ಮಂಗಳೂರು, : ದಕ್ಷಿಣ ರೈಲ್ವೇ ಅಧೀನದಲ್ಲಿರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಕೊಂಕಣ ರೈಲ್ವೇ ನಿಗಮದ ಅಧೀನದ
ಲ್ಲಿರುವ ತೋಕೂರು ರೈಲು ನಿಲ್ದಾಣದ ವರೆಗಿನ ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಹಸ್ತಾಂತರಿಸುವುದಕ್ಕೆ ರೈಲ್ವೇ ಮಂಡಳಿಯು 15 ವರ್ಷಗಳ ಹಿಂದೆಯೇ ಒಪ್ಪಿಗೆ ನೀಡಿತ್ತು ಎಂಬ ಮಹತ್ವದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಮಹತ್ವದ ನಿರ್ಧಾರವನ್ನು ಅಧಿಕೃತಗೊಳಿಸಿ ಕೂಡಲೇ ರೈಲ್ವೇ ಮಂಡಳಿ ಅಧಿಸೂಚನೆ ಹೊರಡಿಸುವಂತೆ ರೈಲ್ವೇ ಹೋರಾಟಗಾರರು ಆಗ್ರಹಿಸಿದ್ದಾರೆ.
2003ರಲ್ಲಿ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ನಿತೀಶ್ ಕುಮಾರ್ ಮಂಗಳೂರಿಗೆ ಬಂದಿದ್ದ ಸಂದರ್ಭ ಬಳಕೆದಾರ ಸಂಘಟನೆಗಳ ಪ್ರಬಲ ಆಗ್ರಹ ಪರಿಗಣಿಸಿ ಮಂಗಳೂರಿನಿಂದ ತೋಕೂರು ವರೆಗಿನ ಭಾಗಗಳನ್ನು ನೈಋತ್ಯ ರೈಲ್ವೇ ಜೊತೆ ಸೇರಿಸುವ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದರು. ರೈಲ್ವೇ ಮಂಡಳಿ ಈ ಪ್ರಸ್ತಾವನೆಯನ್ನು ಪರಿಗಣಿಸಿ 2003ರಲ್ಲಿ ಒಪ್ಪಿಗೆ ನೀಡಿತ್ತು.
ಆದರೆ ಆಸಂದರ್ಭದಲ್ಲಿ ಮಂಗಳೂರು – ಹಾಸನ ಬ್ರಾಡ್‌ಗೆàಜ್ ಪರಿವರ್ತನೆ ಕಾಮಗಾರಿ ನಡೆಯುತ್ತಿದ್ದು ಇದು ಪೂರ್ತಿಗೊಂಡ ತತ್‌ಕ್ಷಣ ಗೆಜೆಟ್ ಪ್ರಕಟನೆ ಹೊರಡಿಸಿ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು. ಆದರೂ ಈ ಕಾಮಗಾರಿ 2008ರಲ್ಲಿ ಪೂರ್ಣಗೊಂಡು ರೈಲು ಸಂಚಾರ ಪ್ರಾರಂಭಗೊಂಡಿದ್ದರೂ ಗಜೆಟ್ ನೋಟಿಫಿಕೇಷನ್ ಆಗಲೇ ಇಲ್ಲ.
2014ರಲ್ಲಿ ಪತ್ರ
ನೈಋತ್ವ ರೈಲ್ವೇಗೆ ಸೇರ್ಪಡೆ ನಿರ್ಣಯದ ಗಜೆಟ್ ನೋಟಿಫಿಕೇಶನ್ ಬಾಕಿ ಇರುವ ಕುರಿತು ನೈಋತ್ವ ರೈಲ್ವೇಯ ಮುಖ್ಯ ನಿರ್ವಹಣಾಧಿಕಾರಿಯವರು 2014ರ ಜುಲೈ 2ರಂದು ಮಂಡಳಿಗೆ ಪತ್ರ ಬರೆದು ಜ್ಞಾಪಿಸಿದ್ದರು. ಪ್ರಸ್ತುತ ಮಂಗಳೂರು ಸೆಂಟ್ರಲ್ ದಕ್ಷಿಣ ರೈಲ್ವೇಯ ಕೊನೆಯ ನಿಲ್ದಾಣವಾಗಿದೆ. ಈ ಭಾಗ ದಕ್ಷಿಣ ರೈಲ್ವೇಯ ಅಧೀನದಲ್ಲಿರುವುದರಿಂದ ಮಂಗಳೂರು ಭಾಗದಲ್ಲಿ ರೈಲ್ವೇ ಸೌಲಭ್ಯಗಳ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನೈಋತ್ವ ರೈಲ್ವೇಗೆ ಸೇರ್ಪಡೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಇದಲ್ಲದೆ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ ಮಂಗಳೂರು ರೈಲ್ವೇ ವಿಭಾಗ ಸ್ಥಾಪನೆಗೂ ಹೆಚ್ಚಿನ ಒತ್ತು ಲಭಿಸುವ ಸಾಧ್ಯತೆಗಳಿವೆ.
ಮಂಗಳೂರು ಸೆಂಟ್ರಲ್‌ನಿಂದ ತೋಕೂರು ವರೆಗಿನ ಭಾಗ ನೈಋತ್ಯ ರೈಲ್ವೇಯೊಂದಿಗೆ ವಿಲೀನಕ್ಕೆ ಮಂಡಳಿ ಸಮ್ಮತಿಸಿ 15 ವರ್ಷಗಳು ಸಮೀಪಿಸುತ್ತಿವೆ. ಆದುದರಿಂದ ಮಂಡಳಿ ಇನ್ನೂ ವಿಳಂಬ ಮಾಡದೆ ಕೂಡಲೇ ಗಜೆಟ್ ನೋಟಿಫಿಕೇಶನ್ ಹೊರಡಿಸಿ ಅನುಷ್ಠಾನಿಸುವುದು ಅವಶ್ಯ.
– ಅನಿಲ್ ಹೆಗ್ಡೆ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