ಮಡಿಕೇರಿ: ಕೊಡಗಿನ ಸುಂಟಿಕೊಪ್ಪದ ಸ್ಪಂದನಾ ಸುರೇಶ್ ಭಾರತೀಯ ನೌಕಾ ದಳದ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಎಝೆಮಾಲ ನೇವಲ್ ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಪದಗ್ರಹಣ ಸಮಾರಂಭದಲ್ಲಿ ಬ್ರೆವ್ ಹಾರ್ಟ್ ತಂಡದ ಕಮಾಂಡರ್ ಆಗಿ ತಂಡವನ್ನು ಮುನ್ನಡೆಸಿದ್ದ ಅವರು ಪ್ರಸ್ತುತ ನೌಕಾದಳದ ವಿನ್ಯಾಸ ತಂತ್ರಜ್ಞಾನದಲ್ಲಿ ಉನ್ನತ ತರಬೇತಿಗಾಗಿ ವಿಶಾಖಪಟ್ಟಣದ ನೌಕಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ.
ಸ್ಪಂದನಾ ಸುಂಟಿಕೊಪ್ಪದ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಸುರೇಶ್ ಕುಮಾರ್ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪುಷ್ಪಲತಾ ದಂಪತಿ ಪುತ್ರಿ.
ಸುಂಟಿಕೊಪ್ಪದ ಸೇಂಟ್ ಆ್ಯನ್ಸ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸ್ಪಂದನಾ ಬೆಂಗಳೂರಿನ ನಿಟ್ಟೆ ತಾಂತ್ರಿಕ ವಿ.ವಿ.ಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಹಿಂದೆ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು.