Advertisement

ಬಾಹ್ಯಾಕಾಶ ಆಧಾರಿತ ಸೌರಶಕ್ತಿ ಯೋಜನೆ; ಕ್ರಾಂತಿಕಾರಿ ಪ್ರಯೋಗಕ್ಕೆ ಮುಂದಾದ ಬ್ರಿಟನ್‌ನ ಎಸ್‌ಇಐ

11:25 PM Nov 12, 2022 | Team Udayavani |

ಮಾನವನಿಗೂ ವಿದ್ಯುತ್‌ಗೂ ಅವಿನಾಭಾವ ನಂಟು. ಪ್ರತಿಯೊಂದೂ ಗಳಿಗೆಯಲ್ಲೂ ವಿದ್ಯುತ್‌ ಅನ್ನು ಒಂದಲ್ಲ ಒಂದು ತೆರನಾಗಿ ಬಳಸುತ್ತಿರುವ ನಾವು ವಿದ್ಯುತ್‌ ರಹಿತ ಜೀವನವನ್ನು ಊಹಿಸುವುದೂ ಕಷ್ಟಸಾಧ್ಯ ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಆದರೆ ಇಡೀ ವಿಶ್ವವನ್ನು ವಿದ್ಯುತ್‌ ಅಭಾವ ತೀವ್ರವಾಗಿ ಕಾಡುತ್ತಿದೆ. ಜಲ, ಕಲ್ಲಿದ್ದಲು, ಅಣು, ಪವನ, ಸೌರಶಕ್ತಿಗಳನ್ನು ಬಳಸಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದರೂ ಮನುಕುಲದ ಒಟ್ಟಾರೆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಜಲ, ಪವನ ಮತ್ತು ಸೌರಶಕ್ತಿಯ ಮೂಲಕ ಸೀಮಿತ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿರುವುದರಿಂದ ಕಲ್ಲಿದ್ದಲು ಮತ್ತು ಅಣು ವಿದ್ಯುತ್‌ ಸ್ಥಾವರಗಳ ಅವಲಂಬನೆ ಹೆಚ್ಚುತ್ತಿದೆ. ಉತ್ಪಾದನ ವೆಚ್ಚವೂ ಅಧಿಕವಾಗಿರುವುದರಿಂದ ಗ್ರಾಹಕರಿಗೆ ಮತ್ತು ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲದರ ಹೊರತಾಗಿಯೂ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದಿಸಲು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಕಲ್ಲಿದ್ದಲು ಮತ್ತು ಅಣು ವಿದ್ಯುತ್‌ ಸ್ಥಾವರಗಳಿಂದ ವಾತಾವರಣ ಸಂಪೂರ್ಣ ಕಲುಷಿತವಾಗುತ್ತಿದ್ದು ಹವಾಮಾನ ಬದಲಾವಣೆಗೆ ಇದು ಪ್ರಮುಖ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶ್ವ ಸಮುದಾಯ ಶತಾಯಗತಾಯ ಪ್ರಯತ್ನದಲ್ಲಿ ನಿರತವಾಗಿದ್ದು ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿವೆ. ಭೂಮಿಯ ಒಟ್ಟಾರೆ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದ ವಿದ್ಯುತ್‌ ಅನ್ನು ಸೌರ ಶಕ್ತಿಯಿಂದ ಪಡೆಯಬಹುದು ಎಂದು ದಶಕಗಳ ಹಿಂದಿನಿಂದಲೂ ವಿಜ್ಞಾನಿಗಳು ಪ್ರತಿಪಾದಿಸುತ್ತಲೇ ಬಂದಿರುವರಾದರೂ ಇದನ್ನು ಕಾರ್ಯಸಾಧ್ಯವಾಗಿಸುವಲ್ಲಿ ಈವರೆಗೆ ಕೈಗೊಂಡ ಎಲ್ಲ ಪ್ರಯತ್ನಗಳು ವಿಫ‌ಲವಾಗಿವೆ. ಈಗ ಬ್ರಿಟನ್‌ ಸರಕಾರದ ಬೆಂಬಲದೊಂದಿಗೆ ಅಲ್ಲಿನ ಸ್ಪೇಸ್‌ ಎನರ್ಜಿ ಇನಿಶಿಯೇಟಿವ್‌(ಎಸ್‌ಇಐ) ದಶಕಗಳ ಹಿಂದಿನ ಚಿಂತನೆಗೆ ಮರುಚಾಲನೆ ನೀಡಿದ್ದು ಪ್ರಯೋಗ ನಿರತವಾಗಿದೆ.

