Advertisement

ಮಣಿಪಾಲದಲ್ಲಿ ಅಕ್ರಮ ಚಟುವಟಿಕೆ ತಡೆಗೆ ಆಪರೇಶನ್‌ ಸನ್‌ಸೆಟ್‌ : ಎಸ್‌ಪಿ ವಿಷ್ಣುವರ್ಧನ್‌

06:05 PM Nov 23, 2021 | Team Udayavani |

ಉಡುಪಿ: ಮಾದಕ ವಸ್ತು ಮತ್ತು ವ್ಯಸನಿಗಳ ಮೇಲೆ ನಿಗಾ ಇಡಲು, ಮಹಿಳೆಯರಿಗೆ ಇನ್ನಷ್ಟು ರಕ್ಷಣೆ ಒದಗಿಸಲು ಮಣಿಪಾಲದಲ್ಲಿ ರಾತ್ರಿ 7 ರಿಂದ 11 ಗಂಟೆವರೆಗೆ ಜಿಲ್ಲಾ ಪೊಲೀಸ್‌ ಇಲಾಖೆ “ಆಪರೇಶನ್‌ ಸನ್‌ಸೆಟ್‌’ ಪ್ರಾಯೋಗಿಕ ಬೀಟ್‌ ವ್ಯವಸ್ಥೆ ಆರಂಭಿಸಿದ್ದು, ಅದನ್ನು ಜಿಲ್ಲೆಯ ಇನ್ನುಳಿದ ಪೊಲೀಸ್‌ ಠಾಣೆಗಳಿಗೂ ವಿಸ್ತರಿಸಲಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ್‌ ತಿಳಿಸಿದರು.

Advertisement

ಮಂಗಳವಾರ ಉಡುಪಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಜಾರಿ ಮಾಡಿರುವ ಆಪರೇಶನ್‌ ಸನ್‌ಸೆಟ್‌ ಬೀಟ್‌ನಲ್ಲಿ ನಿರೀಕ್ಷಕರು, ಉಪ ನಿರೀಕ್ಷಕರು, ಮಹಿಳಾ ಪೊಲೀಸ್‌ ಸಿಬಂದಿ ಒಳಗೊಂಡ ತಂಡವು ಗಸ್ತು ತಿರುತ್ತದೆ ಎಂದರು.

ಈಗಾಗಲೆ ಗುರುತಿಸಿರುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಡಗ್ಸ್‌ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಅಕ್ರಮ ಚಟುವಟಿಕೆ, ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವುದು, ಅನುಚಿತ ವರ್ತನೆ, ಮಾದಕ ವಸ್ತುಗಳ ಬಳಕೆ, ಸಾಗಾಟ, ಪೂರೈಕೆ ಸಂಬಂಧ ಇಲಾಖೆಯಿಂದ ಕಾರ್ಯಾಚರಣೆ ವಿಭಿನ್ನವಾಗಿ ನಡೆಯಲಿದೆ ಎಂದು ಹೇಳಿದರು.

ಸದ್ಯ ಆಪರೇಶನ್‌ ಸೆನ್‌ಸೆಟ್‌ ಹಂತಹಂತವಾಗಿ ಜಿಲ್ಲೆಯ ವಿವಿಧ ಪ್ರದೇಶದಲ್ಲಿರುವ ಪೊಲೀಸ್‌ ಠಾಣೆಗಳಿಗೂ ವಿಸ್ತರಸಲಾಗುವುದು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಲು ಮನವಿ ಮಾಡಿದರು.

ಇದನ್ನೂ ಓದಿ : ಬಸ್ ಗೆ ಬೆಂಕಿ : 12 ಮಕ್ಕಳು ಸೇರಿ ನಿದ್ದೆಯ ಮಂಪರಿನಲ್ಲಿದ್ದ 45 ಪ್ರವಾಸಿಗರು ಸಜೀವ ದಹನ

Advertisement

ಟ್ರಾಫಿಕ್‌ ಸಮಸ್ಯೆಗೆ ಶೀಘ್ರ ಪರಿಹಾರ:
ಟ್ರಾಫಿಕ್‌ ಸಮಸ್ಯೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ಕಲ್ಸಂಕ, ಕೆಎಂ ಮಾರ್ಗ, ಮಣಿಪಾಲ, ಶಿರಿಬೀಡು, ಅಂಬಲಪಾಡಿ, ಕರಾವಳಿ ಜಂಕ್ಷನ್‌ನಲ್ಲಿ ವಾರಾಂತ್ಯ, ವಿಶೇಷ ಸಂದರ್ಭಗಳಲ್ಲಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಕಲ್ಸಂಕ ವೃತ್ತಕ್ಕೆ ಕಾಯಕಲ್ಪ ನೀಡುವ ಕೆಲಸವಾಗುತ್ತಿದೆ. ನಗರಸಭೆ ಸಹಕಾರದಿಂದ ಮಣಿಪಾಲ ಸಹಿತ 12 ಕಡೆಗಳಲ್ಲಿ ಅತ್ಯಾಧುನಿಕ ಟ್ರಾಫಿಕ್‌ ಸಿಗ್ನಲ್‌ಗ‌ಳು ಅಳವಡಿಕೆಯಾಗಲಿದೆ ಎಂದರು.

