ಹರಿಹರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಭಾನುವಾರ ನಗರದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದರು.
ಸಿಪಿಐ ಕಚೇರಿ ಆವರಣದಲ್ಲಿದ್ದ ನಗರ ಪೊಲೀಸ್ ಠಾಣೆ ಕಟ್ಟಡ ಶಿಥಿಲ ಗೊಂಡಿರುವುದರಿಂದ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಆಗಿ ನಿರ್ಮಾಣ ಏಜೆನ್ಸಿ ಸಹ ಫಿಕ್ಸ್ ಆಗಿದೆ. ಆದರೆ ಅಲ್ಲಿ ಠಾಣೆ ನಿರ್ಮಿಸಿದರೆ ಸಿಬ್ಬಂದಿ ವಾಹನ, ಜಪ್ತು ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆ ಇದೆ ಎಂಬ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ದಾವಣಗೆರೆ ಪಾಲಿಕೆ ಹಳೆ ನೀರು ಸರಬರಾಜು ಕೇಂದ್ರ ಹಾಗೂ ಹರಪನಹಳ್ಳಿ ರಸ್ತೆ ಹಳೆ ಜೆಎಂಎಫ್‌ಸಿ ನ್ಯಾಯಾಲಯದ ಆವರಣವನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಎಸ್‌ಪಿ ಮಾತನಾಡಿ, ಪಾಲಿಕೆ ನೀರು ಸರಬರಾಜು ಕೇಂದ್ರದ ಜಾಗ ನಗರದಿಂದ ದೂರವಾಗುತ್ತದೆ. ಗಾಂಧಿ ವೃತ್ತಕ್ಕೆ ಹೊಂದಿಕೊಂಡಿರುವ ಹಳೆ ಜೆಎಂಎಫ್‌ಸಿ ಕೋರ್ಟ್ ಆವರಣ ನಗರದ ಹೃದಯಭಾಗದಲ್ಲಿದೆ. ಪೊಲೀಸ್ ಠಾಣೆ ಇಲ್ಲಿದ್ದರೆ ನೊಂದವರ ನೆರವಿಗೆ ಆದಷ್ಟು ಶೀಘ್ರ ಧಾವಿಸಲು ಅನುಕೂಲವಾಗುತ್ತದೆ. ನಗರಸಭೆಗೆ, ಶಾಸಕರಿಗೆ ಈ ಜಾಗವನ್ನು ಠಾಣೆಗೆ ನೀಡಲು ಕೋರಲಾಗುವುದು ಎಂದರು.
ಸಿಪಿಐ ಐ.ಎಸ್. ಗುರುನಾಥ್ ಮಾತನಾಡಿ, ಸಿಪಿಐ ಕಚೇರಿ ಆವರಣದಲ್ಲಿ ಠಾಣೆ ನಿರ್ಮಿಸಿದರೆ ಮಿನಿ ವಿಧಾನಸೌಧದ ಸ್ಥಿತಿ ಬರುತ್ತದೆ. ಅಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದೆ ಸಿಬ್ಬಂದಿ ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ತರಾತುರಿಯಲ್ಲಿ ಠಾಣೆ ನಿರ್ಮಿಸಿದರೆ ಕೆಲವೇ ವರ್ಷದಲ್ಲಿ ಹೊಸದಾದ ವಿಶಾಲ ಜಾಗ ಹುಡುಕಿ ಮತ್ತೆ ಅನುದಾನ ತಂದು ಕಟ್ಟಡ ನಿರ್ಮಿಸಬೇಕಾಗುತ್ತದೆ. ಸ್ವಲ್ಪ ತಡವಾದರೂ ಆದಷ್ಟು ಬೇಗ ಸೂಕ್ತ ಸ್ಥಳ ಹುಡುಕಿ ಠಾಣೆ ನಿರ್ಮಿಸುವುದು ಒಳಿತು ಎಂದರು. ಪಿಎಸ್‌ಐಗಳಾದ ಪ್ರಭು ಕೆಳಗಿನಮನೆ, ರವಿಕುಮಾರ್ ಡಿ. ಇತರರಿದ್ದರು.