ನವದೆಹಲಿ: ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಕೇಂದ್ರ ಸರಕಾರವು ಜಾಗವನ್ನು ಮಂಜೂರು ಮಾಡಿದೆ ಮತ್ತು ಅದರ ಬಗ್ಗೆ ಅವರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಹೇಳಿದ್ದಾರೆ.
ಮಾಜಿ ಪ್ರಧಾನಿ ಅವರ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್ “ಅಗ್ಗದ ರಾಜಕಾರಣ” ಮಾಡುತ್ತಿದೆ ಎಂದು ನಡ್ಡಾ ಆರೋಪಿಸಿದ್ದಾರೆ.
ದೇಶದ ಮೊದಲ ಸಿಖ್ ಪ್ರಧಾನಿ ಸಿಂಗ್ ಅವರ ಸ್ಮಾರಕವಾಗಿ ಮಾರ್ಪಡಿಸಬಹುದಾದ ಗೊತ್ತುಪಡಿಸಿದ ಸ್ಥಳದ ಬದಲಿಗೆ ನಿಗಮಬೋಧ್ ಘಾಟ್‌ನಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸುವ ಮೂಲಕ ಕೇಂದ್ರ ಸರಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಬಿಜೆಪಿ ಅಧ್ಯಕ್ಷ ಈ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತಮಾತೆಯ ಮಹಾನ್ ಪುತ್ರ ಮತ್ತು ಸಿಖ್ ಸಮುದಾಯದ ಮೊದಲ ಪ್ರಧಾನಿ ಸಿಂಗ್ ಅವರ ಅಂತಿಮ ವಿಧಿಗಳನ್ನು ನಿಗಮಬೋಧ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸಂಪೂರ್ಣವಾಗಿ ಅವಮಾನ ಮಾಡಿದೆ” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದರು.
“ಮಾಜಿ ಪ್ರಧಾನಿಯವರ ನಿಧನದ ದುಃಖದ ವೇಳೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ದುರದೃಷ್ಟಕರ.ಕಾಂಗ್ರೆಸ್‌ನ ಇಂತಹ ಅಗ್ಗದ ಚಿಂತನೆಗೆ ಎಷ್ಟೇ ಖಂಡನೆ ವ್ಯಕ್ತಪಡಿಸಿದರೂ ಸಾಲದು. ಮನಮೋಹನ್ ಸಿಂಗ್ ಅವರು ಬದುಕಿದ್ದಾಗ ಅವರಿಗೆ ನಿಜವಾದ ಗೌರವ ನೀಡದ ಕಾಂಗ್ರೆಸ್ ಈಗ ಅವರ ಗೌರವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ” ಎಂದು ನಡ್ಡಾ ತಿರುಗೇಟು ನೀಡಿದ್ದಾರೆ.