ವಿಧಾನಸಭೆ: ಅಧಿವೇಶನದ ಎರಡನೇ ದಿನವಾದ ಸೋಮವಾರವೂ ಸದನ ಖಾಲಿ ಖಾಲಿ ಆಗಿತ್ತು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್‌ನ 4, ಜೆಡಿಎಸ್‌ನ 2 ಹಾಗೂ ಬಿಜೆಪಿಯ 16 ಸದಸ್ಯರು ಮಾತ್ರ ಹಾಜರಿದ್ದರು.
ಭೋಜನಾ ವಿರಾಮದ ಗಮನ ಸೆಳೆಯುವ ಸೂಚನೆ ಪ್ರಸ್ತಾಪ ಕೊಟ್ಟಿದ್ದವರೂ ಗೈರು ಆಗಿದ್ದರು. ಬೆಳಗ್ಗೆ ಪ್ರಶ್ನೋತ್ತರ ಸಂದರ್ಭದಲ್ಲಿಯೂ ಸದಸ್ಯರು ಹಾಜರಿರಲಿಲ್ಲ.
ಹೀಗಾಗಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ನಮ್ಮ ಅವಧಿಯ ಕೊನೆಯ ಅಧಿವೇಶನ. ಸಾಮಾಜಿಕವಾಗಿ, ರಾಜಕೀಯವಾಗಿಯೂ ನಮ್ಮನ್ನು ಬೆಳೆಸಿದ ಮನೆ. ಭಾವನಾತ್ಮಕವಾಗಿಯೂ ನಮಗೆ ಸದನ ಮಹತ್ವದ್ದು. ಫೆ.24ರವರೆಗೆ ಸದನ ನಡೆಯಲಿದ್ದು, ಎಲ್ಲರೂ ತಪ್ಪದೇ ಭಾಗವಹಿಸಿ ಎಂದು ಮನವಿ ಮಾಡಿದರು.
ಪರಿಷತ್‌ನಲ್ಲಿ ಸಚಿವರ ಗೈರು
ವಿಧಾನಪರಿಷತ್‌ನಲ್ಲಿ ಸದಸ್ಯರ ಹಾಜರಾತಿ ಇತ್ತಾದರೂ ಸದಸ್ಯರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಬೇಕಾದ ಸಚಿವರು ಗೈರು ಹಾಜರಾಗಿದ್ದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ ಸಚಿವರೂ ಸದನದಲ್ಲಿ ಇರಬೇಕು. ಜತೆಗೆ, ಪ್ರಶ್ನೆ ಕೇಳಿದ ಸದಸ್ಯರೂ ಇರಬೇಕು ಎಂದು ಹೇಳಿದರು.