Advertisement

ಏನಿದು ಯೋಜನೆ?
1970ರ ದಶಕದಿಂದೀಚೆಗೆ ನೇರವಾಗಿ ಬಾಹ್ಯಾಕಾಶದಿಂದಲೇ ಸೌರಶಕ್ತಿಯನ್ನು ಸಂಗ್ರಹಿಸಿ ಅದನ್ನು ಭೂಮಿಗೆ ರವಾನಿಸಿ, ವಿದ್ಯುತ್‌ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಧ್ಯಯನ, ಪ್ರಯೋಗಗಳನ್ನು ವಿಜ್ಞಾನಿಗಳು ನಡೆಸುತ್ತಲೇ ಬಂದಿದ್ದಾರೆ. ಆದರೆ ಇವ್ಯಾವೂ ಯಶ ಕಂಡಿಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಬ್ರಿಟನ್‌ನ ತಜ್ಞರು ನಡೆಸಿದ ಅಧ್ಯಯನ ಮತ್ತು ಕೈಗೊಂಡ ಸಂಶೋಧನೆಗಳ ಆಧಾರದಲ್ಲಿ ಬಾಹ್ಯಾಕಾಶಕ್ಕೆ ಉಪ್ರಗಹಗಳನ್ನು ಉಡಾಯಿಸಿ, ಅವುಗಳಲ್ಲಿ ಅಳವಡಿಸಲಾಗುವ ಸೌರಫ‌ಲಕಗಳ ಮೂಲಕ ಸೌರಶಕ್ತಿಯನ್ನು ಸಂಗ್ರಹಿಸಿ ಅವುಗಳನ್ನು ಮೈಕ್ರೋವೇವ್‌ ಅಥವಾ ರೇಡಿಯೋ ತರಂಗಗಳ ಮೂಲಕ ಭೂಮಿಗೆ ರವಾನಿಸಲಾಗುವುದು. ಈ ರೇಡಿಯೋ ತರಂಗಗಳನ್ನು ಭೂಮಿಯ ಮೇಲ್ಮೆ„ಯಲ್ಲಿ ಅಳವಡಿಸಲಾಗಿರುವ ಆ್ಯಂಟೆನಾಗಳ ಮೂಲಕ ಸ್ವೀಕರಿಸಿ ಆ ಬಳಿಕ ಅದನ್ನು ವಿದ್ಯುತ್‌ ಆಗಿ ಪರಿವರ್ತಿಸುವುದು ಒಟ್ಟಾರೆ ಯೋಜನೆಯ ಸಾರಾಂಶ.

ಸರಕಾರದಿಂದ ನೆರವು
ಫ್ರೆàಸರ್‌-ನ್ಯಾಶ್‌ ಎಂಬ ತಂತ್ರಜ್ಞರ ಸಲಹಾ ಸಂಸ್ಥೆಯು ನಡೆಸಿದ ಅಧ್ಯಯನದ ವೇಳೆ ಬಾಹ್ಯಾಕಾಶ ಆಧಾರಿತ ಸೌರಶಕ್ತಿ ಯೋಜನೆ ಕಾರ್ಯಸಾಧ್ಯ ವಾಗಿದ್ದು ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸಬಹುದಾಗಿದೆ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಬ್ರಿಟನ್‌ ಸರಕಾರ ಈ ವರ್ಷದ ಆರಂಭದಲ್ಲಿ ಬಾಹ್ಯಾಕಾಶ ಆಧಾರಿತ ಸೌರಶಕ್ತಿ ಯೋಜನೆಗಳಿಗೆ 3 ಮಿಲಿಯನ್‌ ಸ್ಟರ್ಲಿಂಗ್‌ ಪೌಂಡ್‌ಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ಗರಿಷ್ಠ ಪ್ರಮಾಣದ ಹಣ ಎಸ್‌ಇಐನ ಪಾಲಾಗಿದೆ.