ನಗರದ ಬಹುತೇಕ ವಾಣಿಜ್ಯ ಸಂಕೀರ್ಣಗಳಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಇರುವುದರಿಂದ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ.
ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಹೊಂದಿಲ್ಲದ, ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಿಸದ ವಾಣಿಜ್ಯ ಸಂಕೀರ್ಣದ ಮಾಲಕರ ವಿರುದ್ಧ ಯಾರ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆ ಜತೆಗೆ ಚರ್ಚಿಸಲಿದ್ದೆವೆ. ನೋ ಪಾರ್ಕಿಂಗ್‌ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತದೆ ಎಂದರು.

ಆನ್‌ಲೈನ್‌ ವಂಚನೆ ತತ್‌ಕ್ಷಣ ಮಾಹಿತಿ ನೀಡಿ
ಆನ್‌ಲೈನ್‌ ಮೂಲಕ ಒಟಿಪಿ ವಂಚಿಸಿ ಬ್ಯಾಂಕ್‌ ಖಾತೆಯಿಂದ ಅಕ್ರಮ ಹಣ ವರ್ಗಾಯಿಸಿಕೊಂಡ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ತಡಮಾಡದೆ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬಹುದು. ಜಿಲ್ಲಾ ಕೇಂದ್ರದ ಸೆನ್‌ಪೊಲೀಸ್‌ ಠಾಣೆಗೂ ಬರುವ ಮೊದಲೆ ಹತ್ತಿರದ ಠಾಣೆಗೆ ಮಾಹಿತಿ ನೀಡಿದಲ್ಲಿ ಸ್ಥಳೀಯ ಪೊಲೀಸರು ಸಂಬಂಧಪಟ್ಟ ಬ್ಯಾಂಕ್‌ನ್ನು ಸಂಪರ್ಕಿಸಿ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯಲು ಕ್ರಮ ಕೈಗೊಳ್ಳುತ್ತಾರೆ. ಶೀಘ್ರ ಹಣ ಖಾತೆಗೆ ಮರುಪಾವತಿಯಾಗುವಂತೆ ಮಾಡಲಾಗುತ್ತದೆ. ದೂರು ನೀಡಲು ವಿಳಂಬ ಮಾಡಬಾರದು ಮತ್ತು ಯಾರು ಕೂಡ ಬ್ಯಾಂಕ್‌ ಮತ್ತು ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಲಹೆ ನೀಡಿದರು.

ಯುವಕರಿಗೆ ಎಸ್‌ಪಿ ಕರೆ :
ಜಿಲ್ಲೆಯ ಯುವಕರು ಪ್ರತಿಭಾನ್ವಿತರಾಗಿದ್ದಾರೆ, ಉಡುಪಿಯ ಯುವಕರು ಪೊಲೀಸ್‌ ಇಲಾಖೆ ಸೇರಬೇಕು. ಎಸ್‌ಐ, ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಪ್ರತಿ ವರ್ಷ ನೇಮಕಾತಿ ನಡೆಯುತ್ತಿರುತ್ತದೆ. ಉತ್ತಮ ಓದಿನ ಜತೆಗೆ, ಪರೀಕ್ಷೆಗೆ ತಯಾರಿ ನಡೆಸಬೇಕು. ಈ ಹುದ್ದೆಗಳು ಸಾಮಾಜಿಕ ಘನತೆ ಜತೆಗೆ ಉತ್ತಮ ವೇತನ, ಸೌಲಭ್ಯಗಳನ್ನು ಹೊಂದಿದೆ. ಇಲಾಖೆ ಸೇರಲು ಬೇಕಾದ ಮಾರ್ಗದರ್ಶನ ನೀಡಲು ಜಿಲ್ಲಾ ಪೊಲೀಸ್‌ ಇಲಾಖೆ ಸದಾ ಸಿದ್ಧವಿದೆ ಎಂದು ಜಿಲ್ಲೆಯ ಯುವಕರಿಗೆ ಪೊಲೀಸ್‌ ಇಲಾಖೆ ಸೇರಲು ಕರೆ ಕೊಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next