ಕೊಪ್ಪಳ: ಮೆಕ್ಕೆಜೋಳ ಬಿತ್ತನೆಗೆ ಹೆಸರಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ “ಭಾರೀ ದಾಖಲೆ’ ಮೆಕ್ಕೆಜೋಳ ಬಿತ್ತನೆಯಾಗಿದೆ. ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದೇ ವರ್ಷವೇ ಹೆಚ್ಚು ಬಿತ್ತನೆಯಾಗಿದ್ದು, ಫಸಲು ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರ ಸಿಕ್ಕರೆ ಮಾತ್ರ ಅನ್ನದಾತನ ಮೊಗದಲ್ಲಿ ಖುಷಿ ಕಾಣಲಿದೆ.
ಪ್ರಸ್ತುತ ದಿನದಲ್ಲಿ ಜಿಲ್ಲೆಯ ರೈತಾಪಿ ವಲಯ ಮೆಕ್ಕೆಜೋಳದ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದೆ. ಹಲವು ಬೆಳೆ ಬಿಟ್ಟು ಮೆಕ್ಕೆಜೋಳದ ಬಗ್ಗೆ ಆಸಕ್ತಿ ತೋರುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ವಿಜ್ಞಾನಿಗಳು ಮಿಶ್ರ ಬೆಳೆ ಬೆಳೆಯಿರಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಜಾಗೃತಿ ಮೂಡಿಸುತ್ತಿದ್ದರೂ ರೈತರಲ್ಲಿ ಮಾತ್ರ ಮೆಕ್ಕೆಜೋಳದ ಬಗೆಗಿನ ಆಸಕ್ತಿ ಕಡಿಮೆಯಾಗಿಲ್ಲ. ಈ ವರ್ಷ 85 ಸಾವಿರ ಹೆಕ್ಟೇರ್ ಬಿತ್ತನೆ: ಕೃಷಿ ಇಲಾಖೆ ತಾಲೂಕುವಾರು ಮೆಕ್ಕೆಜೋಳ ಬಿತ್ತನೆ ಗುರಿ ನಿಗದಿಪಡಿಸಿದ್ದರೆ ರೈತರು ಗುರಿಗೂ ಮೀರಿ ಸಾಧನೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ತಾಲೂಕಿನಲ್ಲಿ 20,600 ಹೆಕ್ಟೇರ್ ಪ್ರದೇಶ ಗುರಿ ನಿಗದಿ ಪಡಿಸಿದ್ದರೆ, 29,260 ಹೆಕ್ಟೇರ್ ಬಿತ್ತನೆಯಾಗಿದೆ.
ಕುಷ್ಟಗಿ ತಾಲೂಕು-12,200 ಹೆಕ್ಟೇರ್ ಗುರಿಯಿದ್ದರೆ, 24,170 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಯಲಬುರ್ಗಾ ತಾಲೂಕು-12,800 ಹೆಕ್ಟೇರ್ ಗುರಿಯಿದ್ದರೆ, 23,010 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಇನ್ನೂ ಗಂಗಾವತಿ ತಾಲೂಕು-7,300 ಹೆಕ್ಟೇರ್ ಪ್ರದೇಶ ಗುರಿ ನಿಗದಿ ಮಾಡಿದ್ದರೆ, 9,090 ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟಾರೆ ಜಿಲ್ಲಾದ್ಯಂತ 52,900 ಹೆಕ್ಟೇರ್ ಪ್ರದೇಶ ಗುರಿ ನಿಗದಿಪಡಿಸಿದ್ದರೆ ಬಿತ್ತನೆ 85,530 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆಯಾಗಿದೆ. ಅಂದರೆ ಸರಿಸುಮಾರು 1.80 ಲಕ್ಷ ಎಕರೆ ಪ್ರದೇಶ ಮೆಕ್ಕೆಜೋಳ ಬಿತ್ತನೆಯಾಗಿದೆ.