ಪ್ರಯೋಗ ಹೇಗೆ?
ಬಾಹ್ಯಾಕಾಶದಿಂದ ಸೌರಶಕ್ತಿಯನ್ನು ಸಂಗ್ರಹಿಸಿ ಮೈಕ್ರೊವೇವ್‌ಗಳನ್ನು ಬಳಸಿಕೊಳ್ಳುವ ಮೂಲಕ ಭೂಮಿಗೆ ವಿದ್ಯುತ್‌ ಸರಬರಾಜು ಮಾಡಬಹುದು ಎಂಬುದು ಎಸ್‌ಇಐನ ಪ್ರತಿಪಾದನೆ. ಉದ್ಯಮ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ ಸಂಸ್ಥೆಯಾಗಿರುವ ಎಸ್‌ಇಐ “ಕ್ಯಾಸಿಯೋಪಿಯಾ’ ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಈ ಮೂಲಕ ಬಾಹ್ಯಾಕಾಶದಿಂದ ಸೌರಶಕ್ತಿಯನ್ನುಚಸಂಗ್ರಹಿಸಲು ಅಗತ್ಯವಿರುವ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ. ಇದಕ್ಕಾಗಿ ಭೂಮಿಯ ಕಕ್ಷೆಯ ಮೇಲ್ಭಾಗದಲ್ಲಿ ಉಪಗ್ರಹಗಳ ಸಮೂಹವನ್ನು ಇರಿಸಲು ಯೋಜಿಸಿದೆ. ಈ ಉಪಗ್ರಹಗಳಲ್ಲಿ ಅಳವಡಿಸಲಾಗಿರುವ ಸೌರ ಫ‌ಲಕಗಳು ಸೌರಶಕ್ತಿಯನ್ನು ಹೀರಿಕೊಳ್ಳಲಿದ್ದು ಇದನ್ನು ಮೈಕ್ರೋವೇವ್‌ ಅಥವಾ ರೇಡಿಯೋ ತರಂಗಗಳ ಮೂಲಕ ಭೂಮಿಗೆ ರವಾನಿಸುವ ಚಿಂತನೆ ತಂತ್ರಜ್ಞಾನಿಗಳದ್ದಾಗಿದೆ.

ಯಾವಾಗ ಕಾರ್ಯಸಾಧ್ಯ?
ಎಸ್‌ಇಐನ ಸದ್ಯದ ಅಂದಾಜಿನ ಪ್ರಕಾರ, ಎಲ್ಲವೂ ಅಂದುಕೊಂಡಂತೆ ನಡೆದರೆ 2035ರ ವೇಳೆಗೆ ಇದು ಕಾರ್ಯಗತಗೊಳ್ಳಲಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದದ್ದೇ ಆದಲ್ಲಿ 2050ರ ವೇಳೆಗೆ ಇದು ವಿಶ್ವದ ವಿದ್ಯುತ್‌ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲಿದೆ ಮಾತ್ರವಲ್ಲದೆ ಮಾನವರು ವರ್ಷಕ್ಕೆ ಬಳಸುವ ವಿದ್ಯುತ್‌ಗಿಂತ 100ಪಟ್ಟು ಹೆಚ್ಚು ಶಕ್ತಿಯನ್ನು ಈ ಮೂಲಕ ಉತ್ಪಾದಿಸಬಹುದಾಗಿದೆ
ಎಂಬ ವಿಶ್ವಾಸ ಸಂಸ್ಥೆಯದ್ದಾಗಿದೆ.

