Advertisement

ಅಕ್ರಮ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ

12:30 AM Mar 02, 2019 | |

ಉಡುಪಿ: ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ನೂತನ ಎಸ್‌ಪಿ ನಿಶಾ ಜೇಮ್ಸ್‌ ಭರವಸೆ ನೀಡಿದ್ದಾರೆ.

Advertisement

ಶುಕ್ರವಾರ ನೇರ ಪೊಲೀಸ್‌ ಫೋನ್‌-ಇನ್‌ ಕಾರ್ಯಕ್ರಮದಲ್ಲಿ  ಅಕ್ರಮ ಮರಳುಗಾರಿಕೆ ಕುರಿತಾದ ದೂರು ಕರೆಗೆ ಪ್ರತಿಕ್ರಿಯಿಸಿದ ಅವರು, “ಅಕ್ರಮ ಮರಳುಗಾರಿಕೆಯನ್ನು ತಡೆಯಲು ಪೊಲೀಸರಿಗೆ ಅಧಿಕಾರವಿದೆ. ಈಗಾಗಲೇ ಜಿಲ್ಲೆಯಲ್ಲಿ ಇದರ ವಿರುದ್ಧ ಪೊಲೀಸ್‌ ತಂಡ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಲಯದ ಇತ್ತೀಚಿನ ನಿರ್ದೇಶನದಂತೆ ಪೊಲೀಸರು ಅಕ್ರಮ ಮರಳು ಸಾಗಾಟ ವಾಹನಗಳನ್ನು ವಶಪಡಿಸಿದ ಅನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನ್ಯಾಯಾಲಯಕ್ಕೆ ವರದಿ ಒಪ್ಪಿಸುವ ಪ್ರಕ್ರಿಯೆ ನಡೆಸಲಿದೆ’ ಎಂದು ಹೇಳಿದರು.

ಬೀಟ್‌ ಪೊಲೀಸರಿಗೆ ಜವಾಬ್ದಾರಿ
ಇತ್ತೀಚೆಗೆ ಹೊಸ ಬೀಟ್‌ ವ್ಯವಸ್ಥೆ ಜಾರಿಗೆ ಬಂದ ಅನಂತರ ಆಯಾ ಪ್ರದೇಶದ ಬೀಟ್‌ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಅವರಿಂದ ಅಸಾಧ್ಯವಾದುದನ್ನು ಠಾಣೆ, ಜಿಲ್ಲಾ ಮಟ್ಟದಲ್ಲಿ ನಿಭಾಯಿಸಲಾಗುತ್ತಿದೆ. ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ನಿಶಾ ಜೇಮ್ಸ್‌ ತಿಳಿಸಿದರು.

ಒಂದು ಕಾರಿನ ನಂಬರ್‌ ಇನ್ಯಾವುದೋ ಕಾರಿಗೆ 
“ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷರು ತಮ್ಮ ಕಾರಿಗೆ ಬೇರೆ ಕಾರಿನ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡಿದ್ದಾರೆ’ ಎಂದು ವ್ಯಕ್ತಿಯೋರ್ವರು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಎಸ್‌ಪಿ ಸೂಚಿಸಿದರು. ಉದ್ಯಾವರದಲ್ಲಿ ಧ್ವನಿವರ್ಧಕದಿಂದ ಆಗುತ್ತಿರುವ ತೊಂದರೆ ಬಗ್ಗೆ ಓರ್ವರು ದೂರಿದರು. 

ರೇಷನ್‌ ಅಕ್ಕಿ ಮಾರಾಟ
ಬೈಂದೂರಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಸಿಗುವ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿ
ಸಲೆಂದೇ ತಿಂಗಳಿಗೊಮ್ಮೆ ಕೆಲವು ಮಂದಿ ಬರುತ್ತಾರೆ ಎಂದು ಓರ್ವರು ದೂರಿದರು. ಈ ಫೋನ್‌-ಇನ್‌ನಲ್ಲಿ ಮೂವರು ಮಹಿಳೆಯರು ಕರೆ ಮಾಡಿದರು.
 
