ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸುಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಕ್ಕೆ 16ನೇ ಹಣಕಾಸು ಆಯೋಗದಲ್ಲಿ ಪರಿಹಾರ ನೀಡಬೇಕಾಗಿದೆ. ಭವಿಷ್ಯದ ದೃಷ್ಟಿಯಲ್ಲಿ ಇದು ನಿರ್ಣಾಯಕ ಘಟ್ಟವಾಗಿದ್ದು, ವೈಯಕ್ತಿಕವಾಗಿ ಹಾಗೂ ಒಟ್ಟಾಗಿ ದಕ್ಷಿಣದ ರಾಜ್ಯಗಳು ದನಿ ಎತ್ತಬೇಕಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದ್ದಾರೆ.
ಕೇರಳ ರಾಜ್ಯ ಆಯೋಜಿಸಿದ್ದ ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯಗಳನ್ನು ಗುರುತಿಸುವ ಕೆಲಸವಾಗಬೇಕು. ಕರ್ನಾಟಕ ಸೇರಿ ಕೆಲವು ರಾಜ್ಯಗಳ ತೆರಿಗೆ ಸಂಗ್ರಹ ಹೆಚ್ಚುತ್ತಲೇ ಇದೆ. ಆದರೆ ಈ ರಾಜ್ಯದ ಪಾಲು ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಂದಿನ ಜನ ಗಣತಿ ಆಧರಿಸಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾಗಲಿದೆ. ಇದರಿಂದ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕೇಂದ್ರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಒಂದೆಡೆ ತೆರಿಗೆ ಸಂಗ್ರಹದ ಕೊಡುಗೆ ಹೆಚ್ಚುತ್ತಲೇ ಹೋಗಲಿದೆ, ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಲಿದೆ. ಹೀಗಾಗಿ ಒಟ್ಟಾಗಿ ದನಿ ಎತ್ತುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕದ ತೆರಿಗೆ ಪಾಲನ್ನು ಸಭೆಯ ಗಮನಕ್ಕೆ ತಂದ ಅವರು, 100 ರೂ. ತೆರಿಗೆ ಸಂಗ್ರಹ ಕೇಂದ್ರಕ್ಕೆ ಕಳಿಸಿದರೆ 14-15 ರೂ. ಮಾತ್ರ ವಾಪಸ್ ಬರುತ್ತಿದೆ. ಎಲ್ಲ ರೀತಿಯ ತೆರಿಗೆ ಮೂಲಗಳಿಂದ ಕರ್ನಾಟಕವು 4.5 ಲಕ್ಷ ಕೋಟಿ ರೂ. ವಾರ್ಷಿಕ ಕೇಂದ್ರಕ್ಕೆ ನೀಡುತ್ತಿದೆ. ನಮ್ಮ ತೆರಿಗೆ ಪಾಲು ಶೇ.20-25 ವಾಪಸ್ ಸಿಗುವಂತಾಗಬೇಕು ಎಂದರು.
15ನೇ ಹಣಕಾಸು ಆಯೋಗವು ಕರ್ನಾಟಕ ಸೇರಿ ಹಲವು ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರ ಹಣಕಾಸು ಆಯೋಗದ ಶಿಫಾರಸನ್ನು ಜಾರಿ ಮಾಡಲಿಲ್ಲ.
ಹೆಚ್ಚು ಕೇಳಿದರೆ ನೀವು ಮುಂದುವರಿದ ರಾಜ್ಯಗಳು ನಿಮ್ಮ ಆದಾಯ ನೀವೇ ವೃದ್ಧಿಸಿಕೊಳ್ಳಿ ಎನ್ನುತ್ತಾರೆ. ಜಿಎಸ್ಟಿ ಜಾರಿಯಾದ ಮೇಲೆ ಕೈ ಕಟ್ಟಿಹಾಕಿಸಿಕೊಂಡಂತಾಗಿದೆ. ಜಿಎಸ್ಟಿ ಜಾರಿ ಹಾಗೂ ನಂತರದ ಅವಲೋಕನ ನಡೆಸಿದರೆ ಕರ್ನಾಟಕಕ್ಕೆ ವಾರ್ಷಿಕ 20-22 ಸಾವಿರ ಕೋಟಿ ರೂ.ನಷ್ಟು ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.