Advertisement

ಹೇಗೆ?
ಸೌರಶಕ್ತಿಯ ಸಂಗ್ರಹಕ್ಕಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ಉಪಗ್ರಹಗಳನ್ನು ರೋಬೋಟ್‌ಗಳ ಸಹಾಯದಿಂದ ಬಾಹ್ಯಾಕಾಶದಲ್ಲಿ ಜೋಡಿಸಲಾಗುತ್ತದೆ ಮಾತ್ರವಲ್ಲದೆ ರೋಬೋಟ್‌ಗಳೇ ಈ ಉಪಗ್ರಹಗಳ ನಿಯಂತ್ರಣ ಮತ್ತು ನಿರ್ವಹಣೆಯನ್ನು ಮಾಡುತ್ತವೆ. ಆ ಬಳಿಕ ಉಪಗ್ರಹಗಳು ಸಂಗ್ರಹಿಸಿದ ಸೌರಶಕ್ತಿಯನ್ನು ಹೆಚ್ಚಿನ ಆವರ್ತನದ ರೇಡಿಯೊ ತರಂಗಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಭೂಮಿಯ ಮೇಲೆ ಅಳವಡಿಸಲಾಗಿರುವ ಆಂಟೆನಾಕ್ಕೆ ಬೀಮ್‌ ಮಾಡಲಾಗುತ್ತದೆ. ಈ ರೇಡಿಯೊ ತರಂಗಗಳನ್ನು ಬಳಿಕ ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ.

ಸಾಮರ್ಥ್ಯವೇನು?
ಎಸ್‌ಇಐನ ಸದ್ಯದ ಅಂದಾಜಿನ ಪ್ರಕಾರ ಸೌರಶಕ್ತಿಯ ಸಂಗ್ರಹಕ್ಕಾಗಿ ಬಾಹ್ಯಾಕಾಶದಲ್ಲಿ ಜೋಡಿಸಲಾಗುವ ಪ್ರತಿಯೊಂದೂ ಉಪಗ್ರಹವು ಸುಮಾರು 2ಎಗ ಶಕ್ತಿಯನ್ನು ಗ್ರಿಡ್‌ಗೆ ಸೇರಿಸಬಲ್ಲದು. ಅಂದರೆ ಪ್ರತೀ ಅಣು ವಿದ್ಯುತ್‌ ಸ್ಥಾವರದ ಸಾಮಥ್ಯವನ್ನು ಈ ಉಪಗ್ರಹಗಳು ಹೊಂದಿರಲಿವೆ. ಭೂಮಿಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳದೇ ಇರುವುದರಿಂದ ಅದರ ಶಕ್ತಿಯ ಬಹುಪಾಲು ವಾತಾವರಣದಲ್ಲಿ ಚದುರಿ ಹೋಗುತ್ತದೆ. ಹೀಗಾಗಿ ಭೂಮಿಯ ಮೇಲೆ ಅಳವಡಿಸಲಾಗುವ ಸೌರಫ‌ಲಕಗಳು ಸೂರ್ಯನ ಕಿರಣಗಳ ಶಕ್ತಿಯ ಅಲ್ಪಾಂಶವನ್ನು ಮಾತ್ರವೇ ಹೀರಿಕೊಳ್ಳುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಜೋಡಿಸಲಾಗುವ ಉಪಗ್ರಹಗಳಲ್ಲಿ ಅಳವಡಿಸಲಾಗುವ ಸೌರ ಫ‌ಲಕಗಳ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳುವುದರಿಂದ ಭಾರೀ ಪ್ರಮಾಣದಲ್ಲಿ ಸೌರಶಕ್ತಿಯನ್ನು ಹೀರಿಕೊಳ್ಳುತ್ತವೆ.

ಅಪಾಯ ಇದೆಯೇ?
ಬಾಹ್ಯಾಕಾಶ ಆಧಾರಿತ ಸೌರಶಕ್ತಿಯನ್ನು ಮೈಕ್ರೋವೇವ್‌ ಅಥವಾ ರೇಡಿಯೋ ತರಂಗಗಳ ಮೂಲಕ ಭೂಮಿಗೆ ರವಾನಿಸುವುದರಿಂದ ಭೂಮಿಯ ಮೇಲಿನ ಮಾನವರಿಗಾಗಲಿ, ಜೀವಜಂತುವಿಗಾಗಲೀ ಯಾವುದೇ ಅಪಾಯವಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಇದು ವೈ-ಫೈನಂತೆ ಕಾರ್ಯನಿರ್ವಹಿಸುವುದರಿಂದ ಅಪಾಯದ ಸಾಧ್ಯತೆ ಇಲ್ಲವೇ ಇಲ್ಲ ಎಂಬ ಸಮರ್ಥನೆ ಎಸ್‌ಇಐನದ್ದು. ಅಷ್ಟು ಮಾತ್ರವಲ್ಲದೆ ಹವಾಮಾನದ ಮೇಲೂ ಇದು ಯಾವುದೇ ಪರಿಣಾಮ ಬೀರದು. ಅಷ್ಟು ಮಾತ್ರವಲ್ಲದೆ ಉಷ್ಣ ಮತ್ತು ಅಣು ವಿದ್ಯುತ್‌ ಸ್ಥಾವರದಿಂದ ಸದ್ಯ ಭೂಮಿಯ ವಾತಾವರಣದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ತಡೆಯೊಡ್ಡಲು ಇದರಿಂದ ಸಾಧ್ಯವಾಗಲಿದೆ.

