ಹೊಸದಿಲ್ಲಿ: ಪ್ರಸಕ್ತ ಮುಂಗಾರು ಅಧಿವೇಶನ ಬುಧವಾರ ತುಸು ಬಿರುಸಾಗಿಯೇ ಆರಂಭವಾಗಿದ್ದು, ಸರಕಾರ ಬಂದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸ ಪರೀಕ್ಷೆಗೆ ಒಳಪಡಲಿದ್ದಾರೆ. ವಿಶೇಷವೆಂದರೆ ಹದಿನೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ. ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಟಿಡಿಪಿ ಸರಕಾರದ ವಿರುದ್ಧ ಗೊತ್ತುವಳಿ ಮಂಡಿಸಿದೆ. ಅದಕ್ಕೆ ಕಾಂಗ್ರೆಸ್, ಟಿಎಂಸಿ ಬೆಂಬಲ ನೀಡಿವೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅದನ್ನು ಸ್ವೀಕರಿಸಿದ್ದು, ಶುಕ್ರವಾರ ಚರ್ಚೆ ನಡೆಸಲು ದಿನ ನಿಗದಿ ಮಾಡಲಾಗಿದೆ.
ಟಿಡಿಪಿ, ಕಾಂಗ್ರೆಸ್, ಎನ್‌ಸಿಪಿಯ ಸುಮಾರು 50 ಮಂದಿ ಸಂಸದರು ಸಹಿ ಮಾಡಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಸ್ಪೀಕರ್‌ಗೆ ಸಲ್ಲಿಸಲಾಗಿದೆ. ಅವರು ಅದನ್ನು ಚರ್ಚೆಗೆ ಅಂಗೀಕರಿಸಿದ್ದಾರೆ. ಸಂಖ್ಯಾಬಲದಿಂದ ನೋಡುವುದಿದ್ದರೆ ವಿಪಕ್ಷಗಳು ಮಂಡಿಸಿದ ಈ ಅವಿಶ್ವಾಸ ನಿರ್ಣಯದಿಂದ ಸರಕಾರದ ಭದ್ರತೆಗೆ ಯಾವುದೇ ಅಪಾಯವಿಲ್ಲ. 2019ರ ಚುನಾವಣೆಗೆ ಪ್ರಧಾನಿ ಮೋದಿ ನಾಯಕತ್ವದ ಬಿಜೆಪಿಯನ್ನು ಎದುರಿಸಲು ಉದ್ದೇಶಿಸಿರುವ ಮಹಾಮೈತ್ರಿಕೂಟ ಗಟ್ಟಿಯಾಗಿದೆಯೋ ಇಲ್ಲವೋ ಎನ್ನುವದನ್ನು ಈ ಬೆಳವಣಿಗೆ ನಿರ್ಧರಿಸಲಿದೆ.
ಆರಂಭದಲ್ಲೇ ಗದ್ದಲ: ಕಲಾಪ ಆರಂಭವಾ ಗುತ್ತಲೇ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡ ಬೇಕು ಎಂದು ಒತ್ತಾಯಿಸಿ ಟಿಡಿಪಿ ಸಂಸದರು ಗದ್ದಲವೆಬ್ಬಿಸಿದರು. ಶೂನ್ಯ ವೇಳೆಯಲ್ಲಿ ಟಿಡಿಪಿ, ಎನ್‌ಸಿಪಿ, ಕಾಂಗ್ರೆಸ್‌ನ ಎಲ್ಲ ಹೆಸರುಗಳನ್ನು ಓದಿದ ಸ್ಪೀಕರ್ ಸುಮಿತ್ರಾ ಮಹಾಜನ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದ ಬಗ್ಗೆ ಮಾಹಿತಿಯಿತ್ತರು. ಜತೆಗೆ ಟಿಡಿಪಿಯ ಕೆಸಿನೇನಿ ಶ್ರೀನಿವಾಸ್‌ಗೆ ಗೊತ್ತುವಳಿ ಮಂಡಿಸಲು ಸೂಚಿಸಿದರು.
ಸರಕಾರ ಸಿದ್ಧವಿದೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಗೊತ್ತುವಳಿಯನ್ನು ಎದುರಿಸಲು ಕೇಂದ್ರ ಸಿದ್ಧವಿದೆ ಎಂದರು.
ಖರ್ಗೆ ಆಕ್ಷೇಪ: ಟಿಡಿಪಿಗೆ ಗೊತ್ತುವಳಿ ಮಂಡಿಸಲು ಅವಕಾಶ ಕೊಟ್ಟದ್ದಕ್ಕೆ ಕಾಂಗ್ರೆಸ್ ನಾಯಕ ಖರ್ಗೆ ಆಕ್ಷೇಪಿಸಿದರು. ಸದನದಲ್ಲಿ ಎರಡನೇ ಅತ್ಯಂತ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಅವಕಾಶ ನೀಡಬೇಕಾಗಿತ್ತು ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ , ಅದರಲ್ಲಿ ದೊಡ್ಡ ಪಕ್ಷ, ಸಣ್ಣ ಪಕ್ಷ ಎಂಬುದಿಲ್ಲ. ಗೊತ್ತುವಳಿಯನ್ನು ಯಾರು ಮಂಡಿಸುತ್ತಾರೋ ಅವರಿಗೆ ಅವಕಾಶ ನೀಡಲಾಗಿದೆ ಎಂದರು.
ವಾಜಪೇಯಿ ಸರಕಾರದ ವಿರುದ್ಧ ಮಂಡನೆಯಾಗಿತ್ತು
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ 2003ರಲ್ಲಿ ವಿಪಕ್ಷ ನಾಯಕಿಯಾಗಿದ್ದ ಸೋನಿಯಾ ಗಾಂಧಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಂಖ್ಯಾ ಬಲವಿಲ್ಲದಿದ್ದರೂ ಪ್ರಯತ್ನ ನಡೆಸಲಾಗಿತ್ತು. ಬಜೆಟ್ ಅಧಿವೇಶನದ ಅವಧಿಯಲ್ಲಿಯೂ ಟಿಡಿಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರಯತ್ನಿಸಿತ್ತಾದರೂ ಅವಕಾಶ ಸಿಗಲಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲವೆನ್ನುವುದು ಅದರ ಆಕ್ಷೇಪ.
ಸಂಸತ್‌ನಲ್ಲಿ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಸರಕಾರ ಸಿದ್ಧವಿದೆ. ರಾಷ್ಟ್ರೀಯ ಹಿತಾಸಕ್ತಿ ಇರುವ ಹಲವು ವಿಚಾರಗಳಿವೆ. ಹೀಗಾಗಿ ಎಲ್ಲ ಪಕ್ಷಗಳು ಸದನದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು.
ನರೇಂದ್ರ ಮೋದಿ, ಪ್ರಧಾನ ಮಂತ್ರಿ
ವಿಪಕ್ಷಗಳ ಬಳಿ ಅವಿಶ್ವಾಸ ಗೊತ್ತುವಳಿ ಬೆಂಬಲಿಸುವಷ್ಟು ಸಂಖ್ಯಾಬಲವಿದೆ. ಸಂಸತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ನಾವು ಸೋಲಿಸುತ್ತೇವೆ.
ಸೋನಿಯಾ ಗಾಂಧಿ, ಯುಪಿಎ ಅಧ್ಯಕ್ಷೆ