Advertisement

ಜಿಲ್ಲೆಯಲ್ಲಿ 1.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

01:58 PM May 06, 2020 | mahesh |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಹಲವು ದಿನಗಳಿಂದ ಮಳೆರಾಯ ಕೃಪೆ ತೋರುತ್ತಿದ್ದಂತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಈ ಬಾರಿ ಕೃಷಿ
ಇಲಾಖೆ ಜಿಲ್ಲೆಯಲ್ಲಿ 1,40,900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ಶಾಶ್ವತ ನೀರಾವರಿ ಸೌಲಭ್ಯಗಳು ಇಲ್ಲದ ಜಿಲ್ಲೆಯಲ್ಲಿ ಮಳೆ ಅಶ್ರಿತ ಖುಷ್ಕಿ ಬೇಸಾಯವೇ ಪ್ರಧಾನವಾಗಿದ್ದು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ನೆಲ ಗಡಲೆ, ತೊಗರಿ, ಅವರೆ, ಅಲಸಂಧೆ, ಮುಸುಕಿನ ಜೋಳ, ಹುರುಳಿ, ರಾಗಿ ಮತ್ತಿತರ ಪ್ರಮುಖ ಬೆಳೆಗಳನ್ನು ಬೆಳೆಯುವುದು ವಾಡಿಕೆ ಆಗಿದೆ.

Advertisement

1,40,900 ಹೆಕ್ಟೇರ್‌ ಗುರಿ: ಕೃಷಿ ಇಲಾಖೆ ಈ ವರ್ಷ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 1,40,900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಕಳೆದ ವರ್ಷಕ್ಕೆ
ಹೋಲಿಸಿದರೆ ಸುಮಾರು 14 ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆ ಆಗಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಒಟ್ಟು 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗುತ್ತಿತ್ತು. ಆದರೆ ಈ ವರ್ಷ 1,40,900 ಹೆಕ್ಟೇರ್‌ ಬಿತ್ತನೆ ಪ್ರದೇಶದ ಗುರಿ ಹೊಂದಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸ ಗೊಬ್ಬರಗಳ ಶೇಖರಣೆಗೆ ಮುಂದಾಗಿದ್ದು, ಜಿಲ್ಲೆಗೆ ಅವಶ್ಯಕವಾದ ಬಿತ್ತನೆ ಬೀಜ, ರಸ ಗೊಬ್ಬರ ಬೇಡಿಕೆ ಪಟ್ಟಿಯನ್ನು ಕೃಷಿ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.

ಮೇ 15ರ ನಂತರ ಬಿತ್ತನೆ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಬೇಕಾದ ರೀತಿಯಲ್ಲಿ ತಮ್ಮ ಹೊಲಗಳನ್ನು ಹದ ಮಾಡುವ
ಕಾರ್ಯದಲ್ಲಿ ತೊಡಗಿದ್ದಾರೆ. ಸಹಜವಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಮೇ 15 ರ ನಂತರ ವಾಡಿಕೆಯಂತೆ ಆರಂಭಗೊಳ್ಳಲಿದೆ.

ಮೊದಲಿಗೆ ನೆಲಗಡಲೆ, ತೊಗರಿ ಆರಂಭ ಗೊಂಡರೆ ಜೂನ್‌, ಜುಲೈ ತಿಂಗಳಲ್ಲಿ ರಾಗಿ, ಹುರುಳಿ ಬಿತ್ತನೆ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ಈ ವರ್ಷ 1,40,900 ಹೆಕ್ಟೇರ್‌
ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಅದರಂತೆ ಜಿಲ್ಲೆಯ ರೈತರಿಗೆ ಅವಶ್ಯಕವಾದ ರಸಗೊಬ್ಬರ, ಬಿತ್ತನೆ ಬೀಜಗಳ ದಾಸ್ತಾನುಗೆ ಕೃಷಿ ಇಲಾಖೆ ಅಗತ್ಯ ಕ್ರಮ
ಕೈಗೊಂಡಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರೂಪಾ ತಿಳಿಸಿದ್ದಾರೆ.

● ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next