ದುಷ್ಪರಿಣಾಮ ಇಲ್ಲವೇ?
ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೌರಫ‌ಲಕಗಳನ್ನು ಹೊತ್ತ ಉಪಗ್ರಹಗಳನ್ನು
ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದು ವೆಚ್ಚದಾಯಕವಾಗಲಿದೆ ಮಾತ್ರವಲ್ಲದೆ ಈ ಉಡಾವಣೆಗಳ ವೇಳೆ ಭಾರೀ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೆ„ಡ್‌ ಬಿಡುಗಡೆಯಾಗಿ ವಾತಾವರಣಕ್ಕೆ ಸೇರ್ಪಡೆಯಾಗುವ ಆತಂಕವಂತೂ ಇದ್ದೇ ಇದೆ. ಆದರೆ ಪ್ರಯೋಗ ಯಶಸ್ವಿಯಾಗಿ ಅದರ ಲಾಭವನ್ನು ಊಹಿಸಿದರೆ ಉಪಗ್ರಹಗಳ ಉಡಾವಣೆಗೆ ತಗಲುವ ವೆಚ್ಚ ಮತ್ತು ಪರಿಸರ ಮಾಲಿನ್ಯ ತೀರಾ ನಗಣ್ಯ ಎಂಬುದು ಎಸ್‌ಇಐನ ವಾದ. ಅಲ್ಲದೆ ಸೌರಶಕ್ತಿ ಸಂಗ್ರಹಕ್ಕಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ಉಪಗ್ರಹಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ ಎಂಬುದು ಸಂಸ್ಥೆಯ ತಜ್ಞರ ಅಭಿಪ್ರಾಯ.

ಯಾವ್ಯಾವ ದೇಶಗಳಿಂದ ಪ್ರಯೋಗ?
ಇಂತಹ ಯೋಜನೆ ಹೊಸದೇನಲ್ಲ. 1968ರಲ್ಲಿಯೇ ಅಮೆರಿಕದ ಎಂಜಿನಿಯರ್‌ ಪೀಟರ್‌ಗ್ಲೆàಸರ್‌ ಬಾಹ್ಯಾಕಾಶ ಆಧಾರಿತ ಸೌರಶಕ್ತಿ ಚಿಂತನೆಯನ್ನು ವಿಶ್ವದ ಮುಂದಿರಿಸಿದ್ದರು. ಈಗಾಗಲೇ ಮೂರ್‍ನಾಲ್ಕು ಇಂತಹ ಪ್ರಯೋಗಗಳು ನಡೆದಿವೆಯಾದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈಗ ಅಮೆರಿಕ, ಚೀನ, ಜಪಾನ್‌ ಮತ್ತು ಬ್ರಿಟನ್‌ ದೇಶಗಳು ಬಾಹ್ಯಾಕಾಶ ಆಧಾರಿತ ಸೌರಶಕ್ತಿ ಯೋಜನೆಗಳತ್ತ ದೃಷ್ಟಿ ಹರಿಸಿವೆ. ಆದರೆ ಬ್ರಿಟನ್‌ನ ಈ ಸೋಲಾರಿಸ್‌ ಯೋಜನೆ ಇಡೀ ವಿಶ್ವದ ಗಮನ ಸೆಳೆದಿದೆ ಮಾತ್ರವಲ್ಲದೆ ಭಾರೀ ನಿರೀಕ್ಷೆ ಮೂಡಿಸಿದೆ.

- ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next