ರಸ್ತೆ ಸಂಚಾರ ಅವ್ಯವಸ್ಥೆ
ಈ ಬಾರಿಯೂ ರಸ್ತೆ ನಿಯಮ ಉಲ್ಲಂಘನೆ ಬಗ್ಗೆ ಅಧಿಕ ದೂರುಗಳು ಬಂದವು.  
– ಉಡುಪಿ ನಗರ ಭಾಗದ ರಾ.ಹೆ.ಯಲ್ಲಿ ಸರ್ವೀಸ್‌ ರಸ್ತೆಯಲ್ಲಿ ವಾಹನ ನಿಲುಗಡೆ, ವೇಗವಾಗಿ ವಾಹನ ಓಡಿಸುತ್ತಾರೆ.  
– ಹಿರಿಯಡಕ ಜಂಕ್ಷನ್‌ನಲ್ಲಿ ಬಸ್‌ಗಳನ್ನು ಬಸ್‌ನಿಲ್ದಾಣದ ಹೊರಗೆ ನಿಲ್ಲಿಸಲಾಗುತ್ತಿದೆ. ಸಿಗ್ನಲ್‌ ನೀಡದೇ ಏಕಾಏಕಿ ಬಸ್‌ ನಿಲುಗಡೆ; ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಮಾಲಕರಿಗೆ ತಿಳಿಸಲಾಗುವುದು ಮುಂದುವರಿದರೆ ಆರ್‌ಟಿಒ ಮೂಲಕ ಕ್ರಮ ಕೈಗೊಳ್ಳಲಾಗುವುದು’ ಎಂದರು.
– ಉಡುಪಿಯ ವಿವಿಧೆಡೆ ರಸ್ತೆಯಲ್ಲೇ ಕಾರು ಪಾರ್ಕಿಂಗ್‌ ಕುರಿತಾದ ದೂರಿಗೆ ಸ್ಪಂದಿಸಿದ ಎಸ್‌ಪಿ “ಕಾರ್‌ ಲಾಕಿಂಗ್‌ಗಳನ್ನು ಬಳಸಲಾಗುವುದು. ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
– ಉಡುಪಿಯ ಖಾಸಗಿ ಬಸ್‌ಗಳ‌ಲ್ಲಿ ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಸೀಟನ್ನು ಬಿಟ್ಟು ಕೊಡಲಿಲ್ಲ ಎಂದು ಓರ್ವರು ದೂರಿದರು.
– ತೆರೆದ ಲಾರಿಗಳಲ್ಲಿ ಮಣ್ಣು ಸಾಗಿಸುವ ಲಾರಿಗಳ ಕುರಿತಾದ ದೂರಿಗೆ ಸ್ಪಂದಿಸಿದ ಎಸ್‌ಪಿ “ಇಂತಹ ಸಾಮಗ್ರಿ ಸಾಗಿಸುವಾಗ ಟಾರ್ಪಾಲ್‌ಗ‌ಳಿಂದ ಮುಚ್ಚಬೇಕೆಂಬ ನಿಯಮವಿದೆ. ನಿಯಮ ಮೀರಿದರೆ ಪ್ರಕರಣ ದಾಖಲಿಸುತ್ತೇವೆ’ ಎಂದರು. 
– “ರಾ.ಹೆದ್ದಾರಿ 66ರ ಉದ್ಯಾವರ- ಬಲಾಯಿ ಪಾದೆಯ ಪೆಟ್ರೋಲ್‌ ಪಂಪ್‌ ಸಮೀಪದಿಂದ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿವೆ. ಬಸ್‌ನವರು ಕೂಡ ಕೈ ತೋರಿಸಿದಲ್ಲಿ ನಿಲ್ಲಿಸುತ್ತಿದ್ದಾರೆ’ ಎಂಬ ದೂರುಕರೆ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ “ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಸ್‌ನವರು ಪರವಾನಿಗೆ ಪಡೆಯುವಾಗ ಯಾವ ನಿಲ್ದಾಣಗಳಲ್ಲಿ ನಿಲ್ಲಿಸಲು ಪರವಾನಿಗೆ ಪಡೆಯುತ್ತಾರೋ ಅಲ್ಲಿ ಮಾತ್ರ ನಿಲ್ಲಿಸಬೇಕು. ಉಲ್ಲಂಘನೆಯಾದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
– ಬಸ್‌ಗಳ ಒಳಗೆ ಕೂಡ ಬಸ್‌ನ ನಂಬರ್‌ನ್ನು ಪ್ರದರ್ಶಿಸಬೇಕು ಎಂಬ ನಿಯಮವನ್ನು ಪಾಲಿಸ ಲಾಗುತ್ತಿಲ್ಲ ಎಂದು ಸಂತೆಕಟ್ಟೆಯ ಮಹಿಳೆಯೋರ್ವರು ಹೇಳಿದರು.

Advertisement

ಮಟ್ಕಾ : ಐವರ ಬಂಧನ 
ಫೆ. 8ರಿಂದ  28ರ ವರೆಗೆ ಜಿಲ್ಲೆಯಲ್ಲಿ 5 ಮಟ್ಕಾ ಪ್ರಕರಣಗಳಲ್ಲಿ 5 ಮಂದಿಯನ್ನು, 4 ಇಸ್ಪೀಟು ಪ್ರಕರಣಗಳಲ್ಲಿ 24 ಮಂದಿಯನ್ನು, 3 ಅಕ್ರಮ ಮದ್ಯ ಪ್ರಕರಣಗಳಲ್ಲಿ 3 ಮಂದಿಯನ್ನು ಹಾಗೂ 8 ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಕೋಟಾ³ ಕಾಯಿದೆಯಡಿ 109 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿರುವ 35 ಮಂದಿಯ ವಿರುದ್ಧ, ಕರ್ಕಶ ಹಾರ್ನ್ ಬಳಕೆ ಮಾಡಿದ 520 ಮಂದಿ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದ 132 ಮಂದಿ ವಿರುದ್ಧ, ಹೆಲ್ಮೆಟ್‌ ರಹಿತ ಬೈಕ್‌ ಸವಾರಿ ಮಾಡಿರುವ 3,249 ಮಂದಿ ವಿರುದ್ಧ, ಅತೀ ವೇಗದ ಚಾಲನೆಗೆ 140 ಮಂದಿ ವಿರುದ್ಧ ಹಾಗೂ ಇತರ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ 7001 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next