ಮಳೆ ನಿರೀಕ್ಷೆಯಲ್ಲಿ ಹೆಚ್ಚು ಬಿತ್ತನೆ: ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಇದೇ ವರ್ಷ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗುವ ಭರವಸೆಯಿಂದ ರೈತರು ಮೆಕ್ಕೆಜೋಳದ ಬಿತ್ತನೆಗೆ ಆಸಕ್ತಿ ವಹಿಸಿದ್ದರು. ಅದರಂತೆ ಏಪ್ರಿಲ್ ತಿಂಗಳಲ್ಲಿ 23 ಮಿ.ಮೀ ಮಳೆಯಾಗಿದೆ. ಮೇ ನಲ್ಲಿ 74 ಮಿ.ಮೀ, ಜೂನ್‌ನಲ್ಲಿ 89 ಮಿ.ಮೀ, ಜುಲೈನಲ್ಲಿ 190 ಮಿ.ಮೀ, ಆಗಸ್ಟ್ ನಲ್ಲಿ 92 ಮಿ.ಮೀ ಮಳೆ ವರದಿಯಾಗಿದೆ. ಇನ್ನು ಸೆ.14ರ ವರೆಗೂ 35 ಮಿ.ಮೀ ಮಳೆಯಾಗಿದೆ. ಇದೇ ನಿರೀಕ್ಷೆಯಲ್ಲಿ ಹೆಚ್ಚು ಮೆಕ್ಕೆಜೋಳ ಬಿತ್ತನೆಗೆ ಆಸಕ್ತಿ ವಹಿಸಿದ್ದರು ಎನ್ನುವುದು ವಿಜ್ಞಾನಿಗಳ ವಾದ.
ಇನ್ನೂ ಕಳೆದ ವರ್ಷ ಸಜ್ಜೆ ಬಿತ್ತನೆ ಮಾಡಿದ್ದ ರೈತರು ಈ ವರ್ಷ ಮೆಕ್ಕೆಜೋಳದ ಕಡೆ ಆಸಕ್ತಿ ತೋರಿದ್ದಾರೆ. ಇನ್ನು ಕಪ್ಪು ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆಗೆ ಒತ್ತು ನೀಡಲಾಗಿದೆ. ಇದಲ್ಲದೇ ಖಾಲಿ ಇರುವ ಜಮೀನಿನಲ್ಲೂ ಉಳುಮೆ ನಡೆದಿದ್ದು ಮೆಕ್ಕೆಜೋಳ ಬಿತ್ತನೆಯಾಗಿದೆ ಎನ್ನಾತ್ತಾರೆ ಕೃಷಿ ಅಧಿಕಾರಿಗಳು. ಉತ್ತಮ ಫಸಲು: ಈ ಬಾರಿ ಸ್ವಲ ಭಾಗ ಹೊರತುಪಡಿಸಿದರೆ ಉಳಿದೆಡೆ ಉತ್ತಮ ಫಸಲು ಇದೆ. ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದಿದೆ. ಆದರೆ ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ದರ ಸಿಗಬೇಕಿದೆ. ಆಗ ರೈತ ಕಷ್ಟಪಟ್ಟು ಬೆಳೆದಿದ್ದಕ್ಕೂ ಫಲ ಸಿಕ್ಕಂತಾಗಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ ಪಾತಾಳಕ್ಕೆ ಕುಸಿದಿದೆ. ಇದು ರೈತರನ್ನು ಚಿಂತೆಗೀಡು ಮಾಡುವಂತಾಗಿದೆ. ಸರ್ಕಾರ ರೈತರತ್ತ ಆಸಕ್ತಿ ವಹಿಸಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಿದರೆ ರೈತನ ಫಸಲಿಗೂ ಒಂದು ಬೆಲೆ ಸಿಕ್ಕಂತಾಗಿ, ಸಂಕಷ್ಟದಿಂದ ಪಾರಾಗಲಿದ್ದಾನೆ.
ಕಳೆದ ವರ್ಷ ಜಿಲ್ಲೆಯ ರೈತರು ಸಜ್ಜೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಈ ವರ್ಷ ಮೆಕ್ಕೆಜೋಳಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. 85 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಮೆಕ್ಕೆಜೋಳ ಬಿತ್ತನೆಯಾಗಿದೆ. ಮಳೆ ನಿರೀಕ್ಷೆಯಿಂದಾಗಿ ಹೆಚ್ಚು ಬಿತ್ತನೆಯಾಗಿದ್ದು, ಎಲ್ಲೆಡೆ ಫಸಲು ಉತ್ತಮವಾಗಿದೆ. ರೈತರಲ್ಲೂ ಖುಷಿಯಿದೆ.
– ಶಿವಕುಮಾರ, ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ
-ದತ್ತು ಕಮ್ಮಾರ