Advertisement

ಸ್ಪೀಕರ್‌, ಸಭಾಪತಿ ಪ್ರಸ್ತಾವನೆಗೆ ಕಾಗೋಡು ಅಸಮಾಧಾನ

03:45 AM Jan 24, 2017 | Team Udayavani |

ಬೆಂಗಳೂರು: ರಾಜ್ಯಾಡಳಿತದ ಕೇಂದ್ರ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದ ನೆಲಮಹಡಿ ಮತ್ತು ಮೊದಲ ಮಹಡಿಗಳನ್ನು ಸಚಿವಾಲಯದ ಸುಪರ್ದಿಗೆ ಒಪ್ಪಿಸುವಂತೆ ಸ್ಪೀಕರ್‌ ಮತ್ತು ಸಭಾಪತಿಗಳು
ಕಳುಹಿಸಿಕೊಟ್ಟಿರುವ ಪ್ರಸ್ತಾವನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ,
ನಾನಿರುವವರೆಗೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ವಿಧಾನಸೌಧ ಮತ್ತು ಸುವರ್ಣ ವಿಧಾನಸೌಧದ ನೆಲ ಮತ್ತು ಮೊದಲ ಮಹಡಿಗಳನ್ನು ಸಚಿವಾಲಯಕ್ಕೆ
ಬಿಟ್ಟುಕೊಡುವಂತೆ ಸ್ಪೀಕರ್‌ ಮತ್ತು ಸಭಾಪತಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ
ಉತ್ತರಿಸಿದ ಅವರು, ಅಲ್ಲಿ ಕೆಲ ಹುಳಗಳು ಸೇರಿಕೊಂಡಿವೆ. ಅವು ಹೀಗೆಲ್ಲ ಮಾಡಿ ಎಂದು ಹೇಳಿಕೊಡುತ್ತವೆ. ಇವರು
ಹಾಗೆಯೇ ಮಾಡುತ್ತಾರೆ. ಇವರಿಗೆಲ್ಲ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದರು.

ವಿಧಾನಸೌಧ ನಿರ್ಮಿಸಿ ಇಷ್ಟು ವರ್ಷಗಳಾಗಿವೆ. ಇದುವರೆಗೆ ಸಾಕಷ್ಟು ಸ್ಪೀಕರ್‌, ಸಭಾಪತಿಗಳು ಬಂದುಹೋಗಿದ್ದಾರೆ.
ವಿಧಾನಸೌಧವನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿರುವುದರಿಂದ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ
ಸಚಿವಾಲಯದ ಗೌರವಕ್ಕೆ ಚ್ಯುತಿಯಾದರೆ, ಅವರ ಹಕ್ಕು-ಬಾಧ್ಯತೆಗಳಿಗೆ ಧಕ್ಕೆಯಾಗಿದ್ದರೆ ಹೇಳಲಿ. ಇದುವರೆಗೂ ಅಂತಹ ಸಮಸ್ಯೆಗಳಾಗಿವೆಯೇ? ಹೀಗಿರುವಾಗ ನಮಗೆ ಬಿಟ್ಟುಕೊಡಿ ಎಂದು ಕೇಳುವುದರಲ್ಲಿ ಅರ್ಥವೇನು ಎಂದು ಪ್ರಶ್ನಿಸಿದರು.

ಹಿಂದೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಒಟ್ಟಾಗಿ ವಿಧಾನ ಮಂಡಲ ಸಚಿವಾಲಯ ಇತ್ತು. ಎಲ್ಲಾ ಶಾಸಕರಿಗೂ
ಶಾಸಕರ ಭವನದಲ್ಲಿ ಒಂದೇ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯ ಎಂದು ಪ್ರತ್ಯೇಕಿಸಲಾಯಿತು. ಶಾಸಕರ ಭವನದಲ್ಲೂ ಎರಡೂ ಸದನದವರಿಗೆ ಪ್ರತ್ಯೇಕ ವಾಸ್ತವ್ಯ ಕಲ್ಪಿಸಲಾಯಿತು. ಈಗ ವಿಧಾನಸೌಧವನ್ನು ಪ್ರತ್ಯೇಕಿಸಿ ನೆಲ ಮತ್ತು ಮೊದಲ ಮಹಡಿಗಳನ್ನು ನಮಗೆ ಕೊಡಿ
ಎಂಬುದಾಗಿ ಕೇಳುತ್ತಿದ್ದಾರೆ. ಮುಂದೆ ಇಡೀ ವಿಧಾನಸೌಧ ನಮ್ಮದು, ಮುಖ್ಯಮಂತ್ರಿಗಳ ಅನುಮತಿಯಿಲ್ಲದೆ ಒಳಬರುವಂತಿಲ್ಲ ಎಂದು ಹೇಳಬಹುದು ಎಂದು ಹೇಳಿ ಜೋರಾಗಿ ನಕ್ಕರು.

ಕಾಡುಗೊಂಡನಹಳ್ಳಿಯಲ್ಲಿ ಟೌನ್‌ ಶಿಪ್‌ ನಿರ್ಮಿಸಲು 100 ಎಕರೆ ಭೂಮಿ ನೀಡುವಂತೆ ಸಚಿವಾಲಯದ ಕಡೆಯಿಂದ
ಕಂದಾಯ ಇಲಾಖೆಗೆ ಪ್ರಸ್ತಾವನೆ ಬಂದಿರುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next