂ ದುಃಖೀಸುತ್ತಾ, ಸುತ್ತಲಿನವರಿಗೂಸಂಕಟ ನೀಡುವುದು ಯಾವ ನ್ಯಾಯಎಷ್ಟೇ ದುಃಖೀಸಿದರೂ ಹೋದ ವ್ಯಕ್ತಿ ಮತ್ತೆಬರಲಾರೆ. ಬರುವಂತಿದ್ದರೆ ನಾವೂ ಅವರ ಜೊತೆ ದುಃಖೀಸುತ್ತಾಕೂರಬಹುದಿತ್ತು. ಸಂತೋಷವನ್ನು ಹಂಚಿಕೊಂಡಷ್ಟೂ ಹೆಚ್ಚಾಗುತ್ತದೆ. ಹಾಗಾಗಿ ಸಂತೋಷ ಹಂಚಿಕೊಳ್ಳಬಹುದು. ಆದರೆ ದುಃಖ ಹಂಚಿ ಕೊಳ್ಳಲು ಅಸಾಧ್ಯ. ಹಂಚಿಕೊಂಡರೆಅದೇನೂ ಕಡಿಮೆಯಾಗುವುದಿಲ್ಲ. ನಮ್ಮ ನೋವು ನಾವೇ ತಿನ್ನಬೇಕು. ಹಾಗಾಗಿ ನಮ್ಮ ನೋವು, ಸಂಕಷ್ಟವನ್ನು ನುಂಗಿ ಕೊಂಡು, ನೋಡುವವರಿಗೆ ನೋವು ಮರೆತಿದ್ದೇವೆ ಎಂಬಂತೆ ಬಾಳಬೇಕಾಗುತ್ತದೆ.ಅದನ್ನು ಅರ್ಥ ಮಾಡಿಕೊಳ್ಳದೆ ಕಟಕಿಯಾಡುವುದುಕ್ರೂರತ್ವ. ನಮ್ಮಿಂದ ಬೇರೆಯವರ ನೋವುಕಡಿಮೆ ಮಾಡಲು ಅಸಾಧ್ಯ. ಆದರೆ ಚುಚ್ಚಿ ಮಾತನಾಡದೆ,ವ್ಯಂಗ್ಯವಾಡದೆ, ನಿಂದಿಸದೆ, ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಟ್ಟರೆ ಅದೇ ನಾವು ಅವರಿಗೆ ಮಾಡುವ ಉಪಕಾರ.­

 

ಎನ್‌. ಶೈಲಜಾ ಹಾಸನ

Advertisement

Udayavani is now on Telegram. Click here to join our channel and stay updated with the latest news